ಒಕ್ಕೂಟ ಭಾರತ ಸರ್ಕಾರ ಆಡಳಿತ ಅಂತೆಯೇ ಉದ್ಯೋಗ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಕೊಡದೆ ಇರುವುದು ದಲಿತ ವಿರೋಧಿ ನಡೆಯೂ ಹೌದು. ದಲಿತ ಚಿಂತಕರು ಈ ಬಗ್ಗೆ ಅಷ್ಟಾಗಿ ಗಮನ ಹರಿಸದಿರುವುದು ಸೋಜಿಗವೇ ಸರಿ. ದಲಿತಪರ ಚಿಂತನೆ ಹಾಗೂ ಕನ್ನಡಪರ ಚಿಂತನೆ ಬಹುತೇಕ ಸಮನಾರ್ಥಕ ಪದಗಳೇ ಆಗಿವೆ- ಗಿರೀಶ್ ಮತ್ತೇರ, ಹವ್ಯಾಸಿ ಲೇಖಕರು.
ಹೆಸರಲಗೆ ಅಭಿಯಾನದ ನಂತರ ಶ್ರೀಯುತ ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮತ್ತೊಂದು ದೊಡ್ಡ ಹೋರಾಟ ನಡೆಯುತ್ತಿದೆ. ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕು ಎನ್ನುವ ಹಿನ್ನೆಲೆಯಲ್ಲಿ ಇಂದು (01-07-2024ರಂದು) ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅದು ಹೋರಾಟಕ್ಕೆ ಧುಮುಕಿದೆ. ಖಾಸಗಿ ಉದ್ಯೋಗಗಳು ಬಹಳ ದೊಡ್ಡ ಪ್ರಮಾಣದಲ್ಲಿ ಕನ್ನಡಿಗರ ಕೈತಪ್ಪಿ ಹೋಗುತ್ತಿರುವುದು ನುಂಗಲಾರದ ತುತ್ತಾಗಿದೆ. ಬಹುರಾಷ್ಟ್ರೀಯ ಕಂಪನಿಗಳಿಂದ ಹಿಡಿದು ಸಣ್ಣಸಣ್ಣ ಅಂಗಡಿಗಳ ವ್ಯವಹಾರಗಳವರೆಗೆ ಕರ್ನಾಟಕದ ಹೊರಗಿನವರು ಅತಿಕ್ರಮಿಸಿದ್ದಾರೆ. ಇದರಿಂದ ಕನ್ನಡದ ಮಕ್ಕಳಿಗೆ ಬಹಳ ಅನ್ಯಾಯವಾಗಿದೆ.
ನಾವು ಇದೇ ಸಮಯದಲ್ಲಿ ಒಕ್ಕೂಟ ಭಾರತ ನಡೆಸುವ ಉದ್ಯೋಗ ನೇಮಕಾತಿ ಪರೀಕ್ಷೆಗಳ ಮೂಲಕ ಹೇಗೆ ಕನ್ನಡಿಗರಿಗೆ ವಂಚನೆಯಾಗುತ್ತಿದೆ, ಅಂತೆಯೇ ಕನ್ನಡಿಗರು ಹೇಗೆ ಆ ನೇಮಕಾತಿಗಳಿಂದ ಹೊರಗುಳಿಯುತ್ತಿದ್ದಾರೆ. ಅನ್ಯಭಾಷಿಕರು ಮುಖ್ಯವಾಗಿ ಹಿಂದಿ ಭಾಷಿಕರು ಹೇಗೆ ಆ ಉದ್ಯೋಗಗಳನ್ನು ಹಿಂಬಾಗಿಲಿನಿಂದ ಆಕ್ರಮಿಸುತ್ತಿದ್ದಾರೆ ಎಂಬುದನ್ನೂ ಸಹ ತಿಳಿದುಕೊಳ್ಳಬೇಕಿದೆ.
