ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (HSRP) ಅಳವಡಿಕೆಗೆ 2023ರ ಜೂನ್ 12ಕ್ಕೆ ಕೊನೆಯ ದಿನವಾಗಿದೆ. ಆದರೆ, ರಾಜ್ಯ ಸರ್ಕಾರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆಗೆ ಸೆಪ್ಟೆಂಬರ್ 15ರ ವರೆಗೆ ಕಾಲಾವಕಾಶ ನೀಡಿದೆ.
ಕರ್ನಾಟಕ ಹೈಕೋರ್ಟ್ (Karnataka High Court) ಹೆಚ್ಎಸ್ಆರ್ಪಿ ಅಳವಡಿಸದವರ ವಿರುದ್ಧ ಜುಲೈ 4ರ ವರೆಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ (Karnataka Government) ನಿರ್ದೇಶನ ನೀಡಿತ್ತು. ಅಲ್ಲದೆ, ಹೆಚ್ಎಸ್ಆರ್ಪಿ ಅಳವಡಿಕೆಯ ಗಡುವನ್ನು ವಿಸ್ತರಿಸಲು ಒಪ್ಪಿಗೆ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಈ ಆದೇಶವನ್ನು ಹೊರಡಿಸಿದೆ.
ಏಪ್ರಿಲ್ 2019 ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ.
ಹೆಚ್.ಎಸ್.ಆರ್.ಪಿ ಅಳವಡಿಕೆಗೆ ಅರ್ಜಿ ಹಾಕುವುದು ಹೇಗೆ ಗೊತ್ತೇ?
- https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು Book HSRP ನ್ನು ಕ್ಲಿಕ್ ಮಾಡಿ.
- ನಿಮ್ಮ ವಾಹನ ತಯಾರಕರನ್ನು ಆಯ್ಕೆಮಾಡಿ.
- ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
- HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆಮಾಡಿ.
- HSRP ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಿ. ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
- ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.
- ನಿಮ್ಮ ಅನುಕೂಲಕ್ಕೆ, ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
- ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಖ್ಯೆಗೆ ಭೇಟಿ ನೀಡಿ.
- ವಾಹನ ಮಾಲೀಕರ ಕಚೇರಿ ಆವರಣ/ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ ಮಾಡಬಹುದು.