ನೆನಪು
ಸ್ವಾತಂತ್ರ್ಯ ಪೂರ್ವದಲ್ಲಿ ಬರೆಯಲು ಪ್ರಾರಂಭಿಸಿದ್ದ ಲೇಖಕಿ ಕೆದಂಬಾಡಿ ದೇವಕಿ ಎಂ ಶೆಟ್ಟಿಯವರು ತಮ್ಮ 97ರ ವಯಸ್ಸಲ್ಲಿ (23.5.2024ರಂದು) ಕೊನೆಯುಸಿರು ಎಳೆದಿದ್ದಾರೆ. ಕಳೆದ ಶತಮಾನದ ನಾಲ್ಕು- ಐದರ ದಶಕದಲ್ಲಿ ಮಹಿಳೆಯರು ಬರೆಯುತ್ತಿದ್ದುದೇ ಅಪರೂಪ. ಮಹಿಳಾ ಸಾಹಿತ್ಯವನ್ನು ಸಂಪೂರ್ಣ ಕಡೆಗಣಿಸಿದ್ದ ಆ ಕಾಲದಲ್ಲಿ ಬರೆದು ಸೂಕ್ತ ಪ್ರೋತ್ಸಾಹವಿಲ್ಲದೆ ಮೂವತ್ತೈದರ ವಯಸ್ಸಿನಲ್ಲೇ ಸಂಸಾರದ ಒತ್ತಡಗಳಿಗೆ ತಲೆಬಾಗಿ ಬರವಣಿಗೆಯನ್ನು ನಿಲ್ಲಿಸಿದ್ದ ದೇವಕಿ ಎಂ. ಶೆಟ್ಟಿಯವರು ತೆರೆಯ ಮರೆಯ ಕಾಯಿಯಾಗಿಯೇ ಉಳಿದವರು. ಲೇಖಕಿ ಕೆ. ಉಷಾ ಪಿ ರೈ ಯವರು ತಮ್ಮ ಚಿಕ್ಕಮ್ಮ ದೇವಕಿ ಎಂ ಶೆಟ್ಟಿಯವರಿಗೆ ಆಪ್ತವಾಗಿ ಸಲ್ಲಿಸಿದ ನುಡಿ ನಮನ ಇಲ್ಲಿದೆ.
ಕೆದಂಬಾಡಿ ದೇವಕಿ ಎಂ ಶೆಟ್ಟಿಯವರು ಪುತ್ತೂರಿನ ಸಮೀಪದ ಪಾಣಾಜೆ ಹಳ್ಳಿಯ ಕೆದಂಬಾಡಿ ಮನೆತನದ ಮಗಳು. ಹುಟ್ಟುತ್ತಲೇ ತಾಯಿಯನ್ನು ಕಳಕೊಂಡ ಆಕೆ ಬೆಳೆದದ್ದು ದೊಡ್ಡ ಕೂಡುಕುಟುಂಬದಲ್ಲಿ. ಕೆದಂಬಾಡಿ ಮನೆಯಲ್ಲಿ ಶ್ರೀಮಂತಿಕೆಯಿದ್ದಂತೆ ಸಾಹಿತ್ಯಾಸಕ್ತಿ ಇದ್ದ ಹಿರಿಯರೂ ಇದ್ದರು. ಆಗಿನ ಸಾಹಿತ್ಯಾಸಕ್ತಿ ವಿಶಿಷ್ಟ ರೀತಿಯದ್ದು. ರಾಮಾಯಣ, ಮಹಾಭಾರತ, ಭಾಗವತ, ಪುರಾಣಗಳ ಪಠಣಮಾಡಿ ಅರ್ಥ ಹೇಳುವವರು ವಿದ್ಯಾವಂತರೆಂದು ಪರಿಗಣಿಸಿದ್ದ ಕಾಲವದು. ದಕ್ಷಿಣ ಕನ್ನಡದ ಹೆಸರಾಂತ ಅರ್ಥದಾರಿ ಕವಿ ವೆಂಕಪ್ಪ ಶೆಟ್ಟರು ಕೆದಂಬಾಡಿ ಮನೆಯ ಹಿರಿಯ ಅಳಿಯ. ದೇವಕಿಯವರ ದೊಡ್ಡಮ್ಮನ ಗಂಡ. ಅವರು ಕವಿಯೂ ಆಗಿದ್ದರು. ಆ ನಂತರದ ತಲೆಮಾರಿನಲ್ಲಿ ಬಂದವರು ತಮ್ಮ ‘ಬೇಟೆಯ ನೆನಪುಗಳು’ ಕೃತಿಗೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದ ಮೃಗಯಾ ಸಾಹಿತಿಯೆಂದೇ ಹೆಸರು ಪಡೆದಿದ್ದ ಕೆದಂಬಾಡಿ ಜತ್ತಪ್ಪ ರೈಗಳು. ಇವರು ದೇವಕಿಯವರ ದೊಡ್ಡಮ್ಮನ ಮಗ. ಹಲವಾರು ತುಳು ಕನ್ನಡ ಕೃತಿಗಳನ್ನು ಬರೆದು ಬಹುಮಾನಗಳನ್ನು ಗಳಿಸಿದವರು.
ಅರುವತ್ತರ ವಯಸ್ಸಿನಲ್ಲಿ ಬರೆಯಲು ಸುರುಮಾಡಿದ ಅಣ್ಣ ಜತ್ತಪ್ಪ ರೈಗಳಿಗಿಂತ ಮೊದಲೇ ಕಥೆಗಳನ್ನು ಬರೆದು ಅವು ಆಗಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಆದರೂ ಸರಿಯಾದ ಪ್ರೋತ್ಸಾಹವಿಲ್ಲದೆ ಮೂವತ್ತೈದರ ವಯಸ್ಸನ್ನು ತಲಪುವಾಗ ಸಂಸಾರದ ಒತ್ತಡಗಳಿಗೆ ತಲೆಬಾಗಿ ಬರವಣಿಗೆಯನ್ನು ನಿಲ್ಲಿಸಿದ್ದ ದೇವಕಿ ಎಂ. ಶೆಟ್ಟಿಯವರು ತೆರೆಯ ಮರೆಯ ಕಾಯಿಯಾಗಿಯೇ ಇದ್ದುದರಲ್ಲಿ ಅಚ್ಚರಿಯಿಲ್ಲ. ಮಹಿಳಾ ಸಾಹಿತ್ಯವನ್ನು ಸಂಪೂರ್ಣ ಕಡೆಗಣಿಸಿದ್ದ ಕಾಲದಲ್ಲಿ ಹೆಚ್ಚಿನ ಪ್ರೋತ್ಸಾಹದ ನಿರೀಕ್ಷೆಯೂ ಸಾಧ್ಯವಿರಲಿಲ್ಲ. ಕಳೆದ ಶತಮಾನದ ನಾಲ್ಕು ಐದರ ದಶಕದಲ್ಲಿ ಮಹಿಳೆಯರು ಬರೆಯುತ್ತಿದ್ದುದೇ ಅಪರೂಪ. ಬರೆಯುತ್ತಿದ್ದವರಲ್ಲೂ ಶೇ. 99.5 ರಷ್ಟು ಲೇಖಕಿಯರು ಮೇಲ್ವರ್ಗದಿಂದ ಬಂದವರು. ಅವರ ಅನುಭವಗಳೇ ಬೇರೆ. ಅವರು ನೋಡುತ್ತಿದ್ದ ಸಮಸ್ಯೆಗಳೇ ಬೇರೆ. ಆಗ ಬಂಟರಲ್ಲಿ ಬರೆಯುತ್ತಿದ್ದವರು ಚಂದ್ರಭಾಗಿ ರೈ ಮತ್ತು ದೇವಕಿ ಎಂ ಶೆಟ್ಟಿ ಇಬ್ಬರೇ ಎಂದು ಹೇಳಬಹುದು.
ಆಗಿನ ಸಾಹಿತ್ಯವನ್ನು ಈಗಿನಂತೆ ವರ್ಗೀಕರಣ ಮಾಡುವುದಾದರೆ ದೇವಕಿಯವರು ಬರೆದದ್ದನ್ನು ದಲಿತ-ಬಂಡಾಯ ಸಾಹಿತ್ಯವೆಂದು ಪರಿಗಣಿಸಬಹುದು. ದೇವಕಿಯವರು ಆಗ ಬರೆಯುತ್ತಿದ್ದ ಬ್ರಾಹ್ಮಣ ಲೇಖಕಿಯರಿಗಿಂತ ಭಿನ್ನ ಪರಿಸರದಿಂದ ಬಂದವರಾದುದರಿಂದ ಅವರ ಅನುಭವಗಳು ಭಿನ್ನವಾಗಿ ವಿಶಿಷ್ಟವಾಗಿದ್ದುವು. ಕೆಳವರ್ಗದ ಜನರ ಜೀವನವನ್ನೂ ಅವರು ಹತ್ತಿರದಿಂದ ನೋಡಿದ್ದರಿಂದ ಅದನ್ನೇ ಅವರು ತಮ್ಮ ಸಾಹಿತ್ಯದಲ್ಲಿ ಬಿಂಬಿಸಿದ್ದಾರೆ. ಅವರ ‘ಜಾತಿ ಭೂತಕ್ಕೆ ಬಲಿ’ ದಲಿತರನ್ನು ಪ್ರತಿನಿಧಿಸಿರುವ ಕಥೆ.
