ಈ ಲೈಂಗಿಕ ಹಗರಣದ ಪ್ರಮುಖ ಪಾತ್ರಧಾರಿಗಳಿಗೆ ಹಾಗೂ ವಿಡಿಯೋಗಳನ್ನು ಬಹಿರಂಗಪಡಿಸಿ ಹಂಚಿದ ಸೂತ್ರಧಾರರಿಗೆ ಶಿಕ್ಷೆ ಆಗಲೇಬೇಕೆಂದು ಸರಕಾರವನ್ನು, ತನಿಖಾ ಸಂಸ್ಥೆಗಳನ್ನು, ನ್ಯಾಯಾಲಯಗಳನ್ನು ಆಗ್ರಹಿಸಬೇಕಿದೆ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ಹಲ್ಲೆ, ಹತ್ಯೆಗಳ ಕುರಿತು ಶೀಘ್ರವಾಗಿ ನಿರ್ಧಿಷ್ಟ ಕಾಲಮಿತಿಯಲ್ಲಿ ವಿಚಾರಣೆ ಮಾಡಿ ಶಿಕ್ಷಿಸುವ ವ್ಯವಸ್ಥೆಯನ್ನು ಜಾರಿಗೆ ತರಲೇಬೇಕೆಂದು ನೀತಿನಿರೂಪಕರ ಮೇಲೆ ಒತ್ತಡ ಹೇರಬೇಕಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ವಿಕ್ಷಿಪ್ತ ವ್ಯಕ್ತಿಗಳ ಲೈಂಗಿಕ ಬಯಕೆಯ ಬೆಂಕಿಗೆ ಇನ್ನೆಷ್ಟು ಮಹಿಳೆಯರು ಬಲಿಯಾಗಬೇಕು? ಮನುಕುಲದ ಇತಿಹಾಸದುದ್ದಕ್ಕೂ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ಶೋಷಣೆಗೆ ಕೊನೆ ಎಂದು? ಲಿಂಗಸಮಾನತೆ ಸಾರುವ ಸಂವಿಧಾನ ಜಾರಿಯಾದರೂ ಇನ್ನೂ ಮಹಿಳೆಯರ ಮೇಲಿನ ದಮನ ದೌರ್ಜನ್ಯ ಅವ್ಯಾಹತವಾಗಿ ಮುಂದುವರೆದಿದ್ದಕ್ಕೆ ಕಾರಣಗಳೇನು? ಉತ್ತರ ಗೊತ್ತಿಲ್ಲ.
ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಕೇಂದ್ರ ಸರಕಾರದ ಅಂಕಿ ಅಂಶಗಳೇ ಹೇಳುತ್ತಿವೆ. ಅದರಲ್ಲಿ ಯೋಗಿ ಆದಿತ್ಯನಾಥರ ಬಿಜೆಪಿ ಆಡಳಿತದ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು 65 ಸಾವಿರಕ್ಕೂ ಹೆಚ್ಚು ಹೆಣ್ಮಕ್ಕಳು ಲೈಂಗಿಕ ದೌರ್ಜನ್ಯದ ಸಂತ್ರಸ್ತರಾಗಿದ್ದಾರೆ. ಮಣಿಪುರದಲ್ಲಿ ಹಾಡು ಹಗಲೇ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ದೇಶಕ್ಕೆ ಕೀರ್ತಿ ತಂದ ಮಹಿಳಾ ಕುಸ್ತಿಪಟುಗಳ ಮೇಲೆ ಸಂಸದನೊಬ್ಬ ಮಾಡಿದ ನಿರಂತರ ದೌರ್ಜನ್ಯದಿಂದಾಗಿ ದೇಶವೇ ತಲೆತಗ್ಗಿಸುವಂತಾಗಿದೆ.
