ದನ ಕಳ್ಳರನ್ನು ಹಿಡಿಯಲಾಗದೆ ಕವಿಯ ಮೇಲೇ ಕೇಸು ಜಡಿದಿದ್ದಾರೆ ಬಂಟ್ವಾಳದ ಪೊಲೀಸರು. ಕವಿ shafi ಯವರ ನೋವಿನ ಮಾತುಗಳು ಇಲ್ಲಿವೆ.
ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆಯ ಅಡಿಯಲ್ಲಿ ನನ್ನ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪ್ರಕರಣ ದಾಖಲಾಗಿರುವುದು 2023 December ತಿಂಗಳಲ್ಲಿ. ಪ್ರಕರಣದ ಚಾರ್ಜ್ ಶೀಟ್ ನಲ್ಲಿ ನನ್ನ ಹೆಸರು ಇರುವುದು ತಿಳಿದು ಬಂದದ್ದು ಎರಡು ದಿನಗಳ ಹಿಂದೆ. ನಮೂದಿಸಿದ ಪ್ರಕರಣದ FIR ನಲ್ಲಿ ನನ್ನ ಹೆಸರಿಲ್ಲದಿದ್ದರೂ ತದನಂತರ ಚಾರ್ಜ್ ಶೀಟ್ ನಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂಬುದು ವಕೀಲರ ಮೂಲಕ ತಿಳಿದು ಬಂದ ವಿಚಾರ. ಮತ್ತೂ ಅಚ್ಚರಿಯ ವಿಚಾರ ಅಂದರೆ, ಚಾರ್ಜ್ ಶೀಟ್ ದಾಖಲಾಗಿ ಅದಾಗಲೇ ಎರಡು ತಿಂಗಳಾದರೂ, ಯಾವ ನೋಟೀಸ್/ಸಮನ್ಸ್ ನನಗೆ ನೀಡಿಲ್ಲ. “ತಲೆಮರೆಸಿಕೊಂಡಿದ್ದಾನೆ” ಎಂದು ನ್ಯಾಯಾಲಯಕ್ಕೆ ಸುಳ್ಳು ಹೇಳಿ, ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗುವಂತೆ ಮಾಡಿದ್ದಾರೆ ಬಂಟ್ವಾಳ ನಗರ ಠಾಣೆಯ ಸುಶಿಕ್ಷಿತ ಪೊಲೀಸರು.
ನನ್ನ ಮಗಳು ಹಿಂದ್ ಗೆ ಆಗ ಸುಮಾರು ಆರೇಳು ತಿಂಗಳು. ಅತಿಯಾಗಿ ರಚ್ಚೆ ಹಿಡಿಯುವ ಕೂಸನ್ನು ನಿದ್ದೆ ಮಾಡಿಸುವುದು ನನ್ನ ಮತ್ತು ನನ್ನವಳ ನಿತ್ಯ ಸವಾಲಿನ ಕೆಲಸ. ರಾತ್ರಿ ಸುಮಾರು ಎಂಟೂವರೆ ಸಮಯ ಹಿಂದ್ ಳನ್ನು ತೊಟ್ಟಿಲು ತೂಗುತ್ತಿರಬೇಕಿದ್ದರೆ, ಮನೆಯ ಪಕ್ಕದ ಕಿರಿದಾದ ಒಳರಸ್ತೆಯಲ್ಲಿ, ರಸ್ತೆಯಲ್ಲಿ ಅಪರಿಮಿತ ವೇಗದಲ್ಲಿ ವಾಹನಗಳು ಹೋಗುವ ಸದ್ದು, ಜೊತೆಗೆ ಅವಾಚ್ಯ ಶಬ್ದಗಳಿಂದ ಅರಚಾಟ ಬೈದಾಟ. ಮಗು ಬೆಚ್ಚಿ ಬಿದ್ದು ಅಳತೊಡಗಿತ್ತು. ಮಗುವನ್ನು ನನ್ನವಳಿಗೆ ವಹಿಸಿ ಹೊರಗೋಡಿ ನೋಡಿದರೆ ಜನರೆಲ್ಲ ಮನೆಯಿಂದ ರಸ್ತೆಗೆ ಬಂದಿದ್ದಾರೆ. ಯಾರಿಗೂ ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಅಂಗಡಿಯ ಬಳಿ ಜಮಾಯಿಸಿರುವ ಜನರ ಬಳಿ ಕೇಳಿದರೆ ಯಾರಲ್ಲೂ ಸ್ಪಷ್ಟ ಮಾಹಿತಿಯಿಲ್ಲ. ಒಂಥರಾ ಗೊಂದಲಮಯ ವಾತಾವರಣ. ತುಸು ವೇಳೆಯಲ್ಲಿ ಮತ್ತೊಂದು ಒಳರಸ್ತೆಯಿಂದ ಪೊಲೀಸ್ ಜೀಪೊಂದು ಬಂದು ಅಂಗಡಿಯ ಬಳಿ ನಿಂತಿತು. ಗೊಂದಲಕ್ಕೀಡಾಗುವುದಕ್ಕಿಂತ ಪೊಲೀಸರನ್ನೇ ಕೇಳೋಣವೆಂದು ನೇರವಾಗಿ ಪೊಲೀಸ್ ಜೀಪಿನ ಬಳಿ ತೆರಳಿ, What’s the issue? Any concerns? ಎಂದು ಕೇಳಿದೆ. ಏನಿಲ್ಲ ಯಾರೋ ಗಾಡಿ ಹೊಡ್ಕೊಂಡು ಬಂದಿದ್ದಾರೆ ಎಂಬ ಉತ್ತರ ಬಂತು. ಹೌದೇ ? ಏನಾದರೂ ನೆರವು ಬೇಕಿತ್ತೇ ಎಂದು ಮರು ಪ್ರಶ್ನಿಸಿದೆ. ಇಲ್ಲ ಅಂದರು. ಮತ್ತೆ ಜನರ ಗುಂಪಿನತ್ತ ಮರಳಿದೆ.
ಪೊಲೀಸ್ ಜೀಪಿನಲ್ಲಿದ್ದವರು ಮತ್ತೆ ನನ್ನನ್ನು ಕರೆದರು. ಒಂದು ಬಾಟಲ್ ನೀರು ತಂದು ಕೊಡಿ ಅಂತ ಕೇಳಿಕೊಂಡರು. ಅಂಗಡಿಯಿಂದ ಒಂದು ಲೀಟರ್ ನ ನೀರಿನ ಬಾಟಲ್ ತೆಗೆದುಕೊಂಡು ಹೋಗಿ ಕೊಟ್ಟೆ. ದುಡ್ಡು ಕೊಟ್ಟು ಚೇಂಜ್ ತಂದು ಕೊಡು ಅಂದರು, ಚೇಂಜ್ ತರಲು ಹೋಗುತ್ತಿರುವವನನ್ನು ಮತ್ತೆ ಕರೆದು ದುಡ್ಡು ವಾಪಸ್ ಪಡಕೊಂಡು ಇರಲಿ ಮತ್ತೆ ಕೊಡುತ್ತೇವೆ ಅಂದರು.