ಚಿಕ್ಕಂದಿನಿಂದಲೂ ಧೈರ್ಯವಂತೆ. ಅನ್ಯಾಯ ಕಂಡರೆ ಸಿಟ್ಟಾಗುತ್ತಿದ್ದರು. ಹೆಣ್ಣು ಮಕ್ಕಳಿಗೆ ವಿದ್ಯೆ ಬೇಡ ಎನ್ನುವ ಕಾಲದಲ್ಲೂ ಮೆಟ್ರಿಕ್ಯುಲೆಶನ್ ವರೆಗೆ ಓದಿದ್ದರು. ವಿದ್ಯಾವಂತಳಾದ ಹುಡುಗಿಯ ಮೇಲೆ ಗಾಂಧೀಜಿಯವರ ಸಮಾಜ ಸುಧಾರಣಾ ಕೆಲಸಗಳು ಬಹಳ ಪ್ರಭಾವ ಬೀರಿದ್ದವು. ಜಾತಿಬೇಧದ ತಾರತಮ್ಯವನ್ನು ನೋಡುತ್ತಲೇ ಬೆಳೆದಿದ್ದರು. ಹಾಗಾಗಿ ಅವರು ಬರೆಯಲು ಆರಿಸಿಕೊಂಡದ್ದು ಅವರ ಕಾಲದಲ್ಲಿ ದಲಿತರಿಗಾಗುತ್ತಿದ್ದ ಅನ್ಯಾಯದ ಬಗ್ಗೆ. ಒಬ್ಬ ಬಂಟ ಹುಡುಗಿ ತಂದೆಗೆ ಎದುರು ನಿಂತು ಒಂದು ಮಾದಿಗ ಕುಟುಂಬಕ್ಕೆ ಅವರ ಹಕ್ಕನ್ನು ಒದಗಿಸಿಕೊಟ್ಟು ಪ್ರಾಣ ಕಳಕೊಂಡ ಘಟನೆಯ ಸುತ್ತ ಅವರ ʼಜಾತಿಭೂತಕ್ಕೆ ಬಲಿʼ ಕಥೆ ಹೆಣೆದು ಕೊಂಡಿದೆ.
ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಹುಟ್ಟಿ ಎರಡು ಮಹಾಯುದ್ಧಗಳ ಬೇಗೆಯಲ್ಲಿ ಬೆಂದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುತ್ತಿದ್ದ ದೇಶಭಕ್ತ ಹಿರಿಯರ ಮಧ್ಯೆ ಬೆಳೆದು, ಸಾತಂತ್ರ್ಯ ಸಿಕ್ಕಿದ ಸಂಭ್ರಮವನ್ನು ಅನುಭವಿಸಿ, ಮನೆಯಲ್ಲಿದ್ದುಕೊಂಡೇ ಗಾಂಧಿತತ್ವಗಳಿಗೆ ಮನಸೋತು ಅವರ ಆದರ್ಶಗಳಲ್ಲಿ ಬದುಕುವ ಪಣತೊಟ್ಟ ಹುಡುಗಿ ಲೇಖನಿ ಹಿಡಿದಾಗ ಅವಳ ಲೇಖನಿಯಿಂದ ಹರಿದು ಬಂದದ್ದು ಅಂದಿನ ಬದುಕಿನ ಚಿತ್ರಣಗಳೇ.
ಬಾಲ್ಯದಲ್ಲಿ ದೇವಕಿಯವರನ್ನು ಕಾಡಿದ್ದು ಸಾಮಾಜಿಕ ಅವ್ಯವಸ್ಥೆ, ಜಾತಿವ್ಯವಸ್ಥೆ, ದೇಶಭಕ್ತಿ ಮತ್ತು ಸ್ವಾತಂತ್ರ್ಯ ಹೋರಾಟ, ಗಾಂಧೀ ತತ್ವಗಳು, ಪಾಕಿಸ್ತಾನದ ವಿಭಜನೆ ಇತ್ಯಾದಿ. ಹತ್ತೊಂಭತ್ತರ ಶತಮಾನದ ಲೇಖಕಿಯರು ಬರೆಯುತ್ತಿದ್ದ ವಿಧವಾ ಸಮಸ್ಯೆಗಳು, ಮರುಮದುವೆ, ಸತಿಪದ್ಧತಿ, ಬಾಲ್ಯವಿವಾಹ ಇಂತಹ ಸಮಸ್ಯೆಗಳು ಇಪ್ಪತ್ತರ ಶತಮಾನದ ಪ್ರಾರಂಭದ ಕೆಲವು ಲೇಖಕಿಯರನ್ನು ಕಾಡದೆ ಅದಕ್ಕಿಂತ ಭಿನ್ನವಾದ ಸಮಸ್ಯೆಗಳತ್ತ ಅವರನ್ನು ಸೆಳೆದುದರಲ್ಲಿ ಅಚ್ಚರಿಯಿಲ್ಲ. ಯಾಕೆಂದರೆ ರಾಜಾರಾಮ ಮೋಹನರಾಯರು ಕೈಗೊಂಡ ಸಮಾಜ ಸುಧಾರಣಾ ಚಳುವಳಿಗಳು, ಮಹಿಳೆಯರಿಗೆ ಗಾಂಧೀಜಿ ತೋರಿಸಿದ ಗೌರವ ಮಹಿಳೆಯರ ಬದುಕಿನ ಹೀನಾಯ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿತ್ತು. ಮಹಿಳೆಯರೂ ಸ್ವಾತಂತ್ರ್ಯ ಚಳುವಳಿಗಳಲ್ಲಿ ಭಾಗವಹಿಸುವ ಸ್ವಾತಂತ್ರ್ಯ ಪಡೆದಿದ್ದರು.
ಬಂಟರಲ್ಲಿದ್ದ ಮಾತೃಪ್ರಧಾನ ಪದ್ಧತಿಯಿಂದಾಗಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಸ್ಥಾನವಿತ್ತು. ಈ ಕಾಲದಲ್ಲಿ ಬರೆಯಲು ಸುರುಮಾಡಿದ ಕೆಲವು ಪ್ರಜ್ಞಾವಂತ ಲೇಖಕಿಯರು ಹಿಂದಿನವರಿಗಿಂತ ಭಿನ್ನವಾಗಿ ಬರೆಯುವ ಪ್ರಯತ್ನ ಮಾಡಿದ್ದರು. ಅಂಥವರಲ್ಲಿ ಒಬ್ಬರು ನನ್ನ ತಾಯಿಯ ತಂಗಿ ನನ್ನ ಚಿಕ್ಕಮ್ಮ ದೇವಕಿ ಎಂ ಶೆಟ್ಟಿಯವರು. ಅವರ ಕಥೆಗಳಲ್ಲಿ ನಿರೂಪಿತವಾದದ್ದು ಜನರನ್ನು ಕಾಡುತ್ತಿದ್ದ ಮೂಢನಂಬಿಕೆಗಳು, ಅಸ್ಪೃಶ್ಯತಾ ನಿವಾರಣೆ, ಜಾತಿಪದ್ಧತಿಯ ನಿರಾಕರಣೆ, ಪಾಕಿಸ್ತಾನ ವಿಭಜನೆಯಿಂದ ಜನರು ಅನುಭವಿಸಿದ ನೋವು, ಇತ್ಯಾದಿ. ಅವರು ಬರೆದದ್ದು 1945 ರಿಂದ 1962 ರ ಕಾಲಘಟ್ಟದಲ್ಲಿ. ಸಂಸ್ಕಾರವಂತ ಪತಿಯ ಕೈಹಿಡಿದಿದ್ದರೂ ಜೀವನದಲ್ಲಿ ಅವರಿಗೆ ಸಿಕ್ಕಿದ್ದು ಬರೇ ನೋವುಗಳು. ಆದರೆ ನೋವುಗಳ ಕೆಂಡದ ಮೇಲೆ ನಿಂತಿದ್ದರೂ ಅವರು ಅಂತಹ ಬದುಕಿಗೆ ಸವಾಲೆಸೆಯುತ್ತಾ ಬದುಕಿದ್ದು ನಗುನಗುತ್ತಾ. ಅವರ ಜೀವನವೇ ಒಂದು ಯಶೋಗಾಥೆ. ಫೀನಿಕ್ಸ್ ಹಕ್ಕಿಯಂತೆ ಅವರು ಕಷ್ಟಗಳ ಕುಂಡದಿಂದ ಎದ್ದೆದ್ದು ಜೀವನವನ್ನು ಎದುರಿಸಿದ್ದಾರೆ. ಅದು ಅವರು ಬರೆದ ಕಥೆಗಳಿಗಿಂತ ಆದರ್ಶವಾದದ್ದು. ಜೀವನವನ್ನು ಎದುರಿಸುವ ಎದೆಗಾರಿಕೆ ಅವರಿಂದ ಕಲಿಯಬೇಕು.