ಅದೇ ರೀತಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ಕೇಸಂತೂ ಇಡೀ ಪುರುಷ ಕುಲವೇ ತಲೆತಗ್ಗಿಸುವಂತಹುದು. ತನ್ನ ಸನಿಹಕ್ಕೆ ಬಂದ ಮಹಿಳೆಯರನ್ನೆಲ್ಲಾ ಲೈಂಗಿಕ ತೃಷೆ ತೀರಿಸಿಕೊಳ್ಳಲು ಬಳಸಿಕೊಂಡ ಈ ಜನಪ್ರತಿನಿಧಿ ತಾನು ಮಾಡಿದ ಅಸಹ್ಯಗಳನ್ನೆಲ್ಲಾ ಚಿತ್ರೀಕರಿಸಿಕೊಂಡಿರುವುದು ವಿಕೃತಿಯ ಅತಿರೇಕವಾಗಿದೆ. ವಯಸ್ಸಿನ ಬೇಧವಿಲ್ಲದೇ ಬಲಿಪಶುವಾದ ನಾನೂರಕ್ಕೂ ಹೆಚ್ಚು ಮಹಿಳೆಯರಿಗೆ ಅವರದೇ ಅಶ್ಲೀಲ ವಿಡಿಯೋ ತೋರಿಸಿ ಬ್ಲಾಕ್ಮೇಲ್ ಮಾಡಿ ಮತ್ತೆ ಮತ್ತೆ ಲೈಂಗಿಕ ದೌರ್ಜನ್ಯಕ್ಕೆ ಈಡು ಮಾಡಿದ್ದು, ಬೆತ್ತಲೆ ವಿಡಿಯೋ ಹಾಗೂ ಫೋಟೋಗಳನ್ನು ಚಿತ್ರೀಕರಿಸಿ ವಿಕೃತ ಆನಂದವನ್ನು ಅನುಭವಿಸಿದ್ದು ಭಾರತದ ಮನುಕುಲದ ಚರಿತ್ರೆಯಲ್ಲಿ ಇದೇ ಮೊದಲನೆಯ ಅತೀ ದೊಡ್ಡ ಅಪಸವ್ಯವಾಗಿದೆ.
ತನ್ನ ಬಯಕೆಗೆ ಸಿಕ್ಕ ಸಿಕ್ಕ ಮಹಿಳೆಯರನ್ನು ಬಳಸಿಕೊಂಡು ವೀಡಿಯೋ ಮಾಡಿದ್ದು ಪ್ರಜ್ವಲ್ ಎನ್ನುವ ಪುರುಷ ಮೃಗ. ತನ್ನ ವೈಯುಕ್ತಿಕ ದ್ವೇಷಕ್ಕೆ ಈ ವಿಡಿಯೋಗಳನ್ನು ಕದ್ದು ಕಾಪಿ ಮಾಡಿಟ್ಟುಕೊಂಡಿದ್ದು ಕಾರ್ತಿಕ್ ಎನ್ನುವ ಇನ್ನೊಬ್ಬ ಗಂಡು ಪ್ರಾಣಿ. ಈ ವಿಡಿಯೋಗಳನ್ನು ತನ್ನ ದ್ವೇಷ ಸಾಧಿಸಲು ಬಳಸಿಕೊಂಡಿದ್ದು ದೇವರಾಜೇಗೌಡ ಎನ್ನುವ ಇನ್ನೊಬ್ಬ ದೂರ್ತ. ನಂತರ ಚುನಾವಣಾ ಲಾಭಕ್ಕಾಗಿ ಈ ವಿಡಿಯೋಗಳಿದ್ದ ಪೆನ್ ಡ್ರೈವ್ ಗಳನ್ನು ಹಾಸನ ಜಿಲ್ಲೆಯಾದ್ಯಂತ ಹಂಚಿದ್ದು ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಎನ್ನುವ ದುರುಳರು. ಬೇರೆ ಮನೆಯ ಹೆಣ್ಣುಮಕ್ಕಳ ಅಶ್ಲೀಲ ವಿಡಿಯೋಗಳನ್ನು ಬಾಯಿಚಪ್ಪರಿಸಿಕೊಂಡು ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ವಿಕೃತಿಯನ್ನು ಮೆರೆದವರು ನಾಗರೀಕ ವೇಷದ ಚಪಲಚೆನ್ನಿಗರು. ಈ ಲೈಂಗಿಕ ಪ್ರಕರಣಕ್ಕೆ ಇನ್ನಿಲ್ಲದ ಪ್ರಚಾರ ಕೊಟ್ಟು ನಿರಂತರವಾಗಿ ಪ್ರಸಾರ ಮಾಡಿದವರು ಸುದ್ದಿ ವಾಹಿನಿಯಲ್ಲಿರುವ ಪುರುಷ ಪುಂಗವರು.