ಕೆಲವೇ ಕ್ಷಣದಲ್ಲಿ ಅಂಗಡಿಯ ಮುಂದಿನ ನಾಕೈದು ಮನೆಗಳಾಚೆಗಿನ ಮನೆಯ ಮುಂದೆ ನಿಲ್ಲಿಸಿದ ಜೀಪಿನಿಂದ ಬಡ ಬಡನೆ ಇಳಿದ ಪೊಲೀಸರು ಆ ಮನೆಯಿಂದ ವಯಸ್ಕರೊಬ್ಬರನ್ನು ಎಳೆದುಕೊಂಡು ಬಂದು ಜೀಪಿಗೆ ಹತ್ತಿಸಿ ಬಿಟ್ಟರು. ಮನೆಯ ಮಹಿಳೆಯರು ನೆರವಿಗಾಗಿ ಕೂಗುತ್ತಿದ್ದಾರೆ. ಜಡಿ ಮಳೆ ಬೇರೆ ಸುರಿಯುತ್ತಿದೆ. ಮಳೆಯಲ್ಲಿ ನೆನೆದುಕೊಂಡೇ ಜೀಪಿನ ಬಳಿ ಮತ್ತೆ ತೆರಳಿದೆ. ಏನಾಗಿದೆ ಸರ್? ಯಾಕೆ ಅವರನ್ನು ಜೀಪಲ್ಲಿ ಕೂರಿಸ್ತಿದ್ದೀರಿ ಎಂದು ಮತ್ತೆ ಪ್ರಶ್ನಿಸಿದೆ. ಪೊಲೀಸರೇ ಹೇಳಿದಂತೆ ಗಾಡಿ ಹೊಡೆದುಕೊಂಡು ಬಂದಿರುವುಕ್ಕೂ ಗಾಡಿ ಓಡಿಸಲು ಬಾರದ ವಯಸ್ಕರೊಬ್ಬರನ್ನು ಜೀಪು ಹತ್ತಿಸಿ ಕೂರಿಸುತ್ತಿರುವುದಕ್ಕೂ ಸಂಬಂಧವೇನು ಎಂದು ಕೇಳಲೂ ಅವಕಾಶ ನೀಡದೆ ಪೊಲೀಸ್ ಜೀಪ್ ಭರ್ರನೆ ಸಾಗಿಯೇಬಿಟ್ಟಿತು.
ಎಲ್ಲ ಮುಗಿದ ನಂತರ ತಿಳಿದು ಬಂದದ್ದೇನೆಂದರೆ ಇಬ್ಬರು ಯುವಕರು ಜಾನುವಾರು ಸಾಗಾಟ ಮಾಡುವಾಗ ತಪ್ಪಿಸಿಕೊಂಡಿದ್ದಾರೆ. ಅವರನ್ನು ಬೆನ್ನಟ್ಟಿ ಪೊಲೀಸರು ಬಂದಿದ್ದಾರೆ. ಒಳರಸ್ತೆಗಳಲ್ಲಿ ಅಪಾಯಕಾರಿ ವೇಗದಲ್ಲಿ ವಾಹನ ಚಲಾಯಿಸಿ, ಅವಾಚ್ಯ ಶಬ್ದಗಳನ್ನು ಬಳಸುತ್ತಾ ಬೊಬ್ಬಿರಿದು ಒಂದಷ್ಟು ಹೊತ್ತು ಊರಿಗೆ ಊರೇ ಗೊಂದಲಮಯವಾಗಿದೆ. ಜಾನುವಾರು ಸಾಗಾಟ ಮಾಡುವವರುಂಟು, ಪೊಲೀಸರುಂಟು ಎಂದು ಜನರೆಲ್ಲ ಮನೆ ಸೇರಿದ್ದಾರೆ. ಮನೆಗೆ ಹೋಗಿ ನನ್ನ ಹಿಂದ್ ಳನ್ನು ಎತ್ತಿಕೊಂಡು ನಾನೂ ನಿದ್ದೆಗೆ ಜಾರಿದ್ದೇನೆ.
ಅದಾಗಿ ಸುಮಾರು ಆರು ತಿಂಗಳ ನಂತರ ಈ ವಾರದ ಪ್ರಾರಂಭಕ್ಕೆ ಪೊಲೀಸ್ ವಾರಂಟ್ ಇದೆ ಎಂದು ಊರಿನ ಗೆಳೆಯನೊಬ್ಬನಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಏನು ವಾರಂಟ್ ಎಂದು ಕರೆ ಮಾಡಿ ಕೇಳಿದರೆ ಮೋಟಾರ್ ವೆಹಿಕಲ್ ಆಕ್ಟ್ ಅಂತಲೂ ಠಾಣೆಗೆ ಬನ್ನಿ ಕೂತು ಮಾತನಾಡುವ ಅಂತಲೂ ಪೂಸಿ ಹೊಡೆದಿದ್ದಾರೆ. ವಕೀಲರ ಮೂಲಕ ಮಾಹಿತಿ ಕಲೆಹಾಕಿದಾಗ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2020 ಅಡಿಯಲ್ಲಿ ಸೆಕ್ಷನ್ 5, 7, 12 ಮತ್ತು ಕಾಯ್ದೆ 1960 ಸೆಕ್ಷನ್ 11 ರ ಪ್ರಕರಣ ದಾಖಲಿಸಿ ಆರು ತಿಂಗಳಾಗುತ್ತಾ ಬರುತ್ತಿದೆ. ಸಾಲದ್ದಕ್ಕೆ “ತಲೆಮರೆಸಿಕೊಂಡಿದ್ದಾನೆ” ಎಂದು ನ್ಯಾಯಾಲಯದ ದಾರಿ ತಪ್ಪಿಸಿ ವಾರಂಟ್ ಜಾರಿಯಾಗುವಂತೆ ಮಾಡಿದ್ದಾರೆ.