ಆಗಿನ ಕಾಲದ ಬಹುಪಾಲು ಲೇಖಕಿಯರ ಬರಹದಲ್ಲಿ ಮುಖ್ಯವಾಗಿ ಗೋಚರಿಸಿದ್ದು ಮಹಿಳೆಯರ ಜೀವನದ ಕಷ್ಟ ಕಾರ್ಪಣ್ಯಗಳು, ಹೆಣ್ಣಿನ ಸಮಸ್ಯೆಗಳು, ನಾಲ್ಕು ಗೋಡೆಗಳ ಒಳಗೇ ಅವರು ಅನುಭವಿಸಿರುವ ನೋವುಗಳು, ವಿಧವೆಯರ ಬವಣೆಗಳು, ಬಹುಪತ್ನಿತ್ವದ ಸಮಸ್ಯೆಗಳು, ಬಾಲ್ಯ ವಿವಾಹ, ವಿಷಮ ವಿವಾಹ, ಇತ್ಯಾದಿ. ಆದರೆ ಇವರು ದನಿ ಎತ್ತಿ ಬರೆದುದು ಸಾಮಾಜಿಕವಾಗಿ ಬೇರೂರಿದ್ದ ಜಾತಿ ವ್ಯವಸ್ಥೆಯ ವಿರುದ್ಧ. ಮೇಲು ಕೀಳು ಎನ್ನದೆ ಎಲ್ಲರೂ ಸಮಾನರು ಎನ್ನುವಂತೆ ಬದುಕುವ ಹಕ್ಕು ಎಲ್ಲರಿಗೂ ಇದೆ ಎನ್ನುವ ಮಾನವೀಯ ಸಂವೇದನೆ, ಅವರ ಪ್ರಗತಿಪರ ಧೋರಣೆ ಅಚ್ಚರಿ ಹುಟ್ಟಿಸುತ್ತಲೇ ನನ್ನನ್ನು ಆಕರ್ಷಿಸಿತ್ತು. ಇಷ್ಟವೂ ಆಗಿತ್ತು. ಅವರು ಸುಮಾರು ಕಥೆಗಳನ್ನು, ನಗೆ ಬರಹಗಳನ್ನು ಬರೆದಿದ್ದು ಅವು ಆಗಿನ ಕಾಲದ ನವಯುಗ, ಅಂತರಂಗ, ಕರ್ಮವೀರ, ಪ್ರಜಾಮತ ಪೇಪರುಗಳಲ್ಲಿ ಪ್ರಕಟವಾಗಿತ್ತು. ಆದರೆ ಬೇಸರದ ಸಂಗತಿಯೆಂದರೆ ಈಗ ಅವೆಲ್ಲೂ ಲಭ್ಯವಿಲ್ಲ. ಸ್ವತಹ ಲೇಖಕಿಯ ಹತ್ತಿರವೂ ಅವರ ಕಥೆಗಳಿಲ
ದೇವಕಿ ಶೆಟ್ಟಿಯವರ ಸಾಹಿತ್ಯ ರಚನೆ ಆದದ್ದು ಸುಮಾರು 1945 ರಿಂದ 1960 ರ ದಶಕದ ವರೆಗೆ. ಆ ಮೇಲೆ ಅವರ ಜೀವನದಲ್ಲಿ ಎದ್ದ ಬಿರುಗಾಳಿ ಅವರ ಸಾಹಿತ್ಯ ಸಾಧನೆಗೆ ಮಾರಕವಾಗಿತ್ತು. ಕಣ್ಣೆದುರು ಕಷ್ಟಗಳ ಪರ್ವತಗಳೇ ಎದ್ದು ನಿಂತಿರುವಾಗ ಅದನ್ನು ಬದಿಗಿಟ್ಟು ಬರೆಯುವುದಾದರೂ ಹೇಗೆ? ಅಲ್ಲದೇ ಗಂಡನಿಂದ ಅವರ ಬರಹಕ್ಕೆ ಹೆಚ್ಚಿನ ಪ್ರೋತ್ಸಾಹವಿರಲಿಲ್ಲ. ಅಕ್ಕನ ಹಾಗೂ ಭಾವನ ಪ್ರೋತ್ಸಾಹದಿಂದ ಅವರ ಬರವಣಿಗೆ ಕುಂಟುತ್ತಾ ಸಾಗಿದ್ದರೂ ಮಕ್ಕಳ ಆರೈಕೆ ಅವರ ಕೆಲಸಗಳೇ ಕೈತುಂಬಾ ಇರುವಾಗ ಬರೆಯುವ ಸಮಯವಾಗಲೀ ನೆಮ್ಮದಿಯಾಗಲೀ ಎಲ್ಲಿಂದ ಬರಬೇಕು? ಅಲ್ಲದೆ ಬೀರೂರು ಚಿಕ್ಕ ಊರು. ಆಗಿನ ಕಾಲದಲ್ಲಿ ಅಲ್ಲಿ ಹೆಂಗಸರು ಹೊರಗೆ ತಿರುಗಾಡುವುದು, ಅಂಗಡಿಗೆ ಹೋಗುವುದು ನಿಷಿದ್ಧವೇ ಆಗಿತ್ತು.
ದೇವಕಿಯವರ ಕಥೆಗಳು ಪೇಪರಿನಲ್ಲಿ ಬಂದಾಗ ನಾಲ್ಕು ಜನರು ಅದನ್ನು ಹೊಗಳುವುದು, ಹಲವರಿಂದ ಮೆಚ್ಚುಗೆಯ ಪತ್ರಗಳು ಬರುವುದು ಯಾವ ಹಿರಿಯರಿಗೂ ಮೆಚ್ಚುಗೆಯಾಗುತ್ತಿರಲಿಲ್ಲ. ಇದರಿಂದ ದೇವಕಿಯರ ಬರೆಯುವ ಹುಮ್ಮಸ್ಸು ಇಳಿದುದರಲ್ಲಿ ಅಚ್ಚರಿಯಿಲ್ಲ. ಬರೆಯಬೇಕೆನ್ನುವ ತುಡಿತ ತೀವ್ರವಾಗಿದ್ದರೂ ಮನೆಯ ಪ್ರತಿಕೂಲ ವಾತಾವರಣ ಅವರನ್ನು ಬರವಣಿಗೆಯಿಂದ ದೂರ ಇಟ್ಟಿತ್ತು. ಅವರ ಬರವಣಿಗೆಗೆ ಮನಪೂರ್ವಕ ಪ್ರೋತ್ಸಾಹ ಸಿಕ್ಕಿದ್ದು ಅಕ್ಕನ ಗಂಡ ನವಯುಗದ ಸಂಪಾದಕರಾಗಿದ್ದ ಕೆ. ಹೊನ್ನಯ್ಯ ಶೆಟ್ಟಿಯವರಿಂದ. ಅದನ್ನವರು ಯಾವಾಗಲೂ ಅಭಿಮಾನದಿಂದ ಜ್ಞಾಪಿಸಿ ಕೊಳ್ಳುತ್ತಿದ್ದರು. ಭಾವ ಅವರ ಕಥೆಗಳನ್ನು ಪ್ರಕಟಿಸದಿದ್ದರೆ ಲೇಖಕಿಯೇ ಆಗುತ್ತಿರಲಿಲ್ಲ ಎನ್ನುವುದು ದೇವಕಿಯವರ ಬಲವಾದ ನಂಬುಗೆ.
