ನಾನು ಕೂಡ ಇಂಗ್ಲಿಷ್ ಮೀಡಿಯಂ ಸ್ಕೂಲ್‌ ನಲ್ಲೇ ಓದಬೇಕಿತ್ತು

Most read

ಡಿಗ್ರಿ ಮುಗಿಸಿರೋರು competitive ಎಕ್ಸಾಮ್ ಓದ್ತಾರೆ. SDA, FDA, PC, PSI ಎಕ್ಸಾಮ್ ನಲ್ಲಿರೋ ಇಂಗ್ಲಿಷ್ ಪೇಪರ್ ಪಾಸ್ ಮಾಡ್ಕೋಳೋಕೆ ಆಗದೇ ಒದ್ದಾಡ್ತಿದಾರೆ. ನಿಮ್ಗ್ ಗೊತ್ತಿರಲಿಕ್ಕಿಲ್ಲ, ಎಷ್ಟು ಜನ ವಿದ್ಯಾರ್ಥಿಗಳು ಇಂಗ್ಲಿಷ್ ಪೇಪರ್ ಪಾಸ್ ಮಾಡ್ಕೋಳೋಕೆ ಆಗದೇ ಓದೋದನ್ನೇ ನಿಲ್ಲಿಸ್ತಾರೆ ಅಂತ! – ದಿವ್ಯಶ್ರೀ ಅದರಂತೆ, ಇಂಗ್ಲಿಷ್‌ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ.

ನಾಲ್ಕೈದು ವರ್ಷದಿಂದ ನಾನು ಕೂಡ ಇಂಗ್ಲಿಷ್ ಮೀಡಿಯಂ ಸ್ಕೂಲ್‌ ನಲ್ಲೇ ಓದಬೇಕಿತ್ತು ಅಂತ ಯೋಚ್ನೆ ಮಾಡದ ದಿನಾನೇ ಇಲ್ಲಾ. ಯಾಕಂದ್ರೆ ಈ ಇಂಗ್ಲಿಷ್ ಅನ್ನೋದು ನನ್ನ ಬದುಕಲ್ಲಿ ಇನ್ನು ಸಹಿಸೋಕೆ ಆಗೋದೇ ಇಲ್ಲಾ ಅನ್ನೋವಷ್ಟು ಆಟ ಆಡಿ ಬಿಟ್ಟಿದೆ.

ನಾನು ಡಿಗ್ರಿ ಯರೆಗೂ ಓದಿದ್ದು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲೇ. ಮತ್ತೆ ಅಪ್ಪಟ ಕನ್ನಡ ಮೀಡಿಯಂ ನಲ್ಲೇ. ಕನ್ನಡ ಮೀಡಿಯಂ ಓದಿದ್ದಕ್ಕೆ ಬೇಜಾರಿಲ್ಲ. ಆದ್ರೆ ಆ ಶಾಲೆಗಳಲ್ಲಿ ನಂಗೆ ಇಂಗ್ಲಿಷ್ ಕಲಿಸದೇ ಇದ್ದಿದ್ದಕ್ಕೆ ಮತ್ತೆ ಕಲಿಯೋಕೆ ಒಂದ್ ಚಿಕ್ ಅವಕಾಶ ಕೂಡ ಸಿಗದೇ ಇರೋದಕ್ಕೆ ಅಸಹಾಯಕತೆ ಜೊತೆಗೆ ಅಸಹನೆ ಇದೆ.

ನಂಗೆ 10 ನೇ ಕ್ಲಾಸ್ ವರೆಗೂ ಯಾವ ಸಬ್ಜೆಕ್ಟ್ ಕೂಡ ಕಷ್ಟ ಅನ್ನಿಸಲೇ ಇಲ್ಲಾ. ಇಂಗ್ಲಿಷ್ ಅರ್ಥ ಆಗದೇ ಇದ್ರು ಹೆಂಗೋ ಬಾಯಿಪಾಠ ಮಾಡಿ, ಗಟ್ಟು ಹೊಡೆದು 10 th ಪಾಸ್ ಆಗಿ, total 90% result ಬಂದಿತ್ತು. ಮಗಳು ಮುಂದೆ ಚೆನ್ನಾಗಿ ಓದಿ  ದೊಡ್ಡ ಕೆಲಸ ತಗೊಳ್ಳಿ ಅಂತಾನೋ ಅಥವಾ ಪ್ರೆಸ್ಟೀಜ್ ಪ್ರಶ್ನೆ ಅಂತಾನೋ ಮನೇಲಿ ಎಲ್ಲರೂ ಡಿಸೈಡ್ ಮಾಡಿ ಪಿಯುಸಿ ಸೈನ್ಸ್ ಕೊಡಿಸಿದ್ರು.

