ತಾ.ಪಂ, ಜಿ.ಪಂ. ಚುನಾವಣೆ ಗೆಲ್ಲಿಸುವವರೆಗೂ ವಿರಮಿಸುವುದಿಲ್ಲ: ಬಸವರಾಜ ಬೊಮ್ಮಾಯಿ

Most read

ಮುಂದಿನ ತಾ.ಪಂ ಹಾಗೂ ಜಿ.ಪಂ.ಚುನಾವಣೆಯಲ್ಲಿ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿ ಗೆಲುವು ಸಿಗುವರೆಗೂ ವಿರಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.


ಅವರು ಇಂದು ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಮತದಾರರಿಗೆ ಅಭಿನಂದನೆ ಹಾಗೂ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಪರಿಣಾಮ ಆರ್ಥಿಕ ಸ್ಥಿತಿ ಹದಗೆಟ್ಟು ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ. ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಅಭಿವೃದ್ದಿ ಶೂನ್ಯವಾಗಿದೆ. ಕಾಂಗ್ರೆಸ ಸರ್ಕಾರ 1 ಲಕ್ಷದ 5 ಸಾವಿರ ಕೋಟಿ ರೂ.ಸಾಲದ ಸುಳಿಯಲ್ಲಿದ್ದು, ರಾಜ್ಯದ ಅಭಿವೃದ್ದಿ ಸಾದ್ಯವಿಲ್ಲವಾಗಿದೆ. ಈಗ ಜನತೆಗೆ ನ್ಯಾಯ ಒದಗಿಸಲು ಸಾದ್ಯವಾಗುತ್ತಿಲ್ಲ. ರಸ್ತೆ, ನೀರಾವರಿ ಯೋಜನೆಗಳ ದುರಸ್ಥಿಗೂ ಹಣಕಾಸಿನ ತೊಂದರೆಯಿದೆ. 10 ವರ್ಷ ಅಭಿವೃಧ್ದಿ ಹಿಂದಕ್ಕೆ ತೆರಳಿದಂತಾಗಿದ್ದು, ಜನತೆ ಕೈಯಲ್ಲಿ ಚಿಪ್ಪು ಕೊಡುತ್ತಿದ್ದಾರೆ. ಇಂತಹ ಸರ್ಕಾರ ಬೇಕೆ ಬೇಡವೇ ಎನ್ನುವ ಚರ್ಚೆ ಶುರುವಾಗಿದೆ. ರಾಜ್ಯದಲ್ಲಿ ರಾಜಕೀಯ ಬದಲಾವಣೆ ಸುಳಿವು ನೀಡಿದ ಅವರು, ಜನರ ಅಪೇಕ್ಷೆ ಬದಲಾಗಿದೆ. ಪ್ರಜೆಗಳು ಹಾಗೂ ರಾಜನ ನಡುವೆ ಸಂಘರ್ಷ ಉಂಟಾದಲ್ಲಿ ಜನರಿಗೆ ಗೆಲುವು ಸಿಗಲಿದೆ ಎಂದರು.

ಯೋಜನೆ ಸ್ಥಗಿತ:
ಬಿಜೆಪಿ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಯಿದ್ದ ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ನೀಡುವ ವಿದ್ಯಾನಿಧಿ, ರೈತರಿಗೆ 4000 ರೂ. ನೀಡುವ ಕಿಸಾನ್ ಸಮ್ಮಾನ ಸೇರಿದಂತೆ ಬಿಜೆಪಿ ಅವಧಿಯಲ್ಲಿ ಜಾರಿಗೊಳಿಸಿದ ಯೋಜನೆ ಸ್ಥಗಿತಗೊಳಿಸಿದೆ. ಸರ್ಕಾರದ ಯೋಜನೆ ಹಾಗೂ ವಿವಿಧ ಪ್ರಮಾಣ ಪತ್ರ ಪಡೆಯಲು ತಾಲೂಕು ಕೇಂದ್ರಕ್ಕೆ ಬರಬಾರದು. ಇದಕ್ಕಾಗಿ ಪಂಚಾಯತಿ ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲಾಗಿದೆ. ಆದರೆ, ರಾಜ್ಯ ಸರ್ಕಾರ ಇಂತಹ ಕೇಂದ್ರವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಡಿಸೇಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಮೂಲಕ ಜನಸಾಮಾನ್ಯರಿಗೆ ಹೊರೆ ಮಾಡಿದ್ದು, ಇದರಿಂದ ಎಲ್ಲ ಬೆಲೆಗಳು ಏರಿಕೆ ಅನಿವಾರ್ಯ. ಪುಕ್ಸಟ್ಟೆ ಕೊಟ್ಟಂತೆ ಮಾಡಿ, ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ನಡೆಸಿದೆ ಎಂದು ಆರೋಪಿಸಿದರು.