ದೇವಕಿಯವರು ಮೊದಲ ಕಥೆ ಬರೆದದ್ದು ಅವರು 9 ನೇ ತರಗತಿಯಲ್ಲಿರುವಾಗ. ಅದೇ ‘ಜಾತಿ ಭೂತಕ್ಕೆ ಬಲಿ’. ತಾಯಿಮನೆಗೆ ಬಂದಿದ್ದ ಅಕ್ಕ ಪದ್ಮ ಈ ಕಥೆಯನ್ನು ಓದಿ ಅಭಿಮಾನದಿಂದ ತಂದು ಗಂಡನ ಕೈಯಲ್ಲಿಟ್ಟಿದ್ದರು. ಅದನ್ನು ಭಾವ ಓದಿ ಖುಷಿ ಪಟ್ಟು ತಾವು ಪ್ರಕಟಿಸುತ್ತಿದ್ದ ಅಂದಿನ ಕಥೆಗಳಿಗೆಂದೇ ಮೀಸಲಾಗಿದ್ದ ಜನಪ್ರಿಯ ಮಾಸಿಕ ಅಂತರಂಗದಲ್ಲಿ ಪ್ರಕಟಿಸಿದ್ದರು. ಮತ್ತೆ ಅದು ಅವರೇ ಪ್ರಕಟಿಸಿದ “ಕಥಾವಳಿ” ಕಥಾಸಂಕಲನದಲ್ಲಿ ಪ್ರಕಟವಾಗಿ ನಾಲ್ಕು ಮರು ಮುದ್ರಣಗಳನ್ನು ಕಂಡಿತ್ತು. ಆದರೆ ಇವತ್ತು ಅದರ ಪ್ರತಿಗಳು ಲಭ್ಯವಿಲ್ಲ.
ಖ್ಯಾತ ವಿಮರ್ಶಕ ಡಾ ಜಿ. ಎಸ್. ಅಮೂರ್ ರವರು ಸುಮಾರು ಎಂಟು ವರ್ಷಗಳ ಹಿಂದೆ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದವರು ಪ್ರಕಟಿಸಿದ್ದ ಪುಸ್ತಕದಲ್ಲಿ ಸ್ವಾತಂತ್ರ್ಯ ಪೂರ್ವ ಲೇಖಕಿಯರ ಕಥೆಗಳನ್ನು ಸಮೀಕ್ಷಿಸುತ್ತಾ ಬರೆದ ಲೇಖನವೊಂದರಲ್ಲಿ ಆಗಿನ ಕಾಲದ ಲೇಖಕಿಯರಿಗಿಂತ ಭಿನ್ನವಾಗಿ ಬರೆದ ದಕ್ಷಿಣ ಕನ್ನಡದ ಲೇಖಕಿಯಾದ ಕೆ. ದೇವಕಿಯವರ ‘ಜಾತಿಭೂತಕ್ಕೆ ಬಲಿ’ ಕಥೆಯನ್ನು ಗುರುತಿಸಿ ಆ ಕಥೆಯಲ್ಲಿನ ಪುರೋಗಾಮಿ ದೃಷ್ಟಿ ಅಚ್ಚರಿ ಹುಟ್ಟಿಸುತ್ತದೆ ಎನ್ನುವ ಮಾತನ್ನು ಬರೆದಿದ್ದರು. ಡಾ. ಅಮೂರರಂತಹ ವಿಮರ್ಶಕರಿಂದ ಗುರುತಿಸಲ್ಪಟ್ಟ ಈ ಲೇಖಕಿ ಯಾರ ಗಮನವನ್ನೂ ಸೆಳೆದಿರದಿರುವುದು ಅಚ್ಚರಿಯೇ. ಇದು ಹಿಂದಿನಿಂದಲೂ ಲೇಖಕಿಯರಿಗಾದ ಅನ್ಯಾಯ. ಇಂತಹ ಅಚಾತುರ್ಯ ಹಲವು ಲೇಖಕಿಯರಿಗಾಗಿದೆ. ಕಳೆದೇ ಹೋಗಿದ್ದ ಈ ಕಥೆಯನ್ನು ಹುಡುಕಿ ಕರ್ನಾಟಕ ಲೇಖಕಿಯರ ಸಂಘ 2005ರಲ್ಲಿ ಪ್ರಕಟಿಸಿರುವ ಕಥಾಸಂಕಲನ ‘ಲೇಖಕಿಯರ ಸಣ್ಣಕಥೆಗಳು- ಭಾಗ 2’ ರ ಮೊದಲ ಸಂಪುಟದಲ್ಲಿ ಪ್ರಕಟಿಸಿದ್ದು ಮಾತ್ರವಲ್ಲದೆ ಎಪ್ಪತ್ತೈದರ ಇಳಿವಯಸ್ಸಿನಲ್ಲಿ, ಅಲ್ಲಿಯವರೆಗೆ ಯಾರಿಂದಲೂ ಗುರುತಿಸಲ್ಪಟ್ಟಿರದ ಲೇಖಕಿಯನ್ನು ಕರ್ನಾಟಕ ಲೇಖಕಿಯರ ಸಂಘ ಸನ್ಮಾನಿಸಿರುವುದು ಲೇಖಕಿಗೆ ಸಂದ ಗೌರವವಾಗಿದೆ.
ಹತ್ತಿರ ಹತ್ತಿರ ಏಳು ದಶಕಗಳ ಹಿಂದೆ ಬರೆದ ಈ ಕಥೆಯಲ್ಲಿ ವ್ಯಕ್ತವಾಗಿರುವ ಅಂದಿನ ಸಾಮಾಜಿಕ ಪರಿಸರ, ಜನರಲ್ಲಿ ತುಂಬಿದ್ದ ಮೂಢ ನಂಬಿಕೆಗಳು, ಅಂಧಶ್ರದ್ಧೆ, ಅಸ್ಪೃಶ್ಯತೆ, ಅದರ ವಿರುದ್ಧ ನಾಯಕಿಯ ಪ್ರತಿಭಟನೆ, ಅವಳನ್ನು ತಟ್ಟಿದ ಗಾಂಧಿ ತತ್ವಗಳು, ಸ್ವಾತಂತ್ರ್ಯದ ಕಲ್ಪನೆ, ಅವಳಲ್ಲಿ ತುಂಬಿರುವ ಆದರ್ಶ ಹಾಗೂ ಮಾನವತಾವಾದ, ಇದರ ಹಿಂದಿರುವ ಪುರೋಗಾಮಿ ದೃಷ್ಟಿ ಇತ್ತೀಚೆಗಿನ ಸ್ತ್ರೀವಾದಕ್ಕೆ ಪೂರಕವಾದದ್ದು. ಇವತ್ತಿನ ಕಥಾ ನಾಯಕಿಯರಲ್ಲಿ ಇಂತಹ ಚಿತ್ರಣಗಳು ಕಾಣೆಯೇ ಆಗಿದೆ.
ಕೌಟುಂಬಿಕ ವಿವರ–ತಂದೆ : ಬೆಳ್ಳಿಪ್ಪಾಡಿ ಮಂಜಪ್ಪ ರೈ ತಾಯಿ: ಕಲ್ಯಾಣಿ ರೈ. ಹುಟ್ಟಿದ ದಿನಾಂಕ: 10-11-1927 .ಹುಟ್ಟಿದ ಊರು ಪಾಣಾಜೆ, ಪುತ್ತೂರು. ವಿದ್ಯಾರ್ಹತೆ: ಎಸ್. ಎಸ್. ಎಲ್. ಸಿ. ಪತಿ: ಡಾ. ಐಕಳ ಮಹಾಬಲ ಶೆಟ್ಟಿ ಮಕ್ಕಳು: ಲತಾ ಶೆಟ್ಟಿ, ಭಾರತಿ ಶೆಟ್ಟಿ, ಚೈತನ್ಯ ಶೆಟ್ಟಿ, ಗೌತಮಿ ಶೆಟ್ಟಿ.
ಅದರ ನಂತರ ಬರೆದ ಸಣ್ಣಕಥೆಗಳು ನವಯುಗದಲ್ಲಿಯೇ ಪ್ರಕಟಗೊಂಡಿದ್ದವು. ಮುಂದೆ ಅವುಗಳು 1950ರಲ್ಲಿ ನವಭಾರತ ಪುಸ್ತಕ ಪ್ರಕಾಶನದಲ್ಲಿ ಪುಸ್ತಕ ರೂಪದಲ್ಲಿ ‘ಯಮನ ಸೋಲು ಮತ್ತು ಇತರ ಕಥೆಗಳು’ ಎನ್ನುವ ಹೆಸರಿನಲ್ಲಿ ಪ್ರಕಟವಾಗಿತ್ತು. ಇದರಲ್ಲಿ ಒಟ್ಟು ಆರು ಕಥೆಗಳಿವೆ. ಯಮನ ಸೋಲು, ನಕ್ಕರೂ ನಗಬಹುದು, ಅಬ್ಬಾ… ಕುಲೆ, ಕರುಳಿನ ಭೇದ ಮತ್ತೆರಡು ಕತೆಗಳ ಹೆಸರು ಲೇಖಕಿಗೂ ನೆನಪಿಲ್ಲ.