ಇಂತಹ ವಿಕ್ಷಿಪ್ತ ವ್ಯಕ್ತಿತ್ವದ ವಿಕೃತ ಮನಸ್ಥಿತಿಯ ಗಂಡುಕುಲದ ಕುಚೇಷ್ಟೆಗೆ ನೊಂದವರು, ತೊಂದರೆಗೊಳಗಾದವರು ನಾನೂರಕ್ಕೂ ಹೆಚ್ಚು ಮಹಿಳೆಯರು. ಈ ಪ್ರಕರಣದಿಂದ ನೊಂದ ಸಂತ್ರಸ್ತರೆಷ್ಟೋ, ಅಪಮಾನದಿಂದ ಬೆಂದ ಕುಟುಂಬಗಳೆಷ್ಟೋ, ತಮ್ಮವರಿಂದಲೇ ತಿರಸ್ಕಾರಕ್ಕೊಳಗಾಗಿ ಹಿಂಸೆ ಅನುಭವಿಸುತ್ತಿರುವ ಮಹಿಳೆಯರೆಷ್ಟೋ, ಮುರಿದ ಮನ ಮನೆಗಳೆಷ್ಟೋ ಲೆಕ್ಕ ಇಟ್ಟವರಿಲ್ಲ. ಅಶ್ಲೀಲ ವಿಡಿಯೋಗಳು ಊರು ಕೇರಿ ತುಂಬಾ ಹರಿದಾಡುತ್ತಿರುವಾಗ ಅದರಲ್ಲಿರುವ ಸಂತ್ರಸ್ತೆಯರು ಹಾದಿ ಬೀದಿಯಲ್ಲಿ ತಲೆ ಎತ್ತಿ ನಡೆಯಲಾಗದ ಅವಮಾನ ಅನುಭವಿಸುತ್ತಿದ್ದಾರೆ. ಅವರ ಅಸಹನೀಯ ಅನುಭವ ಗಂಡುಕುಲಕ್ಕೆ ಅರಿವಾಗಲು ಹೇಗೆ ಸಾಧ್ಯ? ಯಾಕೆಂದರೆ ಬೇರೆ ಮನೆಯ ಹೆಣ್ಣುಮಕ್ಕಳ ಬೆತ್ತಲೆ ಸೌಜನ್ಯ ಮರೆತ ಗಂಡಸರಿಗೆ ರೋಮಾಂಚನಕಾರಿ ಅನುಭವ ಕೊಡಬಲ್ಲುದು, ಆದರೆ ಆದೇ ರೀತಿ ತಮ್ಮ ಮನೆಯ ಮಹಿಳೆಯರ ಬೆತ್ತಲೆ ವಿಡಿಯೋ ಇದ್ದಲ್ಲಿ ಹೀಗೆಯೇ ಹಂಚಿಕೊಂಡು ವಿಕೃತಾನಂದ ಅನುಭವಿಸಲು ಸಾಧ್ಯವಿತ್ತಾ?
