ಹಾವೇರಿ: ಎರಡನೇ ಹಂತದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಶುರುವಾಗಿದ್ದು, ನಾಳೆ ಗದಗ ನಗರಕ್ಕೆ ಪಕ್ಷದ ಅಧಿನಾಯಕಿ ಪ್ರಿಯಾಂಕ ಗಾಂಧಿಯವರು ಆಗಮಿಸಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸಲಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಹಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ ಅವರು, ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಭರ್ಜರಿಯಾಗಿ ನಡೆದಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳನ್ನು ಮನೆ ಮನೆಗೆ ತಲುಪಿಸಿದ್ದೇವೆ. ನಾಳೆ ಗದಗದಲ್ಲಿ ಪ್ರಿಯಾಂಕಾ ಗಾಂಧಿಯವರು ಆಗಮಿಸಿ ಗೃಹಲಕ್ಷ್ಮೀ ಕಾರ್ಯಕ್ರಮದ ಮಹತ್ವವನ್ನು ತಿಳಿಸಲಿದ್ದಾರೆ. ಈ ಮೂಲಕ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರೇರಣೆ ನೀಡಲಿದ್ದಾರೆ ಎಂದರು.
ಕರ್ನಾಟಕದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಅಮಿತ್ ಷಾ ಹೇಳುತ್ತಿದ್ದಾರೆ. ಪ್ರಜ್ವಲ್ ಪ್ರಕರಣದಲ್ಲಿ ಸಂತ್ರಸ್ತರಾದ ಮಹಿಳೆಯವರ ಬಗ್ಗೆ ಚಕಾರ ಎತ್ತದ ಮೋದಿ, ಅಮಿತ್ ಶಾ ಅವರಿಗೆ ರಾಜ್ಯದ ಮಹಿಳೆಯರ ಬಗ್ಗೆ ಮಾತನಾಡುವ ಯಾವ ನೈತಿಕತೆ ಉಳಿದಿದೆ ಎಂದು ಪ್ರಶ್ನಿಸಿದರು. ಮೋದಿಯವರ ಭಾಷೆ ಪ್ರಧಾನಮಂತ್ರಿಗೆ ಶೋಭೆ ತರಲ್ಲ. ಮೋದಿಯವರ ಆಲೋಚನೆ ದೇಶಕ್ಕೆ ಗಂಡಾಂತರ. ತಾಳಿ ಕಿತ್ತುಕೊಳ್ಳುವುದು ಅಲ್ಲ, ತಾಳಿ ಕೊಡುವ ಪಕ್ಷ ನಮ್ಮದು. ದೇಶಕ್ಕಾಗಿ ತಾಳಿ ತ್ಯಾಗ ಮಾಡಿದ್ದು ಸೋನಿಯಾ ಗಾಂಧಿ.
ಕಪಾಳಮೋಕ್ಷದ ನಂತರ ಬರ ಪರಿಹಾರ ನೀಡಿದ ಕೇಂದ್ರ
ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿಗಳನ್ನು ಟೀಕೆ ಮಾಡ್ತಾರೆ. ಅಚ್ಚೆ ದಿನ್ ಬಂದಿದೆ ಅಂತಾ ಯಾರಿಗಾದರು ಅನಿಸಿದೆಯಾ. ಅಭಿವೃದ್ಧಿ ಹೊಂದುತ್ತಿರುವ ಕರ್ನಾಟಕ ರಾಜ್ಯಕ್ಕೆ ಕುತ್ತಿಗೆ ಹಿಚುಕುವ ಕೆಲಸ ಮಾಡುತ್ತಿದ್ದಾರೆ. ಕಪಾಳಮೋಕ್ಷ ಮಾಡಿಕೊಂಡು ಬರ ಪರಿಹಾರ ಬಿಡುಗಡೆ ಮಾಡಿದರು. ದೇಶ ಬಿಟ್ಟು ಯಾಕೆ ಓಡಿ ಹೋದ್ರಿ, ಪಕ್ಷದಿಂದ ಯಾಕೆ ಅಮಾನತು ಮಾಡಿದ್ರಿ. ಇಷ್ಟಾದ ಮೇಲು ನಿಮಗೆ ನಾಚಿಕೆ ಬರಬೇಕಲ್ವ. ಇದೊಂದು ದೊಡ್ಡ ಅಪರಾದ, ವಿಕೃತ ಮನಸ್ಥಿತಿ ಎಂದಿದ್ದಾರೆ.