“ಯಮನ ಸೋಲು” ಕಥಾನಾಯಕಿ ಸಾವಿತ್ರಿ ಯಾವುದೋ ಒಂದು ಮಾತ್ರೆ ತೆಗೆದುಕೊಂಡು ಅದು ರಿಯಾಕ್ಷನ್ ಆದಾಗ ಒಂದು ರೀತಿಯ ಅರೆಪ್ರಜ್ಞೆ ಸ್ಥಿತಿಯಲ್ಲಿರುವಾಗ ತಾನು ಸಾಯುತ್ತಿದ್ದೇನೆ ಆದರೆ ಬದುಕ ಬೇಕು ಎನ್ನುವ ಅವಳ ತುಡಿತ ಅದಕ್ಕಾಗಿ ಯಮನೊಡನೆ ಹೋರಾಡಿ ಅವನನ್ನು ಸೋಲಿಸಿದ ಕಥೆ. ಡಾಕ್ಟರ ಹೆಂಡತಿಯಾಗಿ ಮಾತ್ರೆ, ರಿಯಾಕ್ಷನ್‌ಗಳ ಬಗ್ಗೆ ಸರಿಯಾದ ಮಾಹಿತಿ ಇದ್ದುದರಿಂದ ಕಥೆಯಲ್ಲಿ ನೈಜತೆ ಇದೆ.
ʼನಕ್ಕರೂ ನಗಬಹುದುʼ ಕೃತಿ ಚೌರ್ಯವನ್ನು ಗೇಲಿ ಮಾಡಿ ಬರೆದ ಕಥಾರೂಪದ ನಗೆಬರಹ. ನಾಯಕಿ ತಾನೂ ಲೇಖಕಿಯಾಗಬೇಕು ಹೆಸರು ಗಳಿಸಬೇಕು ಎನ್ನುವ ಉಮೇದಿನಲ್ಲಿ ಅದಾಗಲೇ ಅಚ್ಚಾಗಿದ್ದ ಬೇರೆ ಬೇರೆ ಕಥೆಗಳಿಂದ ಸ್ವಲ್ಪ ಸ್ವಲ್ಪ ತೆಗೆದು ಒಟ್ಟುಮಾಡಿ ಒಂದು ಕಥೆ ಹೆಣೆಯುವುದು. ಅದು ಕೊನೆಯಲ್ಲಿ ಒಂದು ಬೇರೆಯೇ ಕಥೆಯಾಗಿ ರೂಪು ಗೊಳ್ಳುವುದು. ಓದುಗರಿಗೆ ಕಚಗುಳಿ ಇಡುತ್ತಲೇ ಸಾಗುವ ಕಥೆ ಒಂದು ಹಾಸ್ಯ ಕಥೆಯಾಗಿ ಮೂಡಿ ಬಂದಿರುವುದು ಲೇಖಕಿಯ ಕಥೆ ಹೇಳುವ ಜಾಣ್ಮೆಗೆ ನಿದರ್ಶನವಾಗಿದೆ.
“ಅಬ್ಬಾ…ಕುಲೆ ’ ಭೂತಗಳ ಮೇಲಿನ ಅಂದಿನ ಮೂಢ ನಂಬಿಕೆಯನ್ನೇ ಬಂಡವಾಳವಾಗಿಟ್ಟುಕೊಂಡು ಬರೆದ ಕಥೆ. ಹಿಂದೆ ಅರುವತ್ತು ಎಪ್ಪತ್ತು ಜನರಿದ್ದ ದೊಡ್ಡ ದೊಡ್ಡ ಗುತ್ತಿನ ಮನೆಗಳಲ್ಲಿ ಅರ್ಧವಾಸಿ ಮಕ್ಕಳೇ ಇರುತ್ತಿದ್ದರು. ಜಾಗ ಸಿಕ್ಕಿದ್ದಲ್ಲಿ ಮಕ್ಕಳು ಮಲಗಿರುತ್ತಿದ್ದರು. ಮನೆಯಲ್ಲಿ ಲೈಟಿಲ್ಲ. ಸಂಜೆ ಲಾಂಟಾನು ಹೊತ್ತಿಸಿದರೂ ರಾತ್ರಿ ಎಲ್ಲ ದೀಪಗಳನ್ನೂ ಆರಿಸಿ ಮಲಗುತ್ತಿದ್ದರು. ಅದೂ ರಾತ್ರಿ ಮಲಗುತ್ತಿದ್ದುದು ಬೇಗ. ರಾತ್ರಿ ಬೇಗ ಮಲಗಿದ್ದ ಮಕ್ಕಳಿಗೆ ಮಧ್ಯರಾತ್ರಿ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತಿತ್ತು. ಹೊರಗೆ ಹೋಗಿ ಅಲ್ಲೇ ಅಂಗಳದ ಬದಿಯಲ್ಲಿ ಕುಳಿತು ಮೂತ್ರಮಾಡಿ ಬರಬೇಕಿತ್ತು. ಬಚ್ಚಲುಮನೆ ಮನೆಯಿಂದ ಒಂದೆರಡು ಫರ್ಲಾಂಗು ದೂರದಲ್ಲಿ ಇರುತ್ತಿತ್ತು. ಪಾಯಿಖಾನೆಗಳಂತೂ ಇಲ್ಲವೇ ಇಲ್ಲದ ಕಾಲ. ಅವರಿಗೆ ಮನೆಯ ಸುತ್ತಲಿದ್ದ ಸಣ್ಣ ಸಣ್ಣ ಕಾಡುಗಳೇ ಪಾಯಿಖಾನೆಗಳು. ಹಗಲಿನಲ್ಲಿ ಇದು ಕಷ್ಟವಾಗುತ್ತಿರಲಿಲ್ಲ. ಆದರೆ ರಾತ್ರಿ ಹೊರಗೆ ಹೋಗಬೇಕಾದರೆ ಮಕ್ಕಳನ್ನು ಹೆದರಿಕೆ ಕಾಡುತ್ತಿತ್ತು. ಮಕ್ಕಳು ಕೇಳುತ್ತಿದ್ದ ಭೂತ ಕುಲೆಗಳ ಕಥೆಗಳು ರಾತ್ರಿ ಹೊರಗೆ ಹೋಗಬೇಕಾದರೆ ನೆನಪಿಗೆ ಬಂದು ಹೆದರಿಸುತ್ತಿದ್ದವು. ಧೈರ್ಯಮಾಡಿ ಹೊರಗೆ ಹೋದರೆ ಅಲ್ಲಿ ಯಾರೋ ಸತ್ತು ಹೋಗಿದ್ದವರು ನಿಂತಂತೆ, ಯಾವುದೋ ಸತ್ತುಹೋದ ನಾಯಿ ನಿಂತು ಇವರನ್ನು ದುರುಗುಟ್ಟಿ ನೋಡುತ್ತಿರುವಂತೆ ಭಾಸವಾಗಿ ಅರ್ಧ ಮೂತ್ರಮಾಡಿ ಈ ಮಕ್ಕಳು ಕಣ್ಣು ಮುಚ್ಚಿಕೊಂಡು ಮನೆಯೊಳಗೆ ಧಾವಿಸಿ ಹೊದಿಕೆಯೊಳಗೆ ಸೇರಿಕೊಂಡು ನಡುಗುತ್ತಿದ್ದುದು, ಆ ಕುಲೆಗಳು ತಮ್ಮನ್ನು ಹಿಂಬಾಲಿಸಿಕೊಂಡು ಬಂದಂತೆ ಅನಿಸುತ್ತಿದ್ದು ಎಲ್ಲವನ್ನು ಹೆದರಿಕೆ ಮೂಡುವಂತೆ ಬರೆದ ಕಥೆ ಇದು.