ಒಕ್ಕೂಟ ಭಾರತದಲ್ಲಿ ಆಯಾ ರಾಜ್ಯಗಳಲ್ಲಿ ಸೃಷ್ಟಿಯಾಗುವ ಹುದ್ದೆಗಳನ್ನು ಆಯಾ ರಾಜ್ಯದವರಿಗೇ ಮೀಸಲಿಡಬೇಕು. ಇದನ್ನು ‘ಎ’ ಯಿಂದ ’ಡಿ’ ವರೆಗಿನ ಎಲ್ಲಾ ಹುದ್ದೆಗಳಿಗೂ ಅನ್ವಯಿಸಬೇಕು. ಸಾಂಸ್ಕೃತಿಕ ವಿನಿಮಯದ ಭಾಗವಾಗಿ ಬೇಕಾದರೆ 5 ರಿಂದ 10 ಶೇ. ಹುದ್ದೆಗಳನ್ನು ಪರಭಾಷಿಕರಿಗೆ ಪರರಾಜ್ಯದವರಿಗೆ ಬಿಟ್ಟುಕೊಡಬಹುದು. ಇದೇ ಒಕ್ಕೂಟ ಧರ್ಮ. ಆಯಾ ರಾಜ್ಯಗಳ ಭಾಷೆಗಳ ಸಂಸ್ಕೃತಿಗಳ ಜನಲಕ್ಷಣವನ್ನು ಉಳಿಸುವ ಪರಿ. ರಾಜ್ಯಗಳ ಸರ್ವತೋಮುಖ ವಿಕಾಸವನ್ನು ಮಾಡುವ ಪರಿ. ಬೇರೆಬೇರೆ ರಾಜ್ಯಗಳಿಂದ ಬರುವ ನೌಕರರು ಬಹುತೇಕ ಅನ್ಯಮನಸ್ಕರಾಗಿ ಕೆಲಸ ಮಾಡುವುದರಿಂದ ಅವರ ನೆಮ್ಮದಿಗೂ ಕೇಡು. ಅಂತೆಯೇ ರಾಜ್ಯದ ಅಭಿವೃದ್ಧಿಗೂ ತೊಡರುಗಾಲಾಗುತ್ತದೆ.
ಒಕ್ಕೂಟ ಭಾರತ ಸರ್ಕಾರ ಬೇರೆಬೇರೆ ಇಲಾಖೆಗಳು ಸೇರಿ ವರ್ಷಕ್ಕೆ ಲಕ್ಷಕ್ಕಿಂತ ಹೆಚ್ಚು ಹುದ್ದೆಗಳನ್ನು ತುಂಬಿಕೊಳ್ಳುತ್ತದೆ. ಈ ಪರೀಕ್ಷೆಗಳು ಬಹುತೇಕ ಹಿಂದಿ ಮತ್ತು ಇಂಗ್ಲೀಷ್ ಮಾಧ್ಯಮಗಳಲ್ಲಿ ನಡೆಯುತ್ತವೆ. ಸಂವಿಧಾನದ ಎಂಟನೇ ಪರಿಚ್ಛೇದವು ಇಪ್ಪತ್ತೆರಡು ಭಾಷೆಗಳಿಗೆ ಮಾನ್ಯತೆ ನೀಡಿದೆ. ಭಾರತ ಸರ್ಕಾರವು ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಒರಿಯ ಹಾಗೂ ಸಂಸ್ಕೃತವೂ ಸೇರಿದಂತೆ ಆರು ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದೆ. ಆದರೆ ಈ ಭಾಷೆಗಳ ಮಾಧ್ಯಮದಲ್ಲಿ ಒಕ್ಕೂಟ ಭಾರತದ ಉದ್ಯೋಗ ಪರೀಕ್ಷೆಗಳನ್ನು ಕೊಡದಿರುವುದು ಸೋಜಿಗವೇ ಸರಿ. ಇದು ಸಂವಿಧಾನದ ಮೂಲಭೂತವಾದ ಸಮಾನತೆಯ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದೇ ಸಮಯದಲ್ಲಿ ಹಿಂದಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಇಲ್ಲ ಎಂಬುದನ್ನು ನೆನಪಿಡಬೇಕು.