ಪುರುಷಪ್ರಧಾನ ವ್ಯವಸ್ಥೆಯಲ್ಲಿ ಶೀಲ, ಪಾವಿತ್ರ್ಯ, ಮಾನ ಮರ್ಯಾದೆಗಳನ್ನೆಲ್ಲಾ ಮಹಿಳೆಯರ ಮೇಲೆ ಹೇರಲಾಗಿದೆ. ಅವುಗಳನ್ನು ಕಾಪಾಡಿಕೊಂಡು ಹೋಗುವುದೇ ಪ್ರತಿ ಸ್ತ್ರೀಕುಲದ ಕರ್ತವ್ಯವನ್ನಾಗಿಸಲಾಗಿದೆ. ಆದರೆ ಅದೇ ಗಂಡಸರು ಮಾಡಬಾರದ್ದನ್ನು ಮಾಡಿದರೂ, ಎಷ್ಟೇ ಹೆಂಗಸರ ಜೊತೆ ಅಕ್ರಮ ಸಂಬಂಧ ಹೊಂದಿದ್ದರೂ, ಅಂತವರನ್ನು ರಸಿಕ ಗಂಡಸು ಎಂದೇ ಮಾನ್ಯ ಮಾಡಲಾಗುತ್ತದೆ. ಈ ರೀತಿಯ ಸಾಮಾಜಿಕ ಮನಸ್ಥಿತಿಯೇ ಲಿಂಗಬೇಧಕ್ಕೆ ಪ್ರೇರಣೆಯಾಗಿದೆ. ‘ಹೆಣ್ಣು ಭೋಗದ ವಸ್ತು’ ಎನ್ನುವ ಮನುವಾದಿ ಪ್ರೇರಿತ ಸನಾತನ ಮನಸ್ಥಿತಿ ಇನ್ನೂ ಬದಲಾಗದೇ ಇರುವುದಕ್ಕೇ ಮಹಿಳೆಯರ ಮೇಲೆ ದಬ್ಬಾಳಿಕೆ ನಿರಂತರವಾಗಿದೆ. ಕಾಲ ಅದೆಷ್ಟೇ ಬದಲಾದರೂ ಗಂಡಾಳ್ವಿಕೆಯ ಮುಂದೆ ಮಹಿಳೆಯರು ಅಡಿಯಾಳಾಗೇ ಇರಬೇಕು ಎನ್ನುವಂತಹ ಪಾರಂಪರಿಕ ಮನೋವ್ಯಾಧಿ ಗಂಡುಕುಲಕ್ಕೆ ಬಳವಳಿಯಾಗಿಯೇ ಬಂದಂತಿದೆ.
ಮಹಿಳೆಯರಿಗೂ ಮನಸ್ಸಿರುತ್ತದೆ, ಅವರ ದೇಹದ ಮೇಲೆ ಅವರಿಗೆ ಹಕ್ಕಿರುತ್ತದೆ. ಹೆಣ್ಮಕ್ಕಳ ಮನಸ್ಸು ಮತ್ತು ದೇಹದ ಮೇಲೆ ಮಾಡುವ ಯಾವುದೇ ರೀತಿಯ ಆಕ್ರಮಣ, ದೌರ್ಜನ್ಯ ಹಾಗೂ ಶೀಲ ಪಾವಿತ್ರ್ಯದ ಹೆಸರಲ್ಲಿ ಮಾಡಲಾಗುವ ಅವಮಾನ ಅಮಾನವೀಯ ಕೃತ್ಯ. ಯಾವುದೋ ಒಂದು ಕ್ರಿಮಿ ತನ್ನ ಅಧಿಕಾರದ ದುರ್ಬಳಕೆ ಮಾಡಿಕೊಂಡು ಹಲವಾರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಆತ ಎಲ್ಲಾ ರೀತಿಯ ನಿಂದನೆಗೆ, ಅವಮಾನಕ್ಕೆ, ಶಿಕ್ಷೆಗೆ ಅರ್ಹನಾಗುತ್ತಾನೆ. ಆದರೆ ಅಂತಹ ಬೇಟೆಗಾರನನ್ನು ಬಿಟ್ಟು ಬೇಟೆಯಾದವರನ್ನು ಅವಮಾನಕ್ಕೀಡು ಮಾಡುವುದೇ ಅಸಹನೀಯ. ಮನುಷ್ಯತ್ವ ಇರುವ ಎಲ್ಲರೂ ಈಗ ಸಂತ್ರಸ್ತ ಮಹಿಳೆಯರ ಪರವಾಗಿ ನಿಲ್ಲಬೇಕಿದೆ. ಸಾಧ್ಯವಾದಷ್ಟೂ ಅವರಿಗೆ ಮತ್ತು ಅವರ ಕುಟುಂಬದವರಿಗೆ ಸಾಂತ್ವನ ಹಾಗೂ ಧೈರ್ಯವನ್ನು ತುಂಬ ಬೇಕಾಗಿದೆ. ಕೇಡು ಮಾಡಿದವರಿಗೆ ಕಠಿಣಾತಿಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಬೇಕಿದೆ.
ಇದನ್ನೂ ಓದಿ- ಪ್ರಜ್ವಲ್ ಪ್ರಕರಣ | ಪಿತೃಪ್ರಧಾನ ರಾಜಕಾರಣದ ಅಟ್ಟಹಾಸ
ಆದರೆ.. ಈ ಗಂಡಾಳ್ವಿಕೆಯಲ್ಲಿ ಅದೆಲ್ಲಾ ಸಾಧ್ಯವೇ? ಈ ಹಿಂದೆ ನಡೆದ ಬೇಕಾದಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ಇನ್ನೂ ಇತ್ಯರ್ಥ ಕಂಡಿಲ್ಲ. ಅಧಿಕಾರ ಅಂತಸ್ತು ಬಳಸಿ ದೌರ್ಜನ್ಯ ಮಾಡಿದ ಗಂಡು ಹೋರಿಗಳು ಈಗಲೂ ರಾಜಾರೋಷವಾಗಿ ಸಮಾಜದಲ್ಲಿ ಓಡಾಡುತ್ತಿದ್ದಾರೆ. ರಮೇಶ ಜಾರಕಿಹೊಳಿಯಿಂದಾ ಹಿಡಿದು ಬ್ರಿಜ್ ಭೂಷಣ್ ಸಿಂಗ್ ವರೆಗೆ ಇಂತಹ ಮಹಿಳಾ ಪೀಡಕರ ದೊಡ್ಡ ಪಟ್ಟಿಯೇ ಇದೆ. ಆದರೆ ಇಂತಹ ನಿರ್ಲಜ್ಜರು ಯಾವತ್ತೂ ತಮ್ಮ ತಪ್ಪಿಗೆ ಕ್ಷಮೆ ಕೇಳುವುದಿಲ್ಲ. ಜನರೂ ಸಹ ಇಂತಹ ಹೆಣ್ಣುಬಾಕರನ್ನು ದೂರವಿಡುವ ಬದಲು ಮತ್ತೆ ಅಧಿಕಾರ ಕೊಟ್ಟು ಗೌರವಿಸುತ್ತಲೇ ಇದ್ದಾರೆ. ಇದಕ್ಕೆ ಪ್ರಜ್ವಲ್ ರೇವಣ್ಣ ಅಥವಾ ರೇವಣ್ಣನಂತವರು ಹೊರತಲ್ಲ. ಅತ್ಯಾಚಾರದ ದೂರು ಇರುವವರು ಜೈಲಿನಿಂದ ಬೇಲ್ ಮೇಲೆ ಬಿಡುಗಡೆ ಆದಾಗ ಸಂಭ್ರಮಿಸುವ ಹಿಂಬಾಲಕರ ಮನಸ್ಥಿತಿ ಆತಂಕಕಾರಿಯಾಗಿದೆ. ಇದೇ ಲೈಂಗಿಕ ದೌರ್ಜನ್ಯ ದ ಆರೋಪಕ್ಕೆ ಒಳಗಾದ ತಂದೆ ಮಗನಿಂದ ಈ ಸಂಭ್ರಮ ಪೀಡಿತರ ಮನೆಯ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದರೆ ಇವರು ಹೀಗೆಲ್ಲಾ ಪಟಾಕಿ ಹೊಡೆದು ವಿಜೃಂಭಿಸುತ್ತಿದ್ದರಾ?