‘ಕರುಳಿನ ಬೇಧ’ ಒಂದು ಮನ ಮಿಡಿಯುವ ಕಥೆ. ಒಂದೇ ತಾಯಿಯ ಇಬ್ಬರು ಹೆಣ್ಣುಮಕ್ಕಳು ಒಟ್ಟಿಗೇ ತವರು ಮನೆಗೆ ಹೆರಲು ಬರುತ್ತಾರೆ. ಒಬ್ಬಳ ಗಂಡನ ಮನೆಯವರು ಶ್ರೀಮಂತರು. ಇನ್ನೊಬ್ಬಳ ಗಂಡನ ಮನೆಯವರು ಬಡವರು. ಈ ಇಬ್ಬರಿಗೆ ತವರು ಮನೆಯಲ್ಲಿ ಸಿಗುವ ಟ್ರೀಟ್‌ಮೆಂಟ್ ಎರಡು ರೀತಿಯದ್ದು. ತಾಯಿಯೇ ತೋರಿಸುವ ಈ ಬೇಧ ಬಡವರ ಮನೆಗೆ ಕೊಟ್ಟ ಮಗಳಿಗೆ ತರುವ ನೋವು ಈ ಕಥೆಯಲ್ಲಿ ಬಿಂಬಿತವಾಗಿದೆ. ಆಗಲೇ ಈ ಡಬ್ಬಲ್ ಸ್ಟಾಂಡರ್ಡ್ ದೇವಕಿಯರನ್ನು ಕಾಡಿತ್ತು. ಎಲ್ಲರೂ ಒಂದೇ ಎನ್ನುವ ಭಾವವಿದ್ದ ಲೇಖಕಿ ತಾಯಿಯೇ ತೋರಿಸುವ ಬೇಧಕ್ಕೆ ತೋರಿಸಿದ ಪ್ರತಿಭಟನೆ ಇಲ್ಲಿ ವ್ಯಕ್ತವಾಗಿದೆ. ಮತ್ತೆರೆಡು ಕಥೆಗಳ ಹೆಸರುಗಳು ಲೇಖಕಿಗೆ ನೆನಪಿಲ್ಲ.
1956 ರಲ್ಲಿ ‘ಆ ಹೆಂಗಸು’ ಎನ್ನುವ ನೀಳ್ಗತೆ ಧಾರಾವಾಹಿಯಾಗಿ ಮತ್ತು ‘ಭಿಕ್ಷುಕ ನೀಡಿದ ಪಾಠ ’ ನವಯುಗದಲ್ಲಿ ಪ್ರಕಟವಾಗಿತ್ತು. ಈಗಿನಂತೆ ಆಗಲೂ ಭಿಕ್ಷುಕರಿಗೆ ಬೈಗಳು ಸಿಕ್ಕುತ್ತಿತ್ತು. ಕೆಲಸ ಮಾಡಲಾಗದ ಒಬ್ಬ ಮುದುಕ ಭಿಕ್ಷೆ ಬೇಡಲು ಬಂದಾಗ ಮನೆಯವರು ಅವನಿಗೆ ಸಿಕ್ಕಾಬಟ್ಟೆ ಬೈದು ಅವಮಾನ ಮಾಡುತ್ತಾರೆ. ಆಗ ಅವನು ನೊಂದುಕೊಂಡು ಮನೆಯವರಿಗೆ ಬುದ್ಧಿ ಹೇಳುತ್ತಾ ನೀವು ನನಗೆ ಏನೂ ಕೊಡದಿದ್ದರೂ ಪರವಾಗಿಲ್ಲ ಆದರೆ ಬೈದು ಅವಮಾನ ಮಾಡಬೇಡಿ ಎಂದು ವಿನಂತಿಸಿಕೊಳ್ಳುವುದು ಇಲ್ಲಿಯ ಕಥಾವಸ್ತು. ಇದನ್ನು ಮನಮಿಡಿಯುವಂತೆ ಚಿತ್ರಿಸಿದ್ದಾರೆ ಲೇಖಕಿ.
‘ಆ ಹೆಂಗಸು’ ಪಾಕಿಸ್ತಾನ ವಿಭಜನೆಯಲ್ಲಿ ಭಾರತಕ್ಕೆ ಬಂದು ಸೇರಿದ ಹೆಂಗಸೊಬ್ಬಳ ಕಥೆ. ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಅಲ್ಲಿದ್ದ ಹಿಂದುಗಳು ನಿರ್ಗತಿರಾಗಿ ಭಾರತಕ್ಕೆ ಬಂದಾಗ ಅವರು ಅನುಭವಿಸಿದ ನೋವುಗಳ ಚಿತ್ರಣ ಇಲ್ಲಿದೆ. ತಂದೆ ಮಗಳು, ಅವಳ ಮಕ್ಕಳು ಭಾರತಕ್ಕೆ ಓಡಿ ಬರುವಾಗ ಅವಳ ಮಕ್ಕಳಿಬ್ಬರ ಕೊಲೆಯಾಗುತ್ತದೆ. ಗಂಡನೂ ಈ ಗಲಾಟೆಯಲ್ಲಿ ಸತ್ತಿರುತ್ತಾನೆ. ತಂದೆ ಮಗಳು ಒಂದು ವರ್ಷ ನಿರಾಶ್ರಿತರ ಕ್ಯಾಂಪಿನಲ್ಲಿದ್ದು ಅಲ್ಲಿಂದ ಏನೇನೋ ಮಾಡಿಕೊಂಡು ಮದ್ರಾಸಿಗೆ ಬಂದು ಜೀವನೋಪಾಯಕ್ಕೆ ಅಲ್ಲಿ ಒಂದು ಟೈಲರಿಂಗ್ ಅಂಗಡಿ ತೆರೆಯುತ್ತಾರೆ. ಅವಳು ತುಂಬಾ ಚೆನ್ನಾಗಿ ಹೊಲಿಯುತ್ತಿದ್ದುದರಿಂದ ಮದ್ರಾಸಿನ ಪ್ರತಿಷ್ಟಿತರು ಅವಳಲ್ಲಿಗೇ ಬಟ್ಟೆಹೊಲಿಸಲು ಹೋಗುತ್ತಿದ್ದರು. ಆದರೆ ಕೆಲವು ಸಲ ಅವಳು ಮಕ್ಕಳ ನೆನಪಿನಲ್ಲಿ ಮನಸ್ಸಿನ ಸ್ಥಿಮಿತವನ್ನು ಕಳಕೊಳ್ಳುತ್ತಿದ್ದಳು. ಆಗ ಯಾರಾದರೂ ಹೆಂಗಸರು ಮಕ್ಕಳು ಅವಳಲ್ಲಿಗೆ ಹೋದರೆ ಅಳತೆ ತೆಗೆಯುವ ನೆವನದಲ್ಲಿ ಅವರನ್ನು ದೈಹಿಕವಾಗಿ ಹಿಂಸಿಸುತ್ತಿದ್ದಳು. ಆಗ ಒಬ್ಬರು ಹೆಂಗಸು ಸಿಟ್ಟುಗೊಂಡು ಬೈದಾಗ ಅವಳ ತಂದೆ ಅವರನ್ನು ಬದಿಗೆ ಕರೆದು ಅವಳ ನೋವಿನ ಕಥೆ ಹೇಳುತ್ತಿದ್ದರು. ಆ ಹೆಂಗಸಿನ ಟೈಲರಿಂಗ್ ಕೆಲಸ ತುಂಬ ಚೆನ್ನಾಗಿದ್ದುದರಿಂದ ಮುಂದೆ ಅವಳು ತನ್ನ ಉದ್ಯೋಗವನ್ನು ವಿಸ್ತರಿಸಿ ಮದ್ರಾಸಿನಲ್ಲಿ ಒಳ್ಳೆಯ ಹೆಸರು ಗಳಿಸುತ್ತಾಳೆ. ಈ ಹೆಂಗಸನ್ನು ದೇವಕಿಯವರು ಹತ್ತಿರದಿಂದ ನೋಡಿದ್ದುದರಿಂದ ( ಅವರು ಅವರ ಸೋದರ ಮಾವನ ಹೆಂಡತಿಯ ಜೊತೆಗೆ ಅದೇ ಟೈಲರಿಂಗ್ ಅಂಗಡಿಗೆ ಬಟ್ಟೆ ಹೊಲಿಸಲು ಹೋಗುತ್ತಿದ್ದರು.) ಈ ಕಥಾ ನಾಯಕಿಯ ಕಥೆಯೂ ತುಂಬ ಮಾರ್ಮಿಕವಾಗಿ ಮನಮಿಡಿಯುವಂತೆ ಚಿತ್ರಿತವಾಗಿದೆ.
