ಭಾರತ ಫುಟ್‌ ಬಾಲ್‌ ದಂತಕತೆ ಸುನಿಲ್‌ ಚೆಟ್ರಿ ನಿವೃತ್ತಿ ಘೋಷಣೆ

Most read

ಹೊಸದಿಲ್ಲಿ: ಭಾರತ ಫುಟ್‌ ಬಾಲ್‌ ನ ದಂತಕತೆ ಎಂದೇ ಹೆಸರಾದ  ಸುನಿಲ್‌ ಚೆಟ್ರಿ ಅಂತಾರಾಷ್ಟ್ರೀಯ ಫುಟ್‌ ಬಾಲ್‌ ನಿಂದ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಭಾರತ ಫುಟ್‌ ಬಾಲ್‌ ತಂಡದ ನಾಯಕರೂ ಆಗಿರುವ ಸುನಿಲ್, ಜೂನ್ 6 ರಂದು ಕೋಲ್ಕತ್ತಾದಲ್ಲಿ ಕುವೈತ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ನಂತರ  ನಿವೃತ್ತಿಗೊಳ್ಳಲಿದ್ದಾರೆ.

ಎರಡು ದಶಕಗಳ ಕಾಲದ ತಮ್ಮ ಅದ್ಭುತ ವೃತ್ತಿಜೀವನಕ್ಕೆ ತೆರೆ ಎಳೆಯಲಿರುವ ಸುನಿಲ್ ಸುದೀರ್ಘ‌ ಅವಧಿಗೆ ಭಾರತ ರಾಷ್ಟ್ರೀಯ ತಂಡದ ನಾಯಕರಾಗಿ ಸೇವೆ ಸಲ್ಲಿಸಿದ್ದರು.

ನಿವೃತ್ತಿ ನಿರ್ಧಾರವನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ  ಪೋಸ್ಟ್ ಮಾಡಿದ ವೀಡಿಯೊ ಮೂಲಕ ಪ್ರಕಟಿಸಿದ್ದಾರೆ.

ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಭಾರತವು ಪ್ರಸ್ತುತ ಎ ಗುಂಪಿನಲ್ಲಿ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಮೂಲತಃ ನೇಪಾಳಿಯಾದ 39 ವರ್ಷ ವಯಸ್ಸಿನ ಚೆಟ್ರಿ ( ಜನನ: ಆಗಸ್ಟ್ 3, 1984).  ಬೆಂಗಳೂರು ಫುಟ್’ಬಾಲ್’ ಕ್ಲಬ್ ಎಫ್’ಸಿ.)ನ ಆಟಗಾರ. ಮುಂಬಯಿ ನಗರದಿಂದ ಬೆಂಗಳೂರು ಫುಟ್’ಬಾಲ್’ ಕ್ಲಬ್’ಗೆ ಬಂದ ಸುನಿಲ್ ಅವರು ಸ್ಟ್ರೈಕರ್ ಆಗಿ(ಗೋಲು ಹೊಡೆಯುವವ) ಸುದೀರ್ಘ ಅವಧಿಗೆ ಆಡಿದ್ದಾರೆ. 89 ಪಂದ್ಯಗಳಲ್ಲಿ ಅವರು ಒಟ್ಟು 50 ಗೋಲುಗಳನ್ನು ಹೊಡೆದಿದ್ದಾರೆ. ಪ್ರಸ್ತುತ ಬೆಂಗಳೂರು ತಂಡಕ್ಕೆ ನಾಯಕರಾಗಿದ್ದಾರೆ, ಮತ್ತು ಭಾರತ ರಾಷ್ಟ್ರೀಯ ತಂಡಕ್ಕೆ ಸಾರ್ವಕಾಲಿಕ ಗರಿಷ್ಠ ಗೋಲು ಗಳಿಸಿದ ಆಟಗಾರರಾಗಿದ್ದಾರೆ.

