ಅಭಿವೃದ್ಧಿ ಎಂಬ ಭ್ರಮೆ

Most read

ಕಳೆದ ಹತ್ತು ವರ್ಷಗಳ ಮೋದಿ ಸರಕಾರದಲ್ಲಿ ಭಾರತದ ಸಾಲ 2014 ರಲ್ಲಿ 53 ಲಕ್ಷ ಕೋಟಿ ಇದ್ದದ್ದು 2024 ರಲ್ಲಿ 168 ಕೋಟಿಗೆ ಹೆಚ್ಚಾಗಿದೆ. ಅಂದರೆ ಪ್ರತಿಯೊಬ್ಬ ಭಾರತೀಯನ ತಲೆಯ ಮೇಲಿರುವ ಸಾಲದ ಹೊರೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಅದೇ ಸಮಯದಲ್ಲಿ ಅಂಬಾನಿಯ ಆಸ್ತಿ 350 ಪಟ್ಟು ಹೆಚ್ಚಾಗಿದೆ. ಆದಾನಿಯ ಸಂಪತ್ತು 1225 ಪಟ್ಟು ವೃದ್ಧಿಯಾಗಿದೆ. ಹಾಗಾದರೆ ಮೋದಿಯವರು ಮಾಡಿದ್ದು ಯಾರ ಅಭಿವೃದ್ಧಿ? – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇ಼ಷಕರು

” ನಮ್ಮ ದೇಶದ ಅಭಿವೃದ್ಧಿಯ ಪರಿಕಲ್ಪನೆಯೇ ಸರಿಯಿಲ್ಲ. ಅಭಿವೃದ್ಧಿ ಎಂದರೆ ಸೇತುವೆ- ಸುರಂಗ ಮಾರ್ಗ, ಬೃಹತ್ ರಸ್ತೆಗಳ ನಿರ್ಮಾಣ ಅಥವಾ ಮೆಟ್ರೋ ಬುಲೆಟ್ ರೈಲುಗಳ ಸಂಪರ್ಕ ಎಂಬಂತಹ ತಪ್ಪು ಅಭಿಪ್ರಾಯಗಳು ತಲೆಯಲ್ಲಿವೆ. ಕಟ್ಟಕಡೆಯ ಬಡವನಿಗೆ ಪುಟ್ಟ ಮನೆ, ಆತನ ಮಕ್ಕಳಿಗೆ ಕೈಗೆಟಕುವ ದರದಲ್ಲಿ ಉತ್ತಮ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯ ಸಿಗುವಂತಾಗುವುದೇ ನಿಜವಾದ ಅಭಿವೃದ್ಧಿ” ಎಂಬ ಸಾರ್ವಕಾಲಿಕ ಸತ್ಯವನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ರವರು ಹೇಳಿದರು. ಎಪ್ರಿಲ್ 13 ರಂದು ಬೆಂಗಳೂರಿನಲ್ಲಿ ಹೈಕೋರ್ಟ್ ಹಿರಿಯ ವಕೀಲ ಡಿ.ಎಲ್.ಎನ್.ರಾವ್ ಪ್ರತಿಷ್ಠಾನ ಆಯೋಜಿಸಿದ್ದ “ಪರಿಸರ ನ್ಯಾಯವನ್ನು ನಿಶ್ಚಿತಗೊಳಿಸುವ ಹಾದಿಗಳು” ಎಂಬ ವಿಚಾರ ಸಂಕಿರಣದಲ್ಲಿ ವಿಶೇಷ  ಉಪನ್ಯಾಸ ನೀಡಿದ ನ್ಯಾಯಮೂರ್ತಿಗಳು ಅಭಿವೃದ್ಧಿಯ ನಿಜ ಸ್ವರೂಪವನ್ನು ಬಿಚ್ಚಿಟ್ಟರು.

ಹೌದು.. ಆಧುನಿಕ ನಾಗರೀಕ ಸಮಾಜದಲ್ಲಿ ಅಭಿವೃದ್ಧಿ ಎಂಬುದರ ಮಾನದಂಡವೇ ದೇಶಾದ್ಯಂತ ದಶಪಥ ರಸ್ತೆ, ಸುಸಜ್ಜಿತ ರೈಲು ನಿಲ್ದಾಣ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸುರಂಗ ಮಾರ್ಗ, ದೊಡ್ಡದಾದ ಸೇತುವೆ ಆಣೆಕಟ್ಟುಗಳಾಗಿವೆ. 4