1957 ರಲ್ಲಿ ಬರೆದ ಹಾಸ್ಯ ನಾಟಕ “‘ಬೆಂಗಳೂರಲ್ಲಿ ಬೇಸ್ತು” ನವಯುಗದಲ್ಲಿಯೇ ಎರಡು ಕಂತುಗಳಲ್ಲಿ ಪ್ರಕಟವಾಗಿತ್ತು. ಇದೂ ಹಾಸ್ಯ ಮಿಶ್ರಿತ ಕಥೆ. ಹಳ್ಳಿಯಲ್ಲಿದ್ದ ಒಕ್ಕಲು ಗಂಡಸೊಬ್ಬನನ್ನು ಯಜಮಾನ ಬೆಂಗಳೂರಲ್ಲಿರುವ ತನ್ನ ಮಗನಲ್ಲಿಗೆ ಕಳುಹಿಸಿ ಕೊಡುವುದು. ಹಾಗೇ ಹೋದಾಗ ಹೆಂಡತಿ ತನಗೆ ಬೆಂಗಳೂರಿನಿಂದ ಕೆಲವು ವಸ್ತುಗಳನ್ನು ತರಬೇಕು ಎಂದು ಹೇಳಿ ಕಳುಹಿಸುತ್ತಾಳೆ. ಹಾಗೇ ಬಂದವನು ಬೆಂಗಳೂರು ಬಸ್‌ಸ್ಟಾಪಿನಲ್ಲಿ ಇಳಿಯುತ್ತಾನೆ. ತನ್ನನು ಕರೆದೊಯ್ಯಲು ಯಾರೂ ಬಂದಿಲ್ಲದ ಕಾರಣ ಯಜಮಾನನ ಮಗನ ಮನೆ ಹುಡುಕಿಕೊಂಡು ಹೋಗಬೇಕೆನ್ನುವಷ್ಟರಲ್ಲಿ ಹೆಂಗಸೊಬ್ಬಳು ಇವನ ಬಳಿಗೆ ಬಂದು ಅವನನ್ನು ಮಂಗಮಾಡಿ ಸಂಜೆ ತನಕ ಬೆಂಗಳೂರೆಲ್ಲಾ ಸುತ್ತಾಡಿಸಿ, ಅವನ ಕೈಯಲ್ಲಿದ್ದ ಹಣವನ್ನೆಲ್ಲಾ ಕಿತ್ತುಕೊಂಡು ಅವನನ್ನು ಪುನಹ ಬಸ್‌ಸ್ಟಾಂಡ್‌ನಲ್ಲಿ ಬಿಟ್ಟು ಹೋಗಿ ಬಿಡುತ್ತಾಳೆ. ಅವಳಿಂದ ಮೋಸ ಹೋದ ಗಂಡಸಿನ ಕೈಯಲ್ಲಿ ಚಿಕ್ಕಾಸೂ ಉಳಿದಿರೋದಿಲ್ಲ. ಊರಿಗೆ ಹೋಗುವುದೂ ಸಾಧ್ಯವಿಲ್ಲ. ಹೀಗೆ ಬೇಸ್ತು ಬಿದ್ದ ಗಂಡಸು ಬೇಸರದಿಂದ ಕುಳಿತಿರುವಾಗ ಯಾಜಮಾನನ ಮಗ ಸಿಕ್ಕಿ ಅವನನ್ನು ಮನೆಗೆ ಕರೆದು ಕೊಂಡು ಹೋಗುವ ಕಥೆಯನ್ನು ಕಥಾನಾಯಕ ಬೇಸ್ತು ಬೀಳುವ ಕಥೆಯನ್ನು ತುಂಬ ಹಾಸ್ಯಮಯವಾಗಿ ಲವಲವಿಕೆಯಿಂದ ಹೇಳಿರುವುದು ಕಲೆಗಾರಿಕೆ. ಆಗ ಬೆಂಗಳೂರೆಂದರೆ ಮಾಯಾನಗರಿ. ಹಳ್ಳಿಯಿಂದ ಬಂದವರು ಬೇಸ್ತು ಬೀಳುವುದು ಸಹಜವೇ.
1959 ರಲ್ಲಿ ಬರೆದ ‘ಆಯಾ’ ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆಯಾದಲ್ಲಿನ ಸಮಸ್ಯೆ ಇಂದಿನದ್ದೂ ಆಗಿರುವುದು ಈ ಕಥೆಯಲ್ಲಿರುವ ವಿಶೇಷತೆ. ಗಂಡ ಹೆಂಡಿರು ಇಬ್ಬರೂ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುತ್ತಾರೆ. ಮಗುವನ್ನು ನೋಡಲು ಒಬ್ಬ ಆಯಾಳನ್ನು ನೇಮಿಸುತ್ತಾರೆ. ಅವಳು ಮನೆಯವರು ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮಗುವಿಗೆ ಹರಿದು ಹೋದ ಕೊಳಕು ಬಟ್ಟೆ ತೊಡಿಸಿ ಜನನಿಬಿಡ ಸ್ಥಳಗಳಲ್ಲಿ ಮಗುವನ್ನು ತೋರಿಸಿ ಭಿಕ್ಷೆ ಬೇಡುವುದು. ಒಮ್ಮೆ ಮನೆಯ ಯಜಮಾನನ ಗೆಳೆಯನ ಕಣ್ಣಿಗೆ ಈ ಮಗು ಬಿದ್ದಾಗ ಅವನು ಹೋಗಿ ಗೆಳೆಯನೊಡನೆ ಅದು ನಿನ್ನ ಮಗುವಿನಂತೆ ಕಂಡಿತು ಹೋಗಿ ಪರೀಕ್ಷಿಸು ಎಂದಾಗ ಬೆಚ್ಚಿಬಿದ್ದ ತಂದೆ ತಾಯಿ ಹೋಗಿ ನೋಡುವಾಗ ಅದು ತಮ್ಮದೇ ಮಗು ಎಂದು ತಿಳಿದು ಈ ಕೆಲಸವೂ ಸಾಕು ಆಯಾನೂ ಸಾಕು ಎಂದು ತಾಯಿ ತನ್ನ ಕೆಲಸವನ್ನು ಬಿಟ್ಟು ಬಿಡುವುದು ಈ ಕಥೆಯ ಕಥಾವಸ್ತು. ಮಗುವನ್ನು ತಮಗೆ ಬೇಕಾದಂತೆ ಆಯಾಗಳು ಉಪಯೋಗಿಸುವುದು ಹಲವು ಕಡೆಯಲ್ಲಿ ನಡೆಯುತ್ತಿತ್ತು. ಈಗಲೂ ನಡೆಯುತ್ತಿದೆ. ಅದನ್ನು ಆಗಲೇ ಅವರು ಮನಮುಟ್ಟುವ ಕಥೆಯಾಗಿಸಿದ್ದರು.
1960 ರಲ್ಲಿ ಬರೆದ “ಬಯಲು ಸೀಮೆಯ ಹುಡುಗಿ’ ಮತ್ತು 1962 ರಲ್ಲಿ ಬರೆದ ‘ಇನ್‌ಫ್ಲುಯೆನ್ಸ್ ಅಲ್ಲ ಇನ್‌ಫ್ಲುಯೆನ್‌ಝಾ” ಬೆಂಗಳೂರಿನಿಂದ ಹೊರಡುತ್ತಿದ್ದ ಪ್ರಪಂಚ ಪತ್ರಿಕೆಯಲ್ಲಿ ಅಚ್ಚು ಕಂಡಿತ್ತು
ಇನ್‌ಫ್ಲುಯೆನ್ಸ್ ಅಲ್ಲ ಇನ್‌ಫ್ಲುಯೆನ್‌ಝಾ ಇದೂ ಒಂದು ಹಾಸ್ಯಮಯ ಕಥೆ. ಯಾವುದೋ ಕೆಲಸಕ್ಕೆ ರಾಜಕಾರಣಿಯೊಬ್ಬರ ಇನ್‌ಫ್ಲುಯೆನ್ಸ್ ಮಾಡಲು ಹಳ್ಳಿಗನೊಬ್ಬ ಹೋಗುವುದು. ಹೋದಾಗಲೆಲ್ಲಾ ಆ ಮಂತ್ರಿಗಳು ಆಯಿತು ಮಾಡಿಸುತ್ತೇನೆ ಎನ್ನುವ ಸುಳ್ಳು ಆಶ್ವಾಸನೆ ಕೊಡುವುದು. ಹೋಗಿ ಹೋಗಿ ಸುಸ್ತಾದ ಹಳ್ಳಿಗ ಕೊನೆಗೆ ಆಗ ಬಹಳವಾಗಿ ಕಾಡುತ್ತಿದ್ದ ಇನ್‌ಫ್ಲುಯೆನ್‌ಝಾ ಕಾಯಿಲೆ ಬಂದು ಜ್ವರದಿಂದ ನಡುಗುತ್ತಾ ಮಲಗುವುದು. ಇಲ್ಲಿಯ ಕಥಾವಸ್ತು. ರಾಜಕಾರಣಿಗಳು ಅಂದೂ ಅಷ್ಟೇ ಇಂದೂ ಅಷ್ಟೇ ಆಶ್ವಾಸನೆಗಳನ್ನು ಕೊಡುತ್ತಲೇ ಜನರನ್ನು ಮುಪ್ಪಾಗಿಸುತ್ತಾರೆ.
