ಇಡೀ ರಾಜ್ಯದಲ್ಲಿ ಕನ್ನಡವನ್ನೇ ಹೆಚ್ಚಾಗಿ ಮಾತನಾಡುವ ಜನರಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರು ಮಂಡ್ಯದಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆ ವಿಷಯದಲ್ಲಿ 3571 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
2023-24ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಪರೀಕ್ಷೆ ತೆಗೆದುಕೊಂಡಿದ್ದ 20,246 ವಿದ್ಯಾರ್ಥಿಗಳಲ್ಲಿ ಪೈಕಿ 15,092 ಮಂದಿ ಉತ್ತೀರ್ಣರಾಗಿದ್ದಾರೆ. 5,154 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇವರ ಪೈಕಿ 3571 ವಿದ್ಯಾರ್ಥಿಗಳು ಕನ್ನಡ ಭಾಷೆ ವಿಷಯದಲ್ಲೇ ಅನುತ್ತೀರ್ಣರಾಗಿದ್ದು ಕಂಡುಬಂದಿದೆ.
ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರ ಕಾರ‍್ಯಕ್ಷಮತೆಯನ್ನೇ ಪ್ರಶ್ನಿಸುವಂತಾ ಪರೀಕ್ಷೆ ಫಲಿತಾಂಶ ಕುಸಿತದ ಹಿನ್ನೆಲೆಯಲ್ಲಿಇಲಾಖೆಯ ಅಧಿಕಾರಿಗಳೊಂದಿಗೆ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಡಾ.ಕುಮಾರ ಸಭೆ ನಡೆಸಿ, ಕನ್ನಡ ಭಾಷೆ ವಿಷಯದಲ್ಲೇ ಇಷ್ಟೊಂದು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಇದು ತಲೆ ತಗ್ಗಿಸುವ ವಿಷಯ ಎಂದು ಹೇಳಿದ್ದರು.
ಕೆ. ಆರ್. ಪೇಟೆ ತಾಲ್ಲೂಕಿನ 56 ಶಾಲೆಗಳಲ್ಲಿ ಒಟ್ಟು 924 ವಿದ್ಯಾರ್ಥಿಗಳು ಮದ್ದೂರು ತಾಲ್ಲೂಕಿನ 84 ಶಾಲೆಗಳಲ್ಲಿ ಒಟ್ಟು 1038 ವಿದ್ಯಾರ್ಥಿಗಳು .ಮಳವಳ್ಳಿ ತಾಲ್ಲೂಕಿನ 70 ಶಾಲೆಗಳಲ್ಲಿ 814 ವಿದ್ಯಾರ್ಥಿಗಳು, ಮಂಡ್ಯ ತಾಲ್ಲೂಕಿನಲ್ಲಿ ದಕ್ಷಿಣ ವಲಯದ 62 ಶಾಲೆಗಳಲ್ಲಿ 607 ವಿದ್ಯಾರ್ಥಿಗಳು ಹಾಗೂ ಉತ್ತರ ವಲಯದ 27 ಶಾಲೆಗಳಲ್ಲಿ 163 ವಿದ್ಯಾರ್ಥಿಗಳು, ನಾಗಮಂಗಲ ತಾಲ್ಲೂಕಿನ 50 ಶಾಲೆಗಳಲ್ಲಿ ಒಟ್ಟು 596 ವಿದ್ಯಾರ್ಥಿಗಳು ಹಾಗೂಪಾಂಡವಪುರ ತಾಲ್ಲೂಕಿನ 47 ಶಾಲೆಗಳಲ್ಲಿ 585 ವಿದ್ಯಾರ್ಥಿಗಳು , ಶ್ರೀರಂಗಪಟ್ಟಣ ತಾಲ್ಲೂಕಿನ 49 ಶಾಲೆಗಳಲ್ಲಿ 427 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಯಟ್ ಉಪನ್ಯಾಸಕರು ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ -1 ರಲ್ಲಿ ಉತ್ತೀರ್ಣರಾಗುವಂತೆ ತರಬೇತಿ ನೀಡಬೇಕು. ಶಿಕ್ಷಕರು ಪ್ರಾಮಾಣಿಕತೆ, ಆಸಕ್ತಿ, ಪ್ರೀತಿ ಹಾಗೂ ನಿಸ್ವಾರ್ಥ ಮನೋಭಾವವನೆಯಿಂದ ಕಾರ್ಯನಿರ್ವಹಿಸಿ. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುಂದೆ ತರಲು ಶ್ರಮಿಸಬೇಕು ಎನ್ನುವುದು ಜಿಲ್ಲಾಧಿಕಾರಿ ಡಾ.ಕುಮಾರ ಅವರ ಸೂಚನೆ.