ಬಳ್ಳಾರಿ: ರಾಜ್ಯದ 223 ತಾಲೂಕಿನಲ್ಲಿ ಬರ ಇದೆ. ರಾಜ್ಯದಲ್ಲಿ ಬರ ಕಾಣಿಸಿಕೊಂಡು ಏಳು ತಿಂಗಳು ಕಳೆದರೂ ಕೇಂದ್ರ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯದ ಬಿಜೆಪಿ ಸಂಸದರು ಬರ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಮಾಡಲಿಲ್ಲ. ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋದಮೇಲೆ ಸ್ವಲ್ಪ ಹಣ ನೀಡಿದ್ದಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಆಕ್ರೋಶ ಹೊರ ಹಾಕಿದ್ದಾರೆ.
ಬಳ್ಳಾರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿ ಆಗೋ ಮುಂಚೆ ಇಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಎಲ್ಲ ಪಕ್ಷಗಳು ಒಟ್ಟಾಗಿ ಹೋಗಿ ಪ್ರಧಾನಿಯನ್ನು ಭೇಟಿ ಮಾಡುತ್ತಿದ್ದೆವು. ಈಗ ಕಾಲ ಬದಲಾಗಿದೆ ಯಾರು ಕೂಡ ಪರಿಹಾರ ಕೇಳಲು ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ತುಕಾರಾಂ ವಿದ್ಯಾವಂತ ಅಂತಾ ಬಳ್ಳಾರಿ ಟಿಕೇಟ್ ಕೊಡಲಾಗಿದೆ. ಅವರನ್ನು ಚುನಾಯಿಸಿ ಸಂಸತ್ತಿಗೆ ಕಳಿಸಿದರೆ ನಿಮ್ಮ ಸಮಸ್ಯೆಗಳ ಪರ ದೆಹಲಿಯಲ್ಲಿ ಧ್ವನಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಮತ ನೀಡುವಂತೆ ಮಾಧ್ಯಮಗಳ ಮೂಲಕ ಜನರಿಗೆ ಮನವಿ ಮಾಡಿದರು.
ಪ್ರಜ್ವಲ್ ರೇವಣ್ಣ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, SIT ತನಿಖೆಗೆ ವಹಿಸಲಾಗಿದೆ. ಎಲ್ಲ ಕ್ರಮ SIT ವಹಿಸಲಿದೆ. ತನಿಖೆ ಹಂತದಲ್ಲಿ ನಾವು ಹೋಗಬಾರದು. ತನಿಖೆ ಹಂತದಲ್ಲಿ ಇದರ ಬಗ್ಗೆ ಮಾತಾಡೋದು ಸೂಕ್ತವಲ್ಲ. ಪ್ರಕರಣದ ಮೇಲೆ ಪ್ರಭಾವವಲ್ಲ. ಜನರ ನಿಲುವಿನ ಮೇಲೆ ನಿರ್ಧಾರ. ಯಾವ್ದೆ ಘಟನೆ ಆದ್ರೂ ಕುಮಾರಸ್ವಾಮಿ ಮಹಾನಾಯಕ ಅಂತಾ ನೂರು ಬಾರಿ ಹೇಳ್ತಾರೆ. UPA ಸರ್ಕಾರದ ಅವಧಿಯಲ್ಲೂ ಅಣ್ಣಾ ಹಜಾರೆ ಹೋರಾಟ ಮಾಡಿದರು. 2G ಹಗರಣ , ಕಲ್ಲಿದ್ದಲು ಅಂತಾ ಅಂದರು. ಕೊನೆ ಏನಾಯ್ತು ಕಲ್ಲಿದ್ದಲು ಇಲ್ಲ ಹಗರಣನೂ ಇಲ್ಲ ಎಲ್ಲವೂ ಕ್ಲಿಯರ್ ಆಗಿದೆ ಎಂದರು.
ಹಿಂದೂ ಮುಸ್ಲಿಂ ಭೇದ ಹುಟ್ಟಿಸುವುದು ಬಿಜೆಪಿಯ ವಿಕೃತ ಮನೋಭಾವ. ಈ ಮನೋಭಾವವನ್ನು ಬಿಜೆಪಿ ಬಿಡಬೇಕು. ಎಲ್ಲ ಜನರು ಒಂದು ಎಂದು ತಿಳಿದುಕೊಳ್ಳಬೇಕು. ವೋಟ್ ಬೇಕು ಅಂದಾಗ ಎಲ್ಲರೂ ಬಿಜೆಪಿಗೆ ಬೇಕಾಗ್ತಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.