ಕೊನೆಯದಾಗಿ ಅವರು ಮಾಡಿದ ಸಾಹಿತ್ಯಿಕ ಕೆಲಸ ಅವರ ಮಗಳು ಗೌತಮಿ ಕಾಲೇಜಿಗೆ ಹೋಗುತ್ತಿರುವಾಗ ಸಂಗ್ರಹಿಸಿಟ್ಟಿದ್ದ ಚಾರಿತ್ರಿಕ ವಾದ ಕೊಹಿನೂರು ವಜ್ರದ ಕಥೆಯನ್ನು ಒಟ್ಟು ಸೇರಿಸಿ ಅವಳ ನೆನಪಲ್ಲಿ ʼಕೊಹಿನೂರ ದುರಂತʼ ಎನ್ನುವ ಚಾರಿತ್ರಿಕ ಕಾದಂಬರಿಯನ್ನು ಪ್ರಕಟಿಸಿದ್ದರು. ಅದರ ನಂತರ ಮಕ್ಕಳು ನಾವೆಲ್ಲ ಎಷ್ಟು ಒತ್ತಾಯಿಸಿದರೂ ಅವರು ಲೇಖನಿ ಹಿಡಿಯಲಿಲ್ಲ. ನಾನು ಒತ್ತಾಯಿಸಿ ನಿಮ್ಮದೇ ಕತೆ ಬರೆದು ಕೊಡಿ ಎಂದುದಕ್ಕೆ ಇಲ್ಲಿರುವ ವಿವರಗಳನ್ನು ಬರೆದು ಕೊಟ್ಟಿದ್ದರು. ಅವರು ಬರೆಯುವುದನ್ನು ನಿಲ್ಲಿಸದೇ ಬರೆಯುತ್ತಲೇ ಇದ್ದಿದ್ದರೆ . . . . . . ಆದರೆ ಹಾಗಾಗಲಿಲ್ಲ.
ಅವರ ಬಗ್ಗೆ ಜನರಿಗೆ ತಿಳಿಯುವಂತಾಗಲಿ ಎಂದು ನಾನೇ ಒಂದು 30-35 ಪುಟಗಳ ಜೀವನ ಚರಿತ್ರೆ ಬರೆದಿದ್ದೆ. ಅದನ್ನು ಇಂದಿರಾ ಶಿವಣ್ಣ ಅವರು ಅನನ್ಯ ಚೇತನ ಮಾಲೆಯಲ್ಲಿ ಪ್ರಕಟಿಸಿದ್ದರು. ಕೊನೆಗೂ ಒಂದು ದಾಖಲಾತಿ ಆಯಿತಲ್ಲ ಎನ್ನುವ ಸಂತೃಪ್ತಿ ನನ್ನದು.
ಅವರ ಜೀವನದಲ್ಲಿ ಅವರಿಗೆ ಸಿಕ್ಕಿದ್ದು ಬರೇ ನೋವುಗಳು. ನೋವುಗಳ ಕೆಂಡದ ಮೇಲೆ ನಿಂತಿದ್ದರೂ ಅವರು ಬದುಕಿಗೆ ಸವಾಲೆಸೆಯುತ್ತಾ ಬದುಕಿದ್ದು ನಗುನಗುತ್ತಾ. ಆವರ ಜೀವನವೇ ಒಂದು ಯಶೋಗಾಥೆ. ಫೀನಿಕ್ಸ್ ಹಕ್ಕಿಯಂತೆ ಅವರು ಕಷ್ಟದ ಕುಂಡದಿಂದ ಎದ್ದೆದ್ದು ಜೀವನವನ್ನು ಎದುರಿಸಿದ್ದರು. ಗಂಡನನ್ನು ಮೂವರು ಮಕ್ಕಳನ್ನು ಕಳಕೊಂಡು ಜೀವನದ ಎಲ್ಲಾ ಕಷ್ಟಗಳನ್ನು ಎದುರಿಸಿ, ಅನುಭವಿಸಿ ಇದ್ದ ಒಬ್ಬ ಮಗಳೊಡನೆ ಅವರು ಮಂಗಳೂರಿನಲ್ಲಿ ವೃದ್ಧಾಪ್ಯವನ್ನು ಕಳೆಯುತ್ತಿದ್ದರು.
ಕನ್ನಡ ಸಾಹಿತ್ಯದಲ್ಲಿ ಹತ್ತಿರ ಹತ್ತಿರ 90-100 ವರ್ಷಗಳ ಹಿಂದಿನಿಂದ ಮಹಿಳೆಯರು ಬರೆದಿರುವ ಸಾಹಿತ್ಯಿಕ ಇತಿಹಾಸವಿದೆ. ಲೇಖಕಿಯರನೇಕರು ಈ ಇತಿಹಾಸದಲ್ಲಿ ಹೆಜ್ಜೆ ಮೂಡಿಸಿ ಹೋಗಿದ್ದಾರೆ. ಕೆಲವರು ದಾಖಲಾಗಿದ್ದಾರೆ ಕೆಲವರು ಎಲ್ಲೂ ದಾಖಲಾಗಿಲ್ಲ ಎನ್ನುವುದೂ ಸತ್ಯ. ಅವರೆಲ್ಲರ ಜೀವನವೂ ಒಂದೊಂದು ಯಶೋಗಾಥೆಯೇ. ತುಂಬಿದ ಸಂಸಾರದ ಹೊಣೆಗಾರಿಕೆ, ಹೆಚ್ಚಿನ ಸವಲತ್ತುಗಳಿಲ್ಲದ ಜೀವನ, ಕೈತುಂಬಾ ಕೆಲಸ, ಹೆಣ್ಣಿನ ಯಾವುದೇ ಹವ್ಯಾಸಕ್ಕೆ ಗಂಡನಿಂದಾಗಲೀ ಮನೆಯ ಹಿರಿಯರಿಂದಾಗಲೀ ದೊರಕದ ಪ್ರೋತ್ಸಾಹ-ಇಂತಹ ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆ ಸಮಯ ದೊರಕಿಸಿಕೊಂಡು ಅಡುಗೆ ಮನೆಯೊಳಗೆ ಕುಳಿತುಕೊಂಡೇ ಆಕೆ ಬರೆಯಬೇಕಿತ್ತು. ಕೆಲವೊಮ್ಮೆ ಪೇಪರು ಪೆನ್ನಿಗೂ ಗತಿಯಿಲ್ಲದ ಪರಿಸ್ಥಿತಿ. ಆದರೂ ಬರೆಯುವ ತುಡಿತ ತಾಳಲಾಗದೆ ಬರೆಯುತ್ತಿದ್ದರು. ಕೆಲವರು ಹಠದಿಂದ ಬರೆಯುತ್ತಿದ್ದರೂ ಕೆಲವರು ಸಂಸಾರದಲ್ಲಿ ಸಾಮರಸ್ಯ ಉಳಿಯಲು ತಮ್ಮ ಬರವಣಿಗೆಯನ್ನು ಬಲಿಕೊಟ್ಟದ್ದೂ ಇದೆ. ಹಾಗೆ ಬರವಣಿಗೆಯನ್ನು ಬಲಿಕೊಟ್ಟವರಲ್ಲಿ ಒಬ್ಬರು ಕೆದಂಬಾಡಿ ದೇವಕಿ ಎಂ ಶೆಟ್ಟಿಯವರು. ಈ ಲೇಖಕಿ ಬರವಣಿಗೆಯನ್ನು ನಿಲ್ಲಿಸಿರದಿದ್ದರೆ ತಮ್ಮ ನಗೆಬರಹಗಳಿಂದ ಟಿ. ಸುನಂದಮ್ಮನವರಿಗೆ ಸಾಟಿಯಾಗಿ ನಿಲ್ಲಬಹುದಿತ್ತು ಎನ್ನುವುದು ಅವರ ಬರಹಗಳನ್ನು ಓದುವಾಗ ಭಾಸವಾಗುತ್ತದೆ. ಸಣ್ಣ ಕಥೆಗಾರ್ತಿಯಾಗಿಯೂ ಅವರು ಕೆಲವು ಉತ್ತಮ ಕತೆಗಳನ್ನು ಬರೆದಿದ್ದಾರೆ. ಆದರೆ 1940-50ರ ದಶಕದಲ್ಲಿ ಪ್ರಕಟವಾದ ಅವರ ಪುಸ್ತಕಗಳು ಈಗ ಓದಲು ಸಿಗದಿರುವುದು ನಿಜಕ್ಕೂ ನೋವಿನ ಸಂಗತಿ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವುದಷ್ಟೇ ಲೇಖಕಿಯರೆಲ್ಲರೂ ಸಲ್ಲಿಸುವ ನುಡಿ ನಮನ.
ಕೆ ಉಷಾ ಪಿ ರೈ
ಹಿರಿಯ ಲೇಖಕಿ
ಇದನ್ನೂ ಓದಿ- ಹೆಣ್ಣು, ಹಿಂಸೆ ಮತ್ತು ತಲ್ಲಣ..