ಸಾಲು ಸಾಲು ವಿವಾದಗಳಲ್ಲಿ ಸಿಲುಕಿರುವ ಸ್ಯಾಂಡಲ್ ವುಡ್ಗೆ ಯಾಕೊ ಟೈಮ್ ಸರಿ ಇಲ್ಲ ಅನ್ನಿಸತ್ತೆ. ದರ್ಶನ್ ವಿವಾದದ ಬೆನ್ನಲ್ಲೇ ಈಗ ಸ್ಯಾಂಡಲ್ ವುಡ್ನಲ್ಲಿ ಟೈಟಲ್ ವಿವಾದ ಶುರುವಾಗಿದೆ. ಡಾಲಿ ಧನಂಜಯ್ ನಟನೆಯ ʼನಾಡಪ್ರಭು ಕೆಂಪೇಗೌಡʼ ಟೈಟಲ್ ನನ್ನದು ಎಂದು ನಿರ್ಮಾಪಕ ಕಿರಣ್ ತೋಟಂಬೈಲೆ ಅವರು ನಾಗಾಭರಣ ವಿರುದ್ಧ ದೂರು ನೀಡಿದ್ದಾರೆ.
ಕಿರಣ್ ಅವರು ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಟೈಟಲ್ ಅನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಿಸಿಕೊಂಡು ಕೆಲವು ತಿಂಗಳುಗಳ ಹಿಂದೆ ಸಿನಿಮಾ ಘೋಷಣೆ ಮಾಡಿದ್ದರು. ಆದರೆ ಇತ್ತ, ನಾಗಾಭರಣ ಅವರು ‘ನಾಡಪ್ರಭು ಕೆಂಪೇಗೌಡ’ ಟೈಟಲ್ ರಿಜಿಸ್ಟರ್ ಮಾಡಿಸಿ, ಈ ಸಿನಿಮಾದಲ್ಲಿ ಡಾಲಿ ಧನಂಜಯ್ ನಟಿಸುತ್ತಿರುವುದಾಗಿ ಘೋಷಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ಹೆಸರಿನಲ್ಲಿ ಕಿರಣ್ ಮತ್ತು ತಂಡ ಜೂನ್ 27 ಕ್ಕೆ ಮುಹೂರ್ತ ಸಮಾರಂಭ ಇಟ್ಟುಕೊಂಡಿದ್ದರು. ಅಷ್ಟರಲ್ಲೇ ನಾಗಾಭರಣ ಅವರು ಈ ಟೈಟಲ್ ಬಳಸಬಾರದು ಎಂದು ನೋಟಿಸ್ ನೀಡಿದ್ದಾರೆ. ನಂತರ ʻನಾಡಪ್ರಭು ಕೆಂಪೇಗೌಡʼ ಕಾಪಿರೈಟ್ಸ್ ನಮ್ಮದು ಎಂದು ನಿರ್ಬಂಧಕ ನೋಟಿಸ್ ಕಳುಹಿಸಿದ್ದಾರೆ. ಸದ್ಯ ಇರುವ ಸ್ಟೇ ವೆಕೇಟ್ ಮಾಡಲು ಹಲಸೂರು ಪೊಲೀಸ್ ಠಾಣೆಗೆ ದೂರುನೀಡಿ, ಕೋರ್ಟ್ನಲ್ಲಿ ಕಿರಣ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಈ ಕುರಿತು ಹಲಸೂರು ಗೇಟ್ ಪೊಲೀಸ್ ಠಾಣೆ ದೂರು ನೀಡಿರುವ ನಿರ್ಮಾಪಕ ಕಿರಣ್ ತೋಟಂಬೈಲೆ, ನಾನು “ಧರ್ಮಭೀರು ನಾಡಪ್ರಭು ಕೆಂಪೇಗೌಡ” ನಿರ್ಮಾಪಕ. ನಾನು ನನ್ನ ಚಲನಚಿತ್ರದ ಶೀರ್ಷಿಕೆಯನ್ನು ನನ್ನ ಪ್ರೊಡಕ್ಷನ್ ಬ್ಯಾನರ್ ಲಿಟಿಲೋಹ ಫಿಲಂಸ್ನ ಅಡಿಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನೋಂದಣಿ ಮಾಡಿಕೊಂಡಿದ್ದೇನೆ. ಆದರೆ ನಾಗಾಭರಣ ಮುಂತಾದವರು ನಾಡಪ್ರಭು ಕೆಂಪೇಗೌಡ ಎಂಬ ಹೆಸರಿನ ಸಿನಿಮಾವನ್ನು ಸಹ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ ಎಂದು ನನಗೆ ತಿಳಿದು ಬಂದಿದೆ. ವಿಷಯವೇನೆಂದರೆ ನನ್ನ ಟೈಟಲ್ ಅನ್ನು ನಾಗಾಭರಣ ಅವರ ಚಿತ್ರಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಕ್ರಮವಾಗಿ ನೋಂದಾಯಿಸಿದೆ ಎಂದು ದೂರಿದ್ದಾರೆ.
ನಾನು ನೊಂದಣಿ ಮಾಡಿಕೊಂಡ ಟೈಟಲ್ ಅನ್ನು ನಾಗಾಭರಣ ಅವರು ಈಶ್ವರ ಎಂಟರ್ಪ್ರೈಸಸ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮೂಲಕ ಪಡೆದು ಈಗ ನನ್ನ ಮೇಲೆ ಕಾಪಿ ರೈಟ್ ಕ್ಲೈಮ್ ಮಾಡಿದ್ದಾರೆ. ನಾಡಪ್ರಭು ಅನ್ನುವುದು ಸಾರ್ವತ್ರಿಕ ಹೆಸರು. ಅದರ ಮೇಲೆ ಸ್ಟೇ ತರಲು ಸಾಧ್ಯವಿಲ್ಲ. ಅವರು ಕಾಪಿರೈಟ್ಸ್ ರಿಜಿಸ್ಟರ್ ಮಾಡಿಸಿಯೇ ಇಲ್ಲ. ಕೋರ್ಟ್ಗೆ ಸುಳ್ಳು ದಾಖಲೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಿರ್ಮಾಪಕ ಡಾ.ಎಂ.ಎನ್.ಶಿವರುದ್ರಪ್ಪ, ರಾಹುಲ್ ಗುಂಡಾಲ ಮತ್ತು ನಿರ್ದೇಶ ನಾಗಾಭರಣ ಇವರೆಲ್ಲ ನನಗೆ ವಂಚಿಸಲು ಅಕ್ರಮ ಒಪ್ಪಂದ ಮಾಡಿಕೊಂಡಿದ್ದಾರೆ. ಎಂ. ಪ್ರತಿಬಾ ನಂದಕುಮಾರ್ ಕೂಡ ನಕಲಿ ಕಾಪಿ ರೈಟ್ ಅಗ್ರಿಮೆಂಟ್ ಸೃಷ್ಟಿಸುವ ಕೆಲಸದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕೋರುತ್ತೇನೆ ಎಂದು ದೂರು ನೀಡಿದ್ದಾರೆ.