ಕಾಲೇಜಿನ ಮೊದಲನೇ ದಿನ ನಿಜಕ್ಕೂ ಚೆನ್ನಾಗಿ ಇತ್ತು. ಅದೇ ಹುಮ್ಮಸ್ಸಲ್ಲಿ ಬಂದು biology ಬುಕ್ ತೆಗೆದು ಓದೋಕೆ ಶುರು ಮಾಡಿದೆ. ಅದ್ರಲ್ಲಿದ್ದ ಸೆಂಟೆನ್ಸ್ ಕತೆ ಇರ್ಲಿ, ಒಂದ್ ಪದನು ಅರ್ಥ ಆಗ್ತಿಲ್ಲ, ಓದೋಕೂ ಬರ್ತಿಲ್ಲ. ನನ್ನ 10 ವರ್ಷದ ಓದಲ್ಲಿ ಆ ಪದಗಳನ್ನೇ ನಾನ್ ಯಾವತ್ತೂ ಕೇಳಿರ್ಲಿಲ್ಲ.

ಅವತ್ತು ರಾತ್ರಿನೇ ಆ ಬುಕ್ ತೆಗೆದಿಟ್ಟು, ನನ್ನತ್ರ ಸೈನ್ಸ್ ಓದೋಕೆ ಸಾಧ್ಯನೇ ಇಲ್ಲಾ ಅಂತ ಮರುದಿನ ಆರ್ಟ್ಸ್ ಗೆ ಚೇಂಜ್ ಮಾಡೋ ನಿರ್ಧಾರ ಮಾಡಿದೆ.  ಅವತ್ತು ನನ್ನ ಮನೆಯವರು ನನ್ನ ಮೇಲಿಟ್ಟಿದ್ದ ನಂಬಿಕೆಗೆ ಮೊದಲ ಪೆಟ್ಟು ಕೊಟ್ಟಿದ್ದೆ.

“ಆರ್ಟ್ಸ್ ತಗೊಂಡು ಓದಿ ಆಮೇಲ್ ಏನ್ ಎಮ್ಮೆ ಕಾಯ್ತಿಯ?

ಆರ್ಟ್ಸ್ ತಗೊಂಡೋರು ಯಾರೂ ಉದ್ಧಾರ ಆಗಿಲ್ಲ.

ಒಹ್ ನೀನು ಆರ್ಟ್ಸ್ ಸ್ಟೂಡೆಂಟ್, ಹಂಗಿದ್ರೆ 10th ಲ್ಲಿ ಜಸ್ಟ್ ಪಾಸ್ ಆಗಿರೋದಾ? ಈಗ ಆರ್ಟ್ಸ್ ಗೆ ಏನೂ ವ್ಯಾಲ್ಯೂ ಇಲ್ಲ, ನೀನು ಪಿಯುಸಿ ಮುಗ್ಸಿ ಸುಮ್ನೆ ಮನೆ ಕೆಲಸ ಮಾಡೋಕೆ ಲಾಯಕ್ಕೂ”. ಹಿಂಗೇ ಆ ಎರಡು ವರ್ಷ ಅವಡುಗಚ್ಚಿ ತಲೆಗೊಂದೊಂದು ಮಾತು ಕೇಳುತ್ತಾ ಬಂದೆ.

PUC ಆರ್ಟ್ಸ್ ತಗೊಂಡು ಕನ್ನಡ ಮೀಡಿಯಂ ಲ್ಲಿ ಓದಿದೆ. ಕನ್ನಡ, ಇತಿಹಾಸ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ ಈ ಐದು ವಿಷಯದಲ್ಲೂ 95 ಮಾರ್ಕ್ಸ್ ಬಂದಿತ್ತು.

ರಾತ್ರಿ ಇಡೀ ನಿದ್ದೆ ಗೆಟ್ಟು, ಎಲ್ಲೋ ಟ್ಯೂಷನ್ ಹೋಗಿ, ಸೈನ್ಸ್ ತಗೊಂಡಿದ್ದ ಹುಡುಗಿಯರ ಹತ್ತಿರ ಇಂಗ್ಲಿಷ್ ಪಾಠ ಹೇಳಿಸಿಕೊಂಡು, ಬಾಯಿಪಾಠ ಮಾಡಿ ಕೊನೆಗೂ ಇಂಗ್ಲಿಷ್ ಲ್ಲಿ 80 ಮಾರ್ಕ್ಸ್ ಬಂದಿತ್ತು.

