ಮುಗಿದ ವಿಚಾರಣೆ: ಇಂದೇ ಜೈಲಿಗೆ ಹೋಗುತ್ತಾ ಡಿ ಗ್ಯಾಂಗ್?

Most read

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಚಿತ್ರನಟ ದರ್ಶನ್, ನಟಿ ಪವಿತ್ರ ಗೌಡ ಮತ್ತು ಸಹಚರರನ್ನು ಇಂದೇ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಂಭವವಿದೆ.

ಜೂ.10 ರಂದು ಪ್ರಕರಣ ಭೇದಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಕೆಲ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಜೂ.11ರಂದು ಪ್ರಮುಖ ಆರೋಪಿಗಳಾದ ದರ್ಶನ್ ಮತ್ತು ಪವಿತ್ರಗೌಡ ಸೇರಿದಂತೆ 13 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಬೆಂಗಳೂರು ನಗರ ಹೆಚ್ಚುವರಿ 24ನೇ ಎಸಿಎಂಎಂ ನ್ಯಾಯಾಲಯ ಎಲ್ಲ ಆರೋಪಿಗಳನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಪೊಲೀಸ್ ಕಸ್ಟಡಿ ನಾಳೆ ಅಂತ್ಯವಾಗುತ್ತಿದ್ದು ನಾಳೆ ಭಾನುವಾರವಾದ್ದರಿಂದ ಇಂದೇ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.

ಇಡೀ ದೇಶದ ಗಮನ ಸೆಳೆದಿರುವ ಹೈಪ್ರೊಫೈಲ್ ಪ್ರಕರಣ ಇದಾದ್ದರಿಂದ ದರ್ಶನ್ ಬಂಧಿಸಿಡಲಾಗಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಸುತ್ತಮುತ್ತ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಠಾಣೆ ಮುಂಭಾಗ ದರ್ಶನ್ ಅಭಿಮಾನಿಗಳು, ಸಾರ್ವಜನಿಕರು ಮತ್ತು‌ ಟೀವಿ‌ ಚಾನಲ್ ಸಿಬ್ಬಂದಿಗಳ ಜಾತ್ರೆಯೇ ನಡೆದಿದ್ದು ಹೆಚ್ಚು ದಿನಗಳ ಕಾಲ ಠಾಣೆಯಲ್ಲಿ ಇಟ್ಟುಕೊಳ್ಳುವುದು ಪೊಲೀಸರಿಗೆ ತ್ರಾಸದಾಯಕವಾಗಿದೆ.

ಇಂದೇ ದರ್ಶನ್ ಮತ್ತು ಸಹಚರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಲ್ಲಿ, ಇಂದೇ ಅವರನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಿದ್ದು ಎಲ್ಲ‌ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗುವುದು.

ಆರೋಪಿಗಳ ಪೈಕಿ ಕೆಲವರ ವಿಚಾರಣೆ ಅಗತ್ಯವಿದ್ದಲ್ಲಿ ಪೊಲೀಸರು ಕೆಲ ದಿನಗಳ ಕಾಲ ಅವರ ಪೊಲೀಸ್ ಕಸ್ಟಡಿ ವಿನಂತಿಸುವ ಸಾಧ್ಯತೆಯೂ ಇದೆ.

More articles

Latest article