ಬೆಂಗಳೂರು: ಹೊಸಕೋಟೆಯ ಶ್ರೀ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ಸದಸ್ಯರೊಬ್ಬರನ್ನು ಸೇರಿಸಿರುವ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದ ಪೋಸ್ಟ್ ಹಾಕಿದ್ದ ಭಾರತೀಯ ಜನತಾ ಪಕ್ಷ ತನ್ನ ಅವಧಿಯಲ್ಲೂ ಮುಸ್ಲಿಂ ಸದಸ್ಯರನ್ನು ನೇಮಕ ಮಾಡಿದ ವಿಷಯ ಹೊರಗೆ ಬರುತ್ತಿದ್ದಂತೆ ಪೋಸ್ಟ್ ಗಳನ್ನು ಡಿಲೀಟ್ ಮಾಡಿ ಮುಖಭಂಗ ಅನುಭವಿಸಿದೆ.
ಬಿಜೆಪಿ ನಡೆಸುತ್ತಿರುವ ಅಪಪ್ರಚಾರಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದು, ಬಿಜೆಪಿ ಸರ್ಕಾರಗಳ ಅವಧಿಯಲ್ಲೂ ಮುಸ್ಲಿಂ ಸದಸ್ಯರು ಇರುವ ಕುರಿತು ದಾಖಲೆಗಳ ಸಮೇತ ಉತ್ತರಿಸಿದ್ದರಿಂದ ಬಿಜೆಪಿ ಮುಜುಗರಕ್ಕೆ ಸಿಲುಕಿ ಪೋಸ್ಟ್ ಡಿಲೀಟ್ ಮಾಡಿದೆ.
ಬಿಜೆಪಿ ಬೆಳಿಗ್ಗೆ ಈ ಕುರಿತು ಪೋಸ್ಟ್ ಮಾಡಿದ ಬೆನ್ನಲ್ಲೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ, ರಥೋತ್ಸವ ಸಮಿತಿಯಲ್ಲಿ ಸರ್ವ ಸಮುದಾಯದ ಸದಸ್ಯರನ್ನು ನೇಮಕಗೊಳಿಸುವುದು ದೇಗುಲದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಸಹ ಅಂದಿನ ಸಚಿವರಾಗಿದ್ದ ಎಂ.ಟಿ.ಬಿ.ನಾಗರಾಜ್ ಅವರು 2022 ನೇ ಸಾಲಿನ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಅಫ್ಸರ್ ಎಂಬುವವರನ್ನು ಸದಸ್ಯರನ್ನಾಗಿ ಮಾಡಿದ್ದರು.
2020-21ನೇ ಸಾಲಿನ ಸಮಿತಿಯಲ್ಲಿ ಸಹ ಇದೇ ಬಿಜೆಪಿಯವರು ಇಮ್ತಿಯಾಜ್ ಪಾಷಾ ಎಂಬುವವರು ಸದಸ್ಯರನ್ನಾಗಿ ಮಾಡಿದ್ದನ್ನು ಮರೆತಂತಿದೆ.
ಹಿಂದಿನ ಅವಧಿಯ ಎಲ್ಲ ಪಟ್ಟಿಗಳನ್ನು ಬಿಜೆಪಿ ತೆರೆದು ನೋಡಿ ಸ್ವಲ್ಪವಾದರೂ ವಿವೇಕದಿಂದ ವರ್ತಿಸಿದರೆ ಉತ್ತಮ ಎಂದು ಕಿವಿಮಾತು ಹೇಳಿದ್ದಾರೆ.
ಅನ್ಯಧರ್ಮಿಯರ ಬಗ್ಗೆ ದ್ವೇಷವನ್ನು ಬಿತ್ತಿ ಅವರ ವಿರುದ್ಧ ಹಿಂದೂ ಸಮುದಾಯವನ್ನು ಎತ್ತಿಕಟ್ಟುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಣಹದ್ದುಗಳಂತೆ ಸದಾ ಹಪಹಪಿಸುವ ಬಿಜೆಪಿಗರು ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳುತ್ತ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿಯನ್ನು ಯಾವಾಗ ನಿಲ್ಲಿಸುತ್ತೀರಿ? ಎಂದು ರಾಮಲಿಂಗಾರೆಡ್ಡಿ ಖಾರವಾಗಿ ಪ್ರಶ್ನಿಸಿದ್ದಾರೆ.