PUC result ಬಂದಮೇಲೆ ನನ್ನ ಕಾಲೇಜಿನ ಪ್ರಿನ್ಸಿಪಾಲರ ಮಾತಿನಂತೆ ಡಿಗ್ರಿಲಿ ಇಂಗ್ಲಿಷ್ ಮೇಜರ್ ತಗೊಂಡೆ. ಹೆಸರಿಗೆ ಮಾತ್ರ ಇಂಗ್ಲಿಷ್ ಮೇಜರ್ ಆದ್ರೆ ಅಲ್ಲಿಯೂ ಸಹ ಕನ್ನಡ ಮೀಡಿಯಂ ಲ್ಲೇ ಪಾಠ ಆಗ್ತಿತ್ತು. 3 ವರ್ಷ ಹೆಂಗೋ ಓದಿ optional ಇಂಗ್ಲಿಷ್ ಸಬ್ಜೆಕ್ಟ್ ಪಾಸ್ ಮಾಡಿಕೊಂಡೆ.

ಕೊನೆ ವರ್ಷ ಮುಗಿತಿದ್ದ ಹಾಗೇ, ನಾನ್ ಹೆಂಗಾದ್ರೂ ಮಾಡಿ ಇಂಗ್ಲಿಷ್ ಕಲೀಲೇ ಬೇಕು ಅನ್ನೋ ಹಠ ಬಂದಿತ್ತು. ಇನ್ನೂ ಊರಲ್ಲೇ ಇದ್ರೆ ಆಗಲ್ಲ ಅಂತ ಬೆಂಗಳೂರು ಕಾಲೇಜ್ ಸೇರೋ ತೀರ್ಮಾನ ಮಾಡಿದೆ.

ಅಲ್ಲಿಂದ ಶುರುವಾಗಿದ್ದು actual game..

” MA ಓದೋಕೆ ಬೆಂಗ್ಳುರು ಹೋಗ್ಬೇಕಾ? “

” ನೀನು ಇಂಜಿನಿಯರ್ ಇಲ್ಲಾ ಡಾಕ್ಟರ್ ಓದ್ತೀನಿ ಅಂದಿದ್ರೆ ಲಕ್ಷಗಟ್ಟಲೆ ಸಾಲ ಮಾಡಿ ಬೇಕಾದ್ರೂ ಓದಿಸ್ತಿದ್ವಿ, ಆದ್ರೆ ನೀನು ಬರೀ MA ಓದೋಕೆ ಬೆಂಗಳೂರು ಹೋಗೋದ್ ನಮ್ಗ್ ಯಾರಿಗೂ ಇಷ್ಟ ಇಲ್ಲಾ. “( ಮನೇಲಿ ಒಕ್ಕೊರಲ ನುಡಿ )

ಆದ್ರು ನನ್ನ ಹಠ ಬಿಟ್ಟಿರ್ಲಿಲ್ಲ, ಗೊತ್ತಿದ್ದವರ ಕೈಯಲ್ಲಿ ಸಾಲ ತಗೊಂಡು, ಮನೇಲಿ ಯಾರಿಗೂ ಹೇಳ್ದೆ ಅಡ್ಮಿಶನ್ ಆದೆ ( ಸೇಂಟ್ ಜೋಸೆಫ್ ಕಾಲೇಜು ).  ಎಜುಕೇಶನ್ ಲೋನ್ ತಗೊಂಡು ತಗೊಂಡ ಸಾಲ ತೀರಿಸಿ, ಪಿಜಿಲಿದ್ದುಕೊಂಡು ಬಾಡಿಗೆ ಕಟ್ಟಿದೆ.

ಬೆಂಗಳೂರ್ ಬಂದಾಯ್ತು!!

ಮೊದಲ ದಿನಾ ಕಾಲೇಜ್ ಕೂಡ ಹೋಗಾಯ್ತು

ಆದ್ರೆ ಕಾಲೇಜಲ್ಲಿ ಯಾರೂ ಕನ್ನಡ ಮಾತಾಡ್ತಿಲ್ಲ.

ನನ್ನ ಕ್ಲಾಸ್ ರೂಮ್ ಎಲ್ಲಿದೆ ಅಂತ ಹೆಂಗೆ ಇಂಗ್ಲಿಷ್ ಲ್ಲಿ ಕೇಳೋದು? ಅದೂ ಗೊತ್ತಿಲ್ಲ.

ಹೆಂಗೋ ಹುಡ್ಕೊಂಡು ಕ್ಲಾಸ್ ರೂಮಿಗೆ ಹೋದೆ. ಅಲ್ಲಿ ಬೇರೇನೇ ಜಗತ್ತು.

