ಬೆಂಗಳೂರು: ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದ ಆರೋಪಿ ಚಿತ್ರನಟ ದರ್ಶನ್ ತೂಗುದೀಪ ಅವರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಬಿಜೆಪಿ ಮುಖಂಡ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.
ಪ್ರಕರಣ ತನಿಖೆ ವಿಷಯದಲ್ಲಿ ಪೊಲೀಸರ ನಡೆ ಅನುಮಾನಾಸ್ಪದವಾಗಿ ಎಂದು ಗಂಭೀರವಾಗಿ ಆರೋಪಿಸಿರುವ ಅವರು, ದರ್ಶನ್ ಮಾಡಿರೋ ಕೃತ್ಯಕ್ಕೆ ಕ್ಷಮೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದಿಂದ ಕೊಲೆಗೀಡಾದ ರೇಣುಕಾಸ್ವಾಮಿ ಕುಟುಂಬಕ್ಕೆ ಯಾವುದೇ ನ್ಯಾಯ ದೊರೆಯುವ ಸಾಧ್ಯತೆ ಇಲ್ಲ. ನ್ಯಾಯಾಲಯ ದರ್ಶನ್ ಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಅವರು ಹೇಳಿದ್ದಾರೆ.
ದರ್ಶನ್ ಬಂಧನದ ನಂತರ ಘಟನೆ ಕುರಿತು ಪ್ರತಿಕ್ರಿಯೆ ನೀಡಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಿಂಜರಿಕೆ ತೋರುತ್ತಿದ್ದರು. ಪ್ರಕರಣದ ಭೀಕರತೆಯನ್ನು ಕಂಡು ರಾಜ್ಯಾದ್ಯಂತ ಜನಾಕ್ರೋಶ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಹಲವರು ದರ್ಶನ್ ಕುರಿತು ಕಟುಟೀಕೆ ಆರಂಭಿಸಿದ್ದಾರೆ.
ದರ್ಶನ್ ಬಂಧನಕ್ಕೆ ಒಳಗಾಗುವ ಸಂದರ್ಭದಲ್ಲಿ, ಆತನನ್ನು ಪ್ರಕರಣದಿಂದ ಕೈಬಿಡುವಂತೆ ಓರ್ವ ಸಚಿವ ಮತ್ತು ಓರ್ವ ಬಿಜೆಪಿ ಶಾಸಕರು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ದರ್ಶನ್ ಪ್ರಕರಣದಲ್ಲಿ ಯಾರೂ ತಮ್ಮ ಮೇಲೆ ಒತ್ತಡ ಹೇರಲು ಯತ್ನಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದರು.