ಬೆಂಗಳೂರು: ಪಟ್ಟಣಗೆರೆಯ ಶೆಡ್ ಒಂದರಲ್ಲಿ ಜೂನ್ 8ರಂದು ನಡೆದ ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಎಲ್ಲ ಆರೋಪಿಗಳ ಮೊಬೈಲ್ ಗಳನ್ನು ಸೀಜ್ ಮಾಡಿದ್ದಾರೆ.
ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಭೀಕರ ಕ್ರೌರ್ಯದ ಪ್ರಕರಣವನ್ನು ಭೇದಿಸಿದ ಕಾಮಾಕ್ಷಿಪಾಳ್ಯ ಪೊಲೀಸರು ನಿನ್ನೆ ಚಿತ್ರನಟ ದರ್ಶನ್, ಆತನ ಗೆಳತಿ ಪವಿತ್ರ ಗೌಡ ಸೇರಿದಂತೆ 13 ಮಂದಿ ಆರೋಪಿಗಳನ್ನು ಬಂಧಿಸಿ ನಿನ್ನೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪೊಲೀಸರ ವಿನಂತಿಯ ಮೇರೆಗೆ ನ್ಯಾಯಾಲಯವು ಎಲ್ಲ ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.
ಆರೋಪಿಗಳ ಮೊಬೈಲ್ ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಕಾಲ್ ರೆಕಾರ್ಡ್, ಟವರ್ ಲೊಕೇಷನ್ ಸೇರಿದಂತೆ ಲಭ್ಯವಿರುವ ಎಲ್ಲ ಡಿಜಿಟಲ್ ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ.
ರೇಣುಕಾಸ್ವಾಮಿಗೆ ಶೆಡ್ ನಲ್ಲಿ ಹಿಂಸೆ ನೀಡುತ್ತಿರುವ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ವಿಡಿಯೋ, ವಾಟ್ಸಾಪ್ ಸಂದೇಶಗಳು ಡಿಲೀಟ್ ಆಗಿದ್ದರೂ ಅವುಗಳನ್ನು ರಿಟ್ರೀವ್ ಮಾಡಿಕೊಳ್ಳಬಹುದಾಗಿದ್ದು ಪೊಲೀಸರು ಎಲ್ಲ ಆರೋಪಿಗಳ ಮೊಬೈಲ್ ಗಳನ್ನೂ ಪರಿಶೀಲನೆಗೆ ಒಳಪಡಿಸುತ್ತಿದ್ದಾರೆ.
ದರ್ಶನ್ ಮತ್ತು ಎಲ್ಲ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ಪವಿತ್ರ ಗೌಡ ಅವರನ್ನು ಮಾತ್ರ ನಿನ್ನೆ ರಾತ್ರಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಇಂದು ಬೆಳಿಗ್ಗೆ ಮತ್ತೆ ಆಕೆಯನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತರಲಾಯಿತು. ಎಲ್ಲ ಆರೋಪಿಗಳನ್ನು ಇಂದು ಪೊಲೀಸರು ಪ್ರತ್ಯೇಕವಾಗಿ ಮತ್ತು ಮುಖಾಮುಖಿಯಾಗಿಸಿ ವಿಚಾರಣೆ ನಡೆಸಲಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಠಾಣೆ ಎದುರು ಇಂದು ದರ್ಶನ್ ಅಭಿಮಾನಿಗಳು, ಸಾರ್ವಜನಿಕರು ನೆರೆಯುವ ಸಾಧ್ಯತೆ ಇರುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.