ನೀರ್ ಕುಡಿದಂಗೆ ಇಂಗ್ಲಿಷ್ ಮಾತಾಡ್ತಿದಾರೆ, ಆದ್ರೆ ನಂಗೆ ಏನೇನೂ ಅರ್ಥ ಆಗ್ತಿಲ್ಲ. ಹಿಂದೆ ಯಾವುದೋ ಬೆಂಚಲ್ಲಿ ಕೂತು, ಪಾಠ ಕೇಳಿದೆ. ಪ್ರೊಫೆಸರ್ ಇಂಗ್ಲೀಷ್ ಲ್ಲಿ ಪಾಠ ಮಾಡ್ತಿದಾರೆ ಅನ್ನೋದು ಗೊತ್ತಿತ್ತು ಬಿಟ್ರೆ ಯಾವ್ ಪಾಠ, ಏನ್ ಹೇಳ್ತಿದಾರೆ ಏನೂ ಗೊತ್ತಿಲ್ಲ. ಸುಮಾರ್ 6 ತಿಂಗಳು ಯಾರ ಜೊತೆಗೂ ಮಾತಾಡದೆ, ಸುಮ್ಮನೆ ಪಾಠ ಕೇಳಿ, ಅರ್ಥ ಆದೋರಂಗೆ ತಲೆ ಆಡಿಸಿ ಬರ್ತಿದ್ದೆ. ಕ್ಲಾಸ್ ಲಿ ಯಾರನ್ನಾದ್ರೂ ಮುಖ ನೋಡಿ, ನಗಾಡಿಸಿದ್ರೆ, ಎಲ್ಲಿ ನನ್ನ ಮಾತಾಡಿಸಿ ಬಿಡ್ತಾರೋ ಅಂತ ತಲೆ ಕೆಳಗ್ ಹಾಕೊಂಡ್ ಕಾಲೇಜ್ ಹೋಗ್ತಿದ್ದೆ.

ವಾರಕ್ಕೊಂದು ಪ್ರೆಸೆಂಟೇಷನ್, assignment, ರಿಸರ್ಚ್ ಪೇಪರ್, ಕ್ಲಾಸ್ ವರ್ಕ್ ಎಲ್ಲಾನೂ ಇಂಗ್ಲೀಷ್ ಲ್ಲೇ ಮಾಡಬೇಕು.  ನಂಗೊ ಆಕಾಶ ಕಳಿಚಿ ತಲೆ ಮೇಲೇ ಬಿದ್ದಂಗೆ ಆಗಿತ್ತು.

ಆ ಆರು ತಿಂಗಳು ನಾನು ಅನುಭವಿಸಿದ ನೋವು, ಅವಮಾನ, ನನ್ನ ಬಗ್ಗೆಯೇ ನನಗೆ ಅಸೂಯೆ  ಹಿಂಗೇ ಹೇಳೋಕೆ ಹೋದ್ರೆ ಸುಮಾರಿದೆ. ಕ್ಯಾಂಟೀನ್ ಹೋದ್ರೆ ಆ ತಿಂಡಿಗಳ ಹೆಸರೇ ಗೊತ್ತಿರ್ಲಿಲ್ಲ. ಅಲ್ಲಿನೂ ಇಂಗ್ಲಿಷ್ ಲ್ಲೇ ಕೇಳ್ಬೇಕು ಅಂತ ಆರು ತಿಂಗಳು ಮಧ್ಯಾಹ್ನ ಊಟನೇ ಮಾಡಿಲ್ಲ, ಸಂಜೆ ನಾಲ್ಕು ಗಂಟೆಗೆ ಕ್ಲಾಸ್ ಮುಗಿಸಿ ಪಿಜಿ ಬಂದು, ಏನಾದ್ರೂ ಇದ್ದಿದ್ರೆ ತಿಂತಿದ್ದೆ.

ಎಷ್ಟೋ ಸಾರಿ ಈ ಕಾಲೇಜ್, ಬೆಂಗಳೂರು ಸಹವಾಸ ಸಾಕು, ಮನೆಗ್ ವಾಪಸ್ ಹೋಗಿಬಿಡೋಣ ಅನಿಸ್ತಿತ್ತು. ಆದ್ರೆ ನನ್ನ ತಲೆಮೇಲಿದ್ದ 3 ಲಕ್ಷ ಸಾಲ, ಇಂಗ್ಲಿಷ್ ಕಲೀಲೇ ಬೇಕು ಅನ್ನೋ ಹಠಕ್ಕೆ ಸಿಕ್ಕಿರೋ ಅವಕಾಶ ಕಳ್ಕೊಬಾರದು ಅಂತ ಎಲ್ಲವನ್ನೂ ಸಹಿಸಿದ್ದೆ. ಅದೇ ನಾನೂ ಇಂಗ್ಲಿಷ್ ಮೀಡಿಯಂ ನಲ್ಲಿ ಓದಿದ್ರೆ, ನಂಗೆ ಇಷ್ಟೊಂದ್ ಕಷ್ಟ ಆಗ್ತಾ ಇರ್ಲಿಲ್ಲ ಅಂತ ದಿನಾ ರಾತ್ರಿ ಅಳ್ತಿದ್ದೆ.

