ಕಾಬೂಲ್: ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಜಯಿಸುವ ಮೂಲಕ ಅಫಘಾನಿಸ್ತಾನ T-20 ವಿಶ್ವಕಪ್ ಸೆಮಿಫೈನಲ್ ತಲುಪುತ್ತಿದ್ದಂತೆ ದೇಶದ ಎಲ್ಲ ಭಾಗಗಳಲ್ಲೂ ಜನರು ಬೀದಿಗಿಳಿದು ನರ್ತಿಸಿದರು, ಹುಚ್ಚೆದ್ದು ಕುಣಿದರು. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಕನಿಷ್ಠ ಒಂದು ಕ್ರಿಕೆಟ್ ಸ್ಟೇಡಿಯಂ ಕೂಡ ಇಲ್ಲದ ದೇಶದ ಆಟಗಾರರು ವಿಶ್ವಕಪ್ ಸೆಮಿಫೈನಲ್ ಗೇರುವುದು ಸಾಮಾನ್ಯದ ಮಾತಲ್ಲ. ಆದರೆ ನಾಲ್ಕು ದಶಕಗಳಿಂದ ಒಂದಿಲ್ಲೊಂದು ಯುದ್ಧ, ಆಂತರಿಕ ಕಲಹ, ರಾಜಕೀಯ ಪಲ್ಲಟಗಳ ನಡುವೆ ಆ ದೇಶದ ಜನರಿಗೆ ಇರುವ ಏಕೈಕ ಮನರಂಜನೆ ಕ್ರಿಕೆಟ್. ಹೀಗಾಗಿ ಜನರು ನಿನ್ನೆಯ ಪಂದ್ಯಕ್ಕಾಗಿ ಕಾತರದಿಂದ ಕಾದಿದ್ದರು. ಹಲವೆಡೆ ದೊಡ್ಡ ಪರದೆ ಅಳವಡಿಸಿ ನೇರ ಪ್ರಸಾರ ನೋಡಲಾಗುತ್ತಿತ್ತು. ಬಾಂಗ್ಲಾದ ಮುಸ್ತಫಿಜುರ್ ರೆಹಮಾನ್ ಅವರನ್ನು ನವೀನ್ ಉಲ್ ಹಕ್ ಲೆಗ್ ಬಿಫೋರ್ ಬಲೆಗೆ ಕೆಡಹುತ್ತಿದ್ದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿತು. ಒಂದಷ್ಟು ಜನರು ಆಕಾಶಕ್ಕೆ ಗುಂಡು ಹಾರಿಸಿ ಸಂಭ್ರಮಪಟ್ಟರು. ಪರಸ್ಪರ ಸಿಹಿ ಹಂಚಿ ಶುಭಾಶಯ ಕೋರಲಾಯಿತು.
ಕಾಬೂಲ್ ನಿಂದ ಕಂದಹಾರ್ ವರೆಗೆ, ಖೋಸ್ಟ್ ನಿಂದ ಲಾಘ್ಮನ್ ವರೆಗೆ ಎಲ್ಲೆಡೆ ಸಂಭ್ರಮಾಚರಣೆಗೇನು ಕೊರತೆ ಇರಲಿಲ್ಲ.
ಅಫಘಾನಿಸ್ತಾನದಲ್ಲಿ ಈಗ ತಾಲಿಬಾನ್ ಸರ್ಕಾರವಿದೆ. ಅಮರಿಕ ಪಡೆಗಳು ಅಫಘಾನಿಸ್ತಾನ ತೊರೆದ ನಂತರ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕ್ರಿಕೆಟ್ ವಿಷಯದಲ್ಲಿ ತಾಲಿಬಾನ್ ಗೂ ವಿಶೇಷ ಅಕ್ಕರೆ.
ಹೀಗಾಗಿ ತಾಲಿಬಾನ್ ಸರ್ಕಾರದ ಮಂತ್ರಿಯೇ ಅಫ್ಘನ್ ನಾಯಕ ರಶೀದ್ ಖಾನ್ ಗೆ ವಿಡಿಯೋ ಕಾಲ್ ಮಾಡಿ ಅಭಿನಂದಿಸಿದ್ದಾರೆ. ಅಫಘಾನಿಸ್ತಾನದ ವಿದೇಶಾಂಗ ಸಚಿವ ಮಲ್ವಾವಿ ಅಮೀರ್ ಖಾನ್ ಎಕ್ಸ್ ನಲ್ಲಿ ಪೋಸ್ಟ್ ಹಾಕಿ ಎಲ್ಲ ಆಟಗಾರರನ್ನು ಅಭಿನಂದಿಸಿದ್ದಲ್ಲದೆ ರಶೀದ್ ಜೊತೆ ಮಾತಾಡಿ ಸಂತಸ ಹಂಚಿಕೊಂಡಿದ್ದಾರೆ.
ಅಫಘಾನಿಸ್ತಾನ ತಂಡ ಐಸಿಸಿ ಟೂರ್ನಿಗಳಲ್ಲಿ ಮೊದಲ ಬಾರಿ ನಾಲ್ಕರ ಘಟ್ಟಕ್ಕೆ ತಲುಪಿರುವುದು ಈ ಸಂತೋಷ, ಸಂಭ್ರಮಕ್ಕೆ ಕಾರಣ. ಸೆಮಿಫೈನಲ್ ತಲುಪಿದ್ದೇವೆ, ದೇವರ ಆಶೀರ್ವಾದದಿಂದ ಫೈನಲ್ ಗೆಲ್ಲುತ್ತೇವೆ ಎಂದು ಅಫ್ಘನ್ ನಾಗರಿಕರು ಹೇಳುತ್ತಿದ್ದಾರೆ.
ಅಫಘಾನಿಸ್ತಾನ ತಂಡ ಜೂನ್ 27 ರಂದು ನಡೆಯಲಿರುವ ಸೆಮಿಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.