ಈ ವರ್ಷವಾದರೂ ಹೊಸ ಮನೆಯ ಕೆಲಸ ಪೂರ್ತಿ ಮಾಡಿ ಗೂಡು ಸೇರಿಕೊಳ್ಳಬೇಕು ಎಂದು ಚೀಟಿಗೆ ಕಟ್ಟುತ್ತಿದ್ದ ದುಡ್ಡನ್ನು ಎತ್ತಿಕೊಂಡಿದ್ದೇನೆ. ಅಧಿಕಾರ ಇದೆ ಎಂಬ ಅಹಂಕಾರದಿಂದ ಸುಳ್ಳು ಕೇಸು ದಾಖಲಿಸುವ ಹೇಸಿಗೆ ಇಲ್ಲದವರ ವಿರುದ್ಧ ಹೋರಾಡುವ ಮೊದಲ ಹೆಜ್ಜೆಯಾಗಿ, ನಿರೀಕ್ಷಣಾ ಜಾಮೀನು ಪಡೆಯಬೇಕಿದೆ.
ನನ್ನ ಕೈಯಿಂದ ನೀರು ಪಡೆದು ಕುಡಿದು, ನನ್ನಮ್ಮನ ಕಣ್ಣಲ್ಲಿ ನೀರು ತರಿಸಿದವರ ಈ ಘಟನೆ ನನಗೆ ಅಚ್ಚರಿಯೇನೂ ಉಂಟು ಮಾಡಿಲ್ಲ. ಖಾಕಿಗಳ ಅಧಿಕಾರ ದುರುಪಯೋಗ, ವ್ಯವಸ್ಥೆಯ ಕುರುಡುತನಕ್ಕೆ ಅದೆಷ್ಟು ಮನೆಯಲ್ಲಿ ಅಮಾಯಕ ಹೆತ್ತವರು ಕಣ್ಣೀರಿಡುತ್ತಿರಬಹುದು ಎಂದು ಯೋಚಿಸುತ್ತಲೇ ಇಷ್ಟನ್ನೂ ಬರೆಯುತ್ತಾ ಹೋದೆ.
ದುರ್ಜನರ ಅಟ್ಟಹಾಸಕ್ಕಿಂತ, ಸಜ್ಜನರ ಮೌನ ಈ ದೇಶಕ್ಕೆ ಅಪಾಯಕಾರಿ ಎಂದು ನಂಬಿದವನು ನಾನು. ನನಗೆ ಘನತೆಯ, ಸ್ವಾಭಿಮಾನದ, ಸ್ವಾತಂತ್ರ್ಯದ ಬದುಕನ್ನು ಬದುಕಲು ಅನುವು ಮಾಡಿಕೊಡಲು ತ್ಯಾಗ ಬಲಿದಾನಗೈದ ಭಗತ್, ಬಿಸ್ಮಿಲ್, ಅಶ್ಫಾಕುಲ್ಲಾಹ್ ರಂತಹ ನನ್ನ ಅಣ್ಣಂದಿರ ನೆತ್ತರಿನ ಋಣ ನನ್ನ ಮೇಲೂ ಇದೆ ನೋಡಿ. ಅವರ ಭಾರತವನ್ನು ಕೊಳಕು ಮಾಡುವವರ ವಿರುದ್ಧ ಧ್ವನಿ ಎತ್ತದೇ ಹೋಗಲಾರೆ, ಅವರೆಲ್ಲರ ನೇಣುಕುಣಿಕೆಯೂ ಸಾಕ್ಷಿ ವಹಿಸಿದ ಧೀಮಂತಿಕೆಯಾಣೆ.
shafi