ಅಭಿವೃದ್ಧಿಗೆ ಆದ್ಯತೆ
ಆಯ್ಕೆ ಮಾಡಿದ ಜನತೆಗೆ ಕೃತಜ್ಞತೆ ಜೊತೆ ಗೆಲುವನ್ನು ಸವಾಲಾಗಿ ಸ್ವೀಕರಿಸುವೆ. ಕ್ಷೇತ್ರದಲ್ಲಿ ಹೊಸದನ್ನು ಮಾಡುವ ಕೌತುಕವಿದೆ. ಇಲ್ಲಿನ ನೈಸರ್ಗಿಕ ಹಾಗೂ ಮಾನವ ಶಕ್ತಿಯನ್ನು ಬಳಸಿಕೊಂಡು ಅಭಿವೃದ್ದಿಗೆ ಶ್ರಮಿಸುವೆ. ಕ್ಷುಲ್ಲಕ ರಾಜಕಾರಣ ಮಾಡೋಲ್ಲ, 60 ತಿಂಗಳಲ್ಲಿ 59 ತಿಂಗಳು ಅಭಿವೃದ್ದಿಗೆ ಮೀಸಲಿಟ್ಟು, ಒಂದು ತಿಂಗಳು ಮಾತ್ರ ಚುನಾವಣೆಗೆ ಮೀಸಲಿಡುವೆ ಎಂದರು.


ಚುನಾವಣೆ ಆಯೋಗ ಮೌನ:ಲೋಕಸಭೆ ಚುನಾವಣೆ ಮತದಾನದ 2 ದಿನ ಹಿಂದೆ ರಾಜ್ಯ ಸರ್ಕಾರ ಏಪ್ರೀಲ್, ಮೇ ತಿಂಗಳ ಗೃಹ ಲಕ್ಷ್ಮೀ ಯೋಜನೆ 4000 ರೂ. ಜಮೆ ಮಾಡಿದೆ. ಏನೇ ಆಶೆ ಆಕಾಂಕ್ಷೆ, ಆಮಿಷ ಒಡ್ಡಿದರೂ ಮತದಾರರು ರಾಜ್ಯದಲ್ಲಿ ಕಾಂಗ್ರೇಸ್ ತಿರಸ್ಕರಿಸಿದ್ದಾರೆ. ಆದರೆ, ಚುನಾವಣೆ ಆಯೋಗ ಮೌನವಾಗಿತ್ತು ಎಂದರು.
ನದಿ ಜೋಡಣೆಗೆ ಚಾಲನೆ


ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬಹುದಿನಗಳ ಬೇಡಿಕೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ನದಿಯನ್ನು ಹಾವೇರಿ ಜಿಲ್ಲೆಯ ವರದಾ ನದಿಗೆ ಜೋಡಿಸುವ ಮೂಲಕ ಬೃಹತ್ ನೀರಾವರಿ ಜಾರಿಗೊಳಿಸಬೇಕು. ಇದರಿಂದ ಲಕ್ಷಾಂತರ ಹೆಕ್ಟೇರು ನೀರಾವರಿಯಾಗಿ, ಜಿಲ್ಲೆಯ ರೈತಸಮುದಾಯ ಆರ್ಥಿಕ ಜೀವನಮಟ್ಟ ಸಂಪೂರ್ಣವಾಗಿ ಸುಧಾರಿಸಲಿದೆ. ಪ್ರದಾನಿ ನರೇಂದ್ರ ಮೋದಿಯವರ ಗಮನಕ್ಕೆ ತಂದು ಯೋಜನೆಗೆ ಚಾಲನೆ ಕೊಡಿಸುವಂತೆ ಒತ್ತಾಯಿಸಿದರು.


ಲಾಯನ್ಸ್ ವಿಮೆ ಕಂಪನಿ ಜಿಲ್ಲೆಯ ರೈತರಿಗೆ ಪರಿಹಾರ ನೀಡದೆ ಮೋಸಮಾಡಿದ್ದು, ನ್ಯಾಷನಲ್ ವಿಮೆ ಕಂಪನಿಗೆ ಅವಕಾಶ ಕಲ್ಪಿಸಿ ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರು, ಮಾಜಿ ಶಾಸಕ ಶಿವರಾಜ ಸಜ್ಜನ, ಬಿಜೆಪಿ ಮುಖಂಡರಾದ ಬಸವರಾಜ ಛತ್ರದ, ಹಾಲೇಶ ಜಾಧವ, ವಿದ್ಯಾಶೆಟ್ಟಿ, ಪದ್ಮಾವತಿ ಯೋಗಿ, ಗವಿಶಿದ್ದಪ್ಪ ದ್ಯಾಮಣ್ಣನವರ, ಮುರಿಗೆಪ್ಪ ಶೆಟ್ಟರ, ವಿಜಯ ಬಳ್ಳಾರಿ, ಶಿವಬಸಪ್ಪ ಕುಳೇನೂರು, ರಾಜು ಹೊಸಕೇರಿ, ಚಂದ್ರಪ್ಪ ಶೆಟ್ಟರ, ವಿನಯ ಹಿರೇಮಠ ಹಾಗೂ ಪುರಸಭೆ ಸದಸ್ಯರು ಮತ್ತಿತರರು ಹಾಜರಿದ್ದರು.

More articles

Latest article