ಯಾಕೋ ಇಡೀ ಸಮಾಜವೇ ಮಾನವೀಯ ಸಂವೇದನೆಯನ್ನು ಮರೆತಂತಿದೆ. ದೌರ್ಜನ್ಯ ಪೀಡಿತ ಮಹಿಳೆಯರನ್ನೇ ಕೇಂದ್ರವಾಗಿಟ್ಟುಕೊಂಡು ತಮ್ಮ ತಮ್ಮ ಹಿತಾಸಕ್ತಿಯನ್ನು ತೃಪ್ತಿಪಡಿಸಿಕೊಳ್ಳಲು ಅತೃಪ್ತ ಪುರುಷರು ಪ್ರಯತ್ನಿಸುತ್ತಿದ್ದಾರೆ. ರಾಜಕಾರಣಿಗಳ ಮಾತು ಬಿಡಿ. ಅವರಿರುವುದೇ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು. ಆದರೆ ಹಲವಾರು ನಾಗರೀಕ ಪ್ರಜೆಗಳೂ ಸಹ ಅಸಹ್ಯದ ಪೆನ್ ಡ್ರೈವ್ ಪಡೆಯಲು ಹಪಾಹಪಿಸುವುದು, ಅದಕ್ಕಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಹುಡುಕಾಟ ಮಾಡುವುದು, ಸಿಕ್ಕರೆ ನೋಡಿ ಆನಂದಿಸಿ ಬೇರೆಯವರಿಗೆ ಹಂಚುವುದು.. ಇದೂ ಸಹ ಅತ್ಯಾಚಾರಕ್ಕೆ ಸಮನಾದ ವಿಕೃತಿಯಾಗಿದೆ. ಪ್ರಜ್ವಲ್ ನಂತವ ಮಾಡಬಾರದ್ದನ್ನು ಮಾಡಿ ಪಾಪಿಯಾದರೆ, ಆತನ ಪಾಪದ ಕೃತ್ಯಗಳನ್ನು ನೋಡಿ ಹಂಚಿಕೊಂಡವರೂ ಮಹಾನ್ ಪಾಪಿಗಳೇ. ಇಂತಹ ಎಲ್ಲರಿಗೂ ಶಿಕ್ಷಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. ಮಹಿಳೆಯರನ್ನು ಗೌರವಿಸದ ಸಮಾಜ ನಾಗರೀಕ ಎಂದೆನಿಸುವುದಿಲ್ಲ.
ಇದನ್ನೂ ಓದಿ- ಪೆನ್ ಡ್ರೈವ್ ಪುರಾಣ ತೆರೆದು ತೋರುವ ಕೊಳಕು ವಾಸ್ತವ
ಈ ಲೈಂಗಿಕ ಹಗರಣದ ಪ್ರಮುಖ ಪಾತ್ರಧಾರಿಗಳಿಗೆ ಹಾಗೂ ವಿಡಿಯೋಗಳನ್ನು ಬಹಿರಂಗಪಡಿಸಿ ಹಂಚಿದ ಸೂತ್ರಧಾರರಿಗೆ ಶಿಕ್ಷೆ ಆಗಲೇಬೇಕೆಂದು ಸರಕಾರವನ್ನು, ತನಿಖಾ ಸಂಸ್ಥೆಗಳನ್ನು, ನ್ಯಾಯಾಲಯಗಳನ್ನು ಆಗ್ರಹಿಸಬೇಕಿದೆ. ಸಂತ್ರಸ್ತ ಮಹಿಳೆಯರು ಗೌರವಯುತವಾಗಿ ಬಾಳುವಂತಹ ವಾತಾವರಣವನ್ನು ನಿರ್ಮಿಸಬೇಕಿದೆ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ಹಲ್ಲೆ, ಹತ್ಯೆಗಳ ಕುರಿತು ಶೀಘ್ರವಾಗಿ ನಿರ್ಧಿಷ್ಟ ಕಾಲಮಿತಿಯಲ್ಲಿ ವಿಚಾರಣೆ ಮಾಡಿ ಶಿಕ್ಷಿಸುವ ವ್ಯವಸ್ಥೆಯನ್ನು ಜಾರಿಗೆ ತರಲೇಬೇಕೆಂದು ನೀತಿನಿರೂಪಕರ ಮೇಲೆ ಒತ್ತಡ ಹೇರಬೇಕಿದೆ. ಗಂಡಾಳ್ವಿಕೆಯ ದಮನ ಧಿಕ್ಕರಿಸಿ ಮಹಿಳೆಯರು ದಿಟ್ಟವಾಗಿ ಪ್ರತಿರೋಧ ತೋರಲೇ ಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಪ್ರಜ್ವಲ್ ಈಗ ಶಿಶ್ನ ಗೊಂಚಲಿನ ಬೇತಾಳ !