ಆಮೇಲಿನ ಎರಡು ವರ್ಷದ್ದು ಬೇರೇನೇ ಕತೆ. ಇಂಗ್ಲೀಷ್ ಕಲಿತು, ಒಳ್ಳೊಳ್ಳೆ ರಿಸರ್ಚ್ ಪೇಪರ್‌ ಗಳನ್ನೂ ಬರೆದೆ.

ಆದ್ರೆ ಇಲ್ಲಿ ನಂಗೆ ಸಿಕ್ಕಿದ್ ಅವಕಾಶ ಎಲ್ಲಾ ಮಕ್ಕಳಿಗೂ ಸಿಗೋದಾದ್ರೆ, ಖಂಡಿತ ಎಲ್ಲಾರೂ ಕನ್ನಡ ಮೀಡಿಯಂ ನಲ್ಲೇ ಓದಲಿ..

ಆದ್ರೆ ಅದು ಸಾಧ್ಯ ಆಗತ್ತಾ?

ನನ್ನೂರಿನ ಎಲ್ಲಾ ಮಕ್ಕಳು ಹೋಗೋದು ಸರ್ಕಾರಿ ಶಾಲೆಗೆ. ಸಾವಿರ, ಲಕ್ಷ ಕೊಟ್ಟು ಪ್ರೈವೇಟ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಗೆ ಕಳಿಸುವ ಕುಟುಂಬಗಳು ನನ್ನೂರಲ್ಲಿ ಇಲ್ಲ. ಎಷ್ಟೋ ಫ್ಯಾಮಿಲಿ ಇವತ್ತಿಗೋ ಕೂಲಿ ಮಾಡಿನೇ ಮಕ್ಕಳನ್ನ ಓದಿಸೋದು.

ಡಿಗ್ರಿ ಮುಗಿಸಿರೋರು competitive ಎಕ್ಸಾಮ್ ಓದ್ತಾರೆ. SDA, FDA, PC, PSI ಎಕ್ಸಾಮ್ ನಲ್ಲಿರೋ ಇಂಗ್ಲಿಷ್ ಪೇಪರ್ ಪಾಸ್ ಮಾಡ್ಕೋಳೋಕೆ ಆಗದೇ ಒದ್ದಾಡ್ತಿದಾರೆ. ನಿಮ್ಗ್ ಗೊತ್ತಿರಲಿಕ್ಕಿಲ್ಲ, ಎಷ್ಟು ಜನ ವಿದ್ಯಾರ್ಥಿಗಳು ಇಂಗ್ಲಿಷ್ ಪೇಪರ್ ಪಾಸ್ ಮಾಡ್ಕೋಳೋಕೆ ಆಗದೇ ಓದೋದದನ್ನೇ ನಿಲ್ಲಿಸ್ತಾರೆ ಅಂತ.

ಇನ್ನೂ ಎಷ್ಟು ದಿನ ಬಡವರ ಮಕ್ಕಳು ಬಡವರಾಗಿನೇ ಸಾಯಬೇಕು? ಅವರಿಗೂ ಇಂಗ್ಲಿಷ್ ಕಲಿಯೋ ಅವಕಾಶ ಸಿಗಲಿ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲೂ ಇಂಗ್ಲೀಷ್ ಮೀಡಿಯಂ ಶುರುವಾಗಲಿ. ಇಂಗ್ಲಿಷ್ ಶಿಕ್ಷಣ ಬಡವರ ಮಕ್ಕಳ ಕೈಗೂ ಎಟುಕಲಿ. ಮುಂದೊಂದು ದಿನ ನನ್ನೂರಿನ ಮಕ್ಕಳು, ನನ್ನಂತೆ ಪರಿತಪಿಸೋದು ಬೇಡ ಅಷ್ಟೇ.

ದಿವ್ಯಶ್ರೀ ಅದರಂತೆ

ಇಂಗ್ಲಿಷ್‌ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ.

More articles

Latest article