ಜೂಜಾಟ ಆಡಿಸುವ ವಿಚಾರದಲ್ಲಿ ಒಪ್ಪಂದ ಮಾಡಿಸಲು ಹೋದ ಆರೋಪದಡಿ ಪಿಎಸ್ಐ ಮತ್ತು ಕಾನಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹಾವೇರಿ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಶಿಗ್ಗಾಂವ್ ತಾಲೂಕಿನ ತಡಸ ಪೊಲೀಸ್ ಠಾಣೆಯ ಪಿಎಸ್ಐ ಶರಣಬಸಪ್ಪ ಕಾಂದೆ ಹಾಗೂ ಕಾನ್ಸ್ಟೇಬಲ್ ಸುರೇಶ್ ಮಾನೋಜಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರು.
ತಡಸ ಗ್ರಾಮದ ಪ್ರಭಾಕರ್ ಬೆಟದೂರ್ ಎಂಬವರು ನೀಡಿದ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಪಿಎಸ್ಐ ಮತ್ತು ಕಾನ್ಸ್ಟೇಬಲ್ ಇಸ್ಪೀಟ್ ಆಡಿಸಲು 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಮುಂಗಡವಾಗಿ 2 ಲಕ್ಷ ರೂಪಾಯಿ ಹಣ ಪಡೆಯುವಾಗ ಪಿಎಸ್ಐ ಶರಣಬಸಪ್ಪ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಪಿಎಸ್ಐ ಶರಣಬಸಪ್ಪ ಹಾಗೂ ಕಾನ್ಸ್ಟೇಬಲ್ ಸುರೇಶ್ ಮಾನೋಜ ಅವರನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ತನಿಖೆಗೊಳಪಡಿಸಿದ್ದಾರೆ.