ʻದಂಗೆ ಏಳಿʼ ಹೇಳಿಕೆ: ಯೂ ಟರ್ನ್‌ ಹೊಡೆದ ಎಚ್.ಡಿ.ಕುಮಾರಸ್ವಾಮಿ

Most read

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆ ಏರಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರುವ ಭರದಲ್ಲಿ ಜನ ದಂಗೆ ಏಳಬೇಕು ಎಂದು ಹೇಳಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈಗ ಉಲ್ಟಾ ಹೊಡೆದಿದ್ದಾರೆ.

ಜನರು ದಂಗೆ ಏಳಬೇಕು ಎಂದು ನಾನು ಹೇಳಿಲ್ಲ, ಸರ್ಕಾರದ ವಿರುದ್ಧ ಜನರೇ ಪ್ರತಿಭಟನೆ ಮಾಡುತ್ತಾರೆ ಎಂದು ನಾನು ಹೇಳಿದ್ದೆ ಎಂದು ಕುಮಾರಸ್ವಾಮಿ ಇಂದು ಹೇಳಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?

ಕಳೆದ ಭಾನುವಾರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಎಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷಗಳು ಪ್ರತಿಭಟನೆ ಮಾಡುತ್ತೇವೆ. ಬಿಜೆಪಿ-ಜೆಡಿಎಸ್ ಪ್ರತಿಭಟನೆಗಿಂತ ಜನ ದಂಗೆ ಏಳ್ಬೇಕು. ಈ ದುರಾಡಳಿತದ ವಿರುದ್ಧ ಜನ ದಂಗೆ ಏಳಬೇಕು. ಜನ ಪ್ರತಿಭಟಿಸುವ ಮೂಲಕ ಎಚ್ಚರಿಕೆ ನೀಡಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು

ಗ್ಯಾರಂಟಿ ಮುಂದುವರೆಸಲು ಬೆಲೆ ಏರಿಸಿದ್ದಾರಂತೆ. ಹೀಗಂತ ಅವರ ಸಚಿವರೇ ಒಪ್ಪಿಕೊಂಡಿದ್ದಾರೆ. ಜನರಿಂದಲೇ ದುಡ್ಡು ವಸೂಲಿಗೆ ಮುಂದಾಗಿದ್ದಾರೆ. ಯಾರದೋ ಕಿತ್ತು ಯಾರಿಗೋ ದಾನ ಮಾಡಿದಂಗೆ ಎಂದು ಕುಮಾರಸ್ವಾಮಿ ಹೇಳಿದ್ದರು.

ಇದೀಗ ಜನ ದಂಗೆ ಏಳಬೇಕು ಎಂದು ತಾನು ಹೇಳಿಯೇ ಇಲ್ಲ ಎಂದು ಕುಮಾರಸ್ವಾಮಿ ಉಲ್ಟಾ ಹೊಡೆದಿದ್ದಾರೆ. ಈ ಹಿಂದೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆಗಳಿಂದ ನಮ್ಮ ಗ್ರಾಮೀಣ ಭಾಗದ ಮಹಿಳೆಯರು ಸ್ವಲ್ಪ ದಾರಿ ತಪ್ಪಿದ್ದಾರೆ ಎಂದು ಹೇಳಿದ್ದ ಕುಮಾರಸ್ವಾಮಿ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಾವು ಹಾಗೆ ಹೇಳಿಯೇ ಇಲ್ಲ. ನನ್ನ ಮಾತುಗಳನ್ನು ತಿರುಚಲಾಗಿದೆ ಎಂದು ತಿಪ್ಪೆ ಸಾರಿಸಿದ್ದರು.

More articles

Latest article