ಬೆಳ್ಳಿ ತೆರೆಗೆ ಬರುತ್ತಿದೆ ವಿನಾಯಕ ಬಾಳಿಗಾ ಮರ್ಡರ್ ಮಿಸ್ಟ್ರಿ: ವಿಲನ್ ಯಾರು ಗೊತ್ತೆ?

Most read

ಸಾಮಾಜಿಕ ಕಥಾ ಹಂದರ ಮತ್ತು ಕ್ರೈಂ ಮಿಳಿತಗೊಂಡಿರುವ ಸಿನೇಮಾವೊಂದು ಕನ್ನಡ ಚಲನಚಿತ್ರ ಲೋಕಕ್ಕೆ ಲಗ್ಗೆಯಿಡುತ್ತಿದೆ. ಬಾಳಿಗ ಮರ್ಡರ್ ಮಿಸ್ಟ್ರಿ ಎಂಬ ಸಿನೇಮಾವು ಸಿನಿ ಪ್ರೀಯರ ಕೌತುಕಕ್ಕೆ ಕಾರಣವಾಗಿದೆ.

ಕರಾವಳಿಯಲ್ಲಿ ನಡೆದ ನೈಜ ಘಟನೆ ಆಧರಿತ ಸಿನೇಮಾ ಇದಾಗಿದ್ದು, ಈಗಾಗಲೇ ನಿರ್ದೇಶಕರು, ಸಿನಿ ತಂತ್ರಜ್ಞರು ನ್ಯಾಯಾಲಯದ ದಾಖಲೆಗಳ ಅಧ್ಯಯನದ ಜೊತೆಗೆ ತಯಾರಿ ನಡೆಸಿದ್ದಾರೆ.

2016ರಲ್ಲಿ ನಡೆದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ ಚಿತ್ರಕತೆ-ಸಂಭಾಷಣೆ ಸಿದ್ದಗೊಳಿಸಲಾಗಿದೆ.

ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಹಿಂದೂ ಕಾರ್ಯಕರ್ತರಾಗಿದ್ದರು. ಹಿಂದೂಗಳ ದೇವಸ್ಥಾನ ಸುಧಾರಣೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ವಿನಾಯಕ ಬಾಳಿಗರು ದೇವಸ್ಥಾನವೊಂದರಲ್ಲಿ ದೇವರ ಆಭರಣ ಕಳ್ಳತನ ಮಾಡಿದ್ದ ಹಿಂದುತ್ವ ನಾಯಕ ನರೇಶ್ ಶೆಣೈಯ ಕೃತ್ಯವನ್ನು ಬಯಲಿಗೆಳೆದಿದ್ದರು.

ವಿಠ್ಠಲ ರುಕುಮಾಯಿ ದೇವಸ್ಥಾನದ ಟ್ರಸ್ಟಿಗಳ ಹೆಸರಿನಲ್ಲಿ ನಮೋ ಬ್ರಿಗೇಡ್ ನ ಸ್ಥಾಪಕ ನರೇಶ್ ಶೆಣೈ ಮತ್ತು ಅವರ ಕುಟುಂಬದವರು ದೇವಸ್ಥಾನದ ಆಭರಣಗಳನ್ನು ಬ್ಯಾಂಕ್‌ನಿಂದ ಲಪಟಾಯಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಾರೆ. ಈ ಬಗ್ಗೆ ದೇವಸ್ಥಾನದ ಟ್ರಸ್ಟ್ ಗೆ ವಿನಾಯಕ ಬಾಳಿಗ ಪತ್ರ ಬರೆಯುತ್ತಾರೆ‌.‌ ಹಿಂದುತ್ವವಾದಿ ನರೇಶ್ ಶೆಣೈಯ ಇನ್ನೊಂದು ಮುಖ ಜನರಿಗೆ ತಿಳಿಯುತ್ತಿದ್ದಂತೆ ಜನ ರೊಚ್ಚಿಗೇಳುತ್ತಾರೆ.

ಬಾಳಿಗಾ ಅವರು ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ವಿಠಲ ರುಕುಮಾಯಿ ದೇವಸ್ಥಾನದಿಂದ ರಥಬೀದಿ ವೆಂಕಟರಮಣ ದೇವಸ್ಥಾನಕ್ಕೆ ಬಾಳಿಗಾ ಅವರ ಆರ್ ಟಿಐ ಚಳವಳಿ ವಿಸ್ತಾರಗೊಳ್ಳುತ್ತದೆ‌. ವೆಂಕಟರಮಣ ದೇವಸ್ಥಾನದಲ್ಲಿ ಆರ್ಥಿಕ ಅವ್ಯವಹಾರದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಸಂಗ್ರಹಿಸುತ್ತಾರೆ. ಇಲ್ಲಿ ಸಿಗುವ ಭಯಾನಕ ಮಾಹಿತಿಯಲ್ಲಿ ನರೇಶ್ ಶೆಣೈ ಮತ್ತವನ ನಮೋ ಬ್ರಿಗೇಡ್ ಬಂಡವಾಳ ಬಯಲಾಗುತ್ತದೆ. ಇದರಿಂದ ಹೆದರಿದ ನರೇಶ್ ಶೆಣೈ ಯೋಜನೆ ರೂಪಿಸಿ ಹಿಂದುತ್ವವಾದಿ ಬಾಳಿಗರನ್ನು ಮುಗಿಸಲು ನಿರ್ಧರಿಸುತ್ತಾನೆ. ಅದರಂತೆ ಬಾಳಿಗಾ ಅವರನ್ನು ಮಾರ್ಚ್ 21, 2016 ರಂದು ಕೊಡಿಯಾಲ್‌ಬೈಲ್‌ನಲ್ಲಿರುವ ಅವರ ಮನೆಯ ಸಮೀಪದಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಮ್ಮ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ.

ನರೇಶ್ ಶೆಣೈ ಈ ಕೇಸ್ ನಿಂದ ಬಚಾವಾಗಲು ಏನೇನು ಮಾಡಿದ ? ಹೇಗೆ ಪೊಲೀಸರಿಗೆ ಪತ್ತೆಯಾದ ಎಂಬ ? ಪೊಲೀಸರ ಸಾಕ್ಷಿಗಳು ಏನೇನು ಹೇಳುತ್ತದೆ ಎನ್ನುವ ಭಯಾನಕ ಸ್ಟೋರಿಯೇ “ಬಾಳಿಗ” ಮರ್ಡರ್ ಮಿಸ್ಟ್ರಿ ಕತೆಯ ಸಾರಾಂಶ.

ಈ ಕತೆ ತಿರುವುಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಕೊಲೆಗಾರ ತಾನು ಬಚಾವಾಗಲು ಏನೇನೋ ಮಾಡುತ್ತಾನೆ‌. ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬ ಧಿಡೀರಣೆ ಮಧ್ಯರಾತ್ರಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ‌. ಈ ಮಧ್ಯೆ ವಕೀಲರ ಮಧ್ಯಪ್ರವೇಶ, 16 ಸಾಕ್ಷಿಗಳ ವಿಚಾರಣೆ… ಎಲ್ಲವೂ ರೋಚಕ..!

ಕ್ರೌಡ್ ಫಂಡಿಂಗ್ ಮೂಲಕ ಜನರೆ ಸಿನೇಮಾದ ನಿರ್ಮಾಪಕರಾಗಿದ್ದು, ತಯಾರಿಗಳು ಇನ್ನಷ್ಟೇ ಪ್ರಾರಂಭವಾಗಬೇಕಿದೆ.

More articles

Latest article