ಪ್ರಸ್ತುತ 2011ರಿಂದ ಕೆಳಮಟ್ಟದ (ಕ್ಲರಿಕಲ್ ಹಂತದ) ರೈಲ್ವೆ ಉದ್ಯೋಗ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಕೊಡುತ್ತಿದ್ದಾರೆ. ಇದರಿಂದಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಸ್ವಲ್ಪ ಅನುಕೂಲ ಆಗಿದೆ. 2021-22 ರಿಂದ ಕ್ಲರ್ಕ್ ಮಟ್ಟದ ಬ್ಯಾಕಿಂಗ್ ಪರೀಕ್ಷೆಗಳನ್ನು ಕೊಡಲು ಪ್ರಾರಂಭಿಸಿದ್ದಾರೆ. ಇದರಿಂದ ಆಗಿರುವ ಆಗುತ್ತಿರುವ ಅನುಕೂಲಗಳು ಇನ್ನಷ್ಟೇ ತಿಳಿಯಬೇಕಿದೆ. 2023 ರಿಂದ ಎಸ್.ಎಸ್.ಸಿ ಯವರು (ಸ್ಟಾಫ್ ಸೆಲೆಕ್ಷನ್ ಕಮಿಶನ್) ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಮಟ್ಟದ ಉದ್ಯೋಗ ಪರೀಕ್ಷೆಯನ್ನು ಕನ್ನಡದಲ್ಲಿಯೂ ಕೊಡುವುದಾಗಿ ಅಧಿಸೂಚನೆ ಹೊರಡಿಸಿದ್ದಾರೆ. (ಫೆಬ್ರವರಿ 2023) ಪ್ರಸ್ತುತ CRPF ನಂತಹ ಉದ್ಯೋಗ ನೇಮಕಾತಿ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಕೊಡುತ್ತೇವೆಂದು ಒಕ್ಕೂಟ ಭಾರತ ಸರ್ಕಾರ ಹೇಳಿದೆ. ಇವೆಲ್ಲವೂ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಹಾಗೇ ಒಳ್ಳೆಯ ಬೆಳವಣಿಗೆಗಳೇ ಆಗಿವೆ.
ಇಂದಿಗೂ ಬಹುತೇಕ ಬ್ಯಾಂಕಿಂಗ್ ಪರೀಕ್ಷೆಗಳು, ಎಸ್.ಎಸ್.ಸಿ ಪರೀಕ್ಷೆಗಳು, ಸೇನಾ ನೇಮಕಾತಿ ಪರೀಕ್ಷೆಗಳು, ಎಲ್.ಐ.ಸಿ ನಡೆಸುವ ಉದ್ಯೋಗ ನೇಮಕಾತಿ ಪರೀಕ್ಷೆಗಳು ಇಂಗ್ಲೀಷ್ ಜೊತೆಗೆ ಹಿಂದಿ ಮಾಧ್ಯಮದಲ್ಲಿ ಮಾತ್ರ ಇರುತ್ತವೆ. ಕನ್ನಡವೂ ಸೇರಿದಂತೆ ತಮಿಳು, ತೆಲುಗು, ಮಲೆಯಾಳಂ, ಒರಿಯಾ, ಗುಜರಾತಿ, ಬಂಗಾಳಿ ಮೊದಲಾದ ಭಾರತೀಯ ಭಾಷೆಗಳಲ್ಲಿ ಪ್ರಾಥಮಿಕ ಶಿಕ್ಷಣವೂ ಸೇರಿದಂತೆ ಉನ್ನತ ಶಿಕ್ಷಣವನ್ನು ಪಡೆದವರು ಒಕ್ಕೂಟ ಭಾರತ ನಡೆಸುವ ಉದ್ಯೋಗ ಪರೀಕ್ಷೆಗಳಿಂದ ವಂಚಿತರಾಗುತ್ತಾರೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ತಾಯ್ನುಡಿ ಶಿಕ್ಷಣವನ್ನು ಅಂತೆಯೇ ತಾಯ್ನುಡಿಗಳನ್ನು ಬಲಪಡಿಸುವ ಬಗ್ಗೆ ಮಾತನಾಡುತ್ತದೆ. ಆದರೆ ಪ್ರಸ್ತುತ ಭಾರತೀಯ ಭಾಷಾ ನೀತಿಯಲ್ಲಿರುವ ಇಂತಹ ಹುಳುಕುಗಳನ್ನು ಇಟ್ಟುಕೊಂಡು ಅದು ಸಾಧ್ಯವಾಗುವುದಿಲ್ಲ. ಅದು ಒಳಗೆ ಕ್ಯಾನ್ಸರ್ ಗಡ್ಡೆಯನ್ನು ಬಿಟ್ಟು ಮೇಲೆ ಮುಲಾಮು ಹಚ್ಚಿದಂತಾಗುತ್ತದೆ ಅಷ್ಟೆ.
ಎಸ್.ಎಸ್.ಸಿ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳೂ ಸೇರಿದಂತೆ ಇತರ ಪರೀಕ್ಷೆಗಳ ಪಠ್ಯಕ್ರಮವೇನೂ ರಾಕೆಟ್ ಸೈನ್ಸ್ ಅಲ್ಲ. ಈ ಪರೀಕ್ಷೆಗಳಲ್ಲಿ ಪ್ರಧಾನವಾಗಿ ಸಾಮಾನ್ಯ ಜ್ಞಾನ (General Knowledge), ಸಾಮಾನ್ಯ ಗಣಿತ ಹಾಗೂ ಮಾನಸಿಕ ಸಾಮರ್ಥ್ಯದ (Mental Ebility) ಪ್ರಶ್ನೆಗಳು ಇರುತ್ತವೆ. ಕನ್ನಡಿಗರು ಇಂತಹ ಪ್ರಶ್ನೆಗಳನ್ನು ಕರ್ನಾಟಕ ಸರ್ಕಾರದ ಹಲವಾರು ಉದ್ಯೋಗ ಪರೀಕ್ಷೆಗಳಲ್ಲಿ ಎದರು ಗೊಂಡಿದ್ದಾರೆ. ಆದರೆ ಅಂತಹ ಪ್ರಶ್ನೆಗಳ ಸಂಖ್ಯೆ ಕಡಿಮೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು.
ಇನ್ನೂ ಎಲ್.ಐ.ಸಿ (ಭಾರತೀಯ ಜೀವವಿಮಾ ನಿಗಮ) ಸೇವೆಯೇ ಇದರ ಪ್ರಧಾನ ತತ್ವ ಎಂದು ಹೇಳುತ್ತದೆ. ಆದರೆ ಎಲ್.ಐ.ಸಿಯು ತನಗೆ ಬೇಕಾದ ಉದ್ಯೋಗ ಪರೀಕ್ಷೆಗಳನ್ನು ಕನ್ನಡದಲ್ಲಿ ಕೊಡುತ್ತಿಲ್ಲ. ಬದಲಾಗಿ ಹಿಂದಿ, ಇಂಗ್ಲೀಷ್ ಮಾಧ್ಯಮಗಳಲ್ಲಿ ಮಾತ್ರ ಕೊಡುತ್ತಿದೆ. ಅದು ಕನ್ನಡದಲ್ಲಿ ಪರೀಕ್ಷೆಗಳನ್ನು ಕೊಟ್ಟರೆ ನೆಲಮೂಲದಿಂದ ಬಂದ ಹೆಚ್ಚು ಉದ್ಯೋಗಾಕಾಂಕ್ಷಿಗಳು ಆಯ್ಕೆಯಾಗುತ್ತಾರೆ.
ಆ ಮೂಲಕ ಎಲ್.ಐ.ಸಿಯು ಇನ್ನಷ್ಟು ಸೇವೆಯನ್ನು ವಿಸ್ತರಿಸಬಹುದಾಗಿದೆ. ಇನ್ನಷ್ಟು ಜನಸ್ನೇಹಿ ಆಗಬಹುದಾಗಿದೆ.