ಚೆಟ್ರಿ, ನಾಯಕತ್ವದ ಜವಾಬ್ದಾರಿ ಹೊತ್ತು ರಾಷ್ಟ್ರೀಯ ಮತ್ತು ಬಿಎಫ್‌ಸಿ ತಂಡವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸಿದ್ದಾರೆ. ತಮ್ಮ ಕಾಲ್ಚಳಕದ ಮೂಲಕ ಎದುರಾಳಿ ತಂಡದ ರಕ್ಷಣಾಕೋಟೆಯನ್ನು ಧ್ವಂಸಗೊಳಿಸಬಲ್ಲ ಸಾಮರ್ಥ್ಯ ಚೆಟ್ರಿ ಅವರಿಗಿದೆ. ಅವರ ಪಾದರಸದಂತಹ ಚಲನೆಗೆ ಮನಸೋಲದವರು ಇಲ್ಲ. ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣದೊಳಗೆ ಲೀಲಾಜಾಲವಾಗಿ ನುಗ್ಗಿ ಚೆಂಡನ್ನು ಗುರಿ ಮುಟ್ಟಿಸುವಲ್ಲೂ ಚೆಟ್ರಿ ನಿಪುಣರು.

2002ರಲ್ಲಿ ಮೋಹನ್‌ ಬಾಗನ್‌ ಕ್ಲಬ್‌ ಪರ ಆಡುವ ಮೂಲಕ ಫುಟ್‌ಬಾಲ್‌ ವಲಯಕ್ಕೆ ಪರಿಚಿತರಾದ ಚೆಟ್ರಿ, 2007, 2009 ಮತ್ತು 2012ರ ನೆಹರೂ ಕಪ್‌ ಟೂರ್ನಿಗಳಲ್ಲಿ ಭಾರತ ತಂಡ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2008ರ ಎಎಫ್‌ಸಿ ಚಾಲೆಂಜ್‌ ಕಪ್‌ನಲ್ಲಿ ಅಮೋಘ ಆಟ ಆಡಿದ್ದ ಚೆಟ್ರಿ ಭಾರತ ತಂಡ ಪ್ರಶಸ್ತಿ ಜಯಿಸಿ 27 ವರ್ಷಗಳ ಬಳಿಕ ಎಎಫ್‌ಸಿ ಏಷ್ಯಾ ಕಪ್‌ಗೆ ಅರ್ಹತೆ ಗಳಿಸಲು ಕಾರಣರಾಗಿದ್ದರು.

ಸುನಿಲ್‌ ಅವರ ತಂದೆ ಕೆ.ಬಿ. ಚೆಟ್ರಿ ಮತ್ತು ತಾಯಿ ಸುಶೀಲಾ ಚೆಟ್ರಿ. ಜನಿಸಿದ್ದು ಸಿಕಂದರಾಬಾದ್‌ನಲ್ಲಿ. ಮೂಲತಃ ಅವರು ನೇಪಾಳಿಗಳು. ಅವರಿಗೆ ಇಬ್ಬರು ಸಹೋದರಿಯರು, ಸಶಾ ಮತ್ತು ಸುನಂದಾ. ಸುನಿಲ್‌ ಚೆಟ್ರಿ ಅವರ ಕುಟುಂಬದ ಎಲ್ಲರೂ ಫುಟ್‌ಬಾಲ್‌ ಆಟಗಾರರೇ ಆಗಿರುವುದು ವಿಶೇಷ. ಸುನಿಲ್‌ ಅವರ ತಂದೆ, ಭಾರತೀಯ ಸೇನಾ ತಂಡದಲ್ಲಿ ಆಡಿದ್ದರೆ, ತಾಯಿ ಮತ್ತು ಸಹೋದರಿಯರು ನೇಪಾಳ ರಾಷ್ಟ್ರೀಯ ಮಹಿಳಾ ತಂಡದ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ.

ಸುನಿಲ್‌ ಚೆಟ್ರಿ ನಿವೃತ್ತಿಯೊಂದಿಗೆ ಭಾರತ ಫುಟ್‌ ಬಾಲ್‌ ನ ದೊಡ್ಡ ಅಧ್ಯಾಯವೊಂದು ಕೊನೆಗೊಂಡಂತಾಗಿದೆ.

More articles

Latest article