ಭಾರತ ಸರ್ಕಾರ ಪ್ರತಿ ವರ್ಷ ಯು ಪಿ.ಎಸ್ ಸಿ ಪರೀಕ್ಷೆಗಳ ಮೂಲಕ ಐ.ಎ.ಎಸ್/ಐ.ಪಿ.ಎಸ್ ಮೊದಲಾದ ಪ್ರಥಮ ಶ್ರೇಣಿಯ ಸಾವಿರಾರು ಹುದ್ದೆಗಳನ್ನು ತುಂಬಿಕೊಳ್ಳುವುದು ಸರಿಯಷ್ಟೆ. ಯು.ಪಿ.ಎಸ್.ಸಿ ಪರೀಕ್ಷೆ ಪಾಸು ಮಾಡುವುದು ಭಾರತದಲ್ಲಿ ಹುಟ್ಟಿದ ಬಹುತೇಕ ಪ್ರತಿಭಾವಂತ ವಿದ್ಯಾರ್ಥಿಗಳ ಕನಸು. ಆದರೆ ಈ ಪರೀಕ್ಷೆಗಳನ್ನು ಪಾಸು ಮಾಡಲು ಪರೀಕ್ಷಾ ಮಾಧ್ಯಮದ ತೊಡಕು ಮೊದಲಿನಿಂದಲೂ ಇದೆ. ಇದು ಒಕ್ಕೂಟ ಭಾರತ ನಡೆಸುವ ಉದ್ಯೋಗ ಪರೀಕ್ಷೆಗಳಲ್ಲಿಯೇ ಕಿರೀಟ ಪ್ರಾಯವಾದುದು. ಅದರ ಪೂರ್ವಭಾವಿ ಪರೀಕ್ಷೆಯು ಹಿಂದಿ ಇಂಗ್ಲೀಷ್ ಮಾಧ್ಯಮಗಳಲ್ಲಿ ಮಾತ್ರ ಇರುತ್ತದೆ. ತುಂಬ ಜನ ಐ.ಎ.ಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಬಹುದು ಎಂದು ತಪ್ಪು ತಿಳಿದಿದ್ದಾರೆ. ಯು.ಪಿ.ಎಸ್.ಸಿ ಪರೀಕ್ಷೆಯು ಮೂರು ಹಂತಗಳಲ್ಲಿ ನಡೆಯುತ್ತದೆ. ಪೂರ್ವಭಾವಿ ಪರೀಕ್ಷೆ (Preliminary), ಮುಖ್ಯ ಪರೀಕ್ಷೆ ಹಾಗು ಸಂದರ್ಶನ. ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಬಹುದು ಎಂಬುದು ನಿಜ. ಆದರೆ ಮೊದಲ ಹಂತದ ಪೂರ್ವಭಾವಿ ಪರೀಕ್ಷೆಯನ್ನೇ ಕನ್ನಡದಲ್ಲಿ ಕೊಡದೆ ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ಕೊಟ್ಟು ಏನು ಪ್ರಯೋಜನ? ದೇವಾಲಯದ ಗೇಟನ್ನು ಉಕ್ಕಿನ ಬೀಗದಿಂದ ಭದ್ರಪಡಿಸಿ ಬಾಗಿಲನ್ನು ತೆರೆದು ಒಳಬನ್ನಿ ಎಂದು ಕರೆದಂತೆ ಆಗುತ್ತದೆ ಅಷ್ಟೆ. ಐ.ಎ.ಎಸ್/ಐ.ಪಿ.ಎಸ್ ಅಧಿಕಾರಿಗಳು ಕಾರ್ಯಾಂಗದ ನಿಜವಾದ ರಾಯಭಾರಿಗಳಾಗಿದ್ದಾರೆ. ಅವರು ನೆಲಮೂಲದ ಸಂಸ್ಕೃತಿಯಿಂದ ಹೊರಹೊಮ್ಮಿದವರಾಗಿರಬೇಕು. ಅವರವರ ಭಾಷೆಗಳಲ್ಲಿಯೇ ಎಲ್ಲಾ ಹಂತದ ಪರೀಕ್ಷೆಗಳನ್ನು ಕೊಟ್ಟಾಗ ಮಾತ್ರ ಅದು ಸಾಧ್ಯವಾಗುತ್ತದೆ. ಅವರಿಗೆ ನೋವುಗಳು ಅರ್ಥವಾಗುತ್ತವೆ. ಸಾಮಾಜಿಕ ನ್ಯಾಯದ ಸಾಕಾರಕ್ಕೆ ನಾಂದಿಯಾಗುತ್ತದೆ. ಇಂದಿನ ಪ್ರಪಂಚಕ್ಕೆ ಬೇಕಾದ ಒಂದು ಪತ್ರಿಕೆ ಇಂಗ್ಲೀಷ್ ಹೇಗೂ ಮುಖ್ಯ ಪರೀಕ್ಷೆಯಲ್ಲಿ ಇದ್ದೇ ಇರುತ್ತದೆ. ಉಳಿದಂತೆ ಎಲ್ಲಾ ಪತ್ರಿಕೆಗಳನ್ನು ಸಂವಿಧಾನ ಮಾನ್ಯ ಮಾಡಿರುವ ಭಾರತೀಯ ಭಾಷೆಗಳಲ್ಲಿ ಕೊಡಲಿ. ಈ ಪರೀಕ್ಷೆಯಲ್ಲಿ ಹಿಂದಿಗೆ ಇರುವ ಅನುಕೂಲ ಕನ್ನಡಕ್ಕೂ ಇರಬೇಕು.
ಶೋಷಿತ ಜಾತಿ ಸಮುದಾಯಗಳು ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತವಾಗಿವೆ. ಇಂದು ಬಹುತೇಕ ತಾಯ್ನುಡಿಯಲ್ಲಿ ಶಿಕ್ಷಣವನ್ನು ಪಡೆದಿವೆ, ಪಡೆಯುತ್ತಿವೆ. ಇವರಲ್ಲಿ ಹೆಚ್ಚಿನದಾಗಿ ಶಿಕ್ಷಣ ಪಡೆದವರು ಮೊದಲನೇ ತಲೆಮಾರಿನವರು. ಸಾವಿರಾರು ವರ್ಷಗಳಿಂದ ಅವರು ಶಿಕ್ಷಣವಿಲ್ಲದೆ ಅವಕಾಶಗಳಿಂದ ವಂಚಿತರಾಗಿದ್ದರು. ಈಗ ತಾಯ್ನುಡಿಯಲ್ಲಿ ಶಿಕ್ಷಣ ಪಡೆದು ಅವಕಾಶಗಳಿಂದ ವಂಚಿತರಾಗಿದ್ದಾರೆ ವಂಚಿತರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಒಕ್ಕೂಟ ಭಾರತ ಸರ್ಕಾರ ಆಡಳಿತ ಅಂತೆಯೇ ಉದ್ಯೋಗ ಪರೀಕ್ಷೆಗಳನ್ನು ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಕೊಡದೆ ಇರುವುದು ದಲಿತ ವಿರೋಧಿ ನಡೆಯೂ ಹೌದು. ದಲಿತ ಚಿಂತಕರು ಈ ಬಗ್ಗೆ ಅಷ್ಟಾಗಿ ಗಮನ ಹರಿಸದಿರುವುದು ಸೋಜಿಗವೇ ಸರಿ. ದಲಿತಪರ ಚಿಂತನೆ ಹಾಗೂ ಕನ್ನಡಪರ ಚಿಂತನೆ ಬಹುತೇಕ ಸಮನಾರ್ಥಕ ಪದಗಳೇ ಆಗಿವೆ.
ಒಕ್ಕೂಟ ಭಾರತ ನಡೆಸುವ ಉದ್ಯೋಗ ಪರೀಕ್ಷೆಗಳ ವಿಚಾರದಲ್ಲಿ ಆಗಬೇಕಾಗಿರುವುದು ಇಷ್ಟು. ಒಕ್ಕೂಟ ಭಾರತ ನಡೆಸುವ ಎಲ್ಲಾ ನೇಮಕಾತಿ ಪರೀಕ್ಷೆಗಳನ್ನು ಹಿಂದಿಯಲ್ಲಿ ಕೊಟ್ಟಂತೆ ಕನ್ನಡದಲ್ಲಿಯೂ ಕೊಡುವುದು. ಆಯಾ ರಾಜ್ಯಗಳಲ್ಲಿ ಸೃಷ್ಟಿಯಾಗುವ ಹುದ್ದೆಗಳನ್ನು ಆಯಾ ರಾಜ್ಯಗಳಿಗೇ ಮೀಸಲಿಡುವುದು. ಕನ್ನಡದಲ್ಲಿ ಪರೀಕ್ಷೆಗಳನ್ನು ಕೊಡುವಾಗ ಭಾಷೆಯನ್ನು ಆದಷ್ಟು ಸರಳವಾಗಿ ಕೊಡುವುದು. ಇಷ್ಟಾದರೆ ವೈವಿಧ್ಯತೆಯಲ್ಲಿ ಏಕತೆಯ ಭಾರತವನ್ನು ಒಪ್ಪಿ ಭಾರತ್ ಮಾತಾಕಿ ಜೈ ಎನ್ನಬಹುದು!
ಗಿರೀಶ್ ಮತ್ತೇರ, ಹವ್ಯಾಸಿ ಲೇಖಕರು,
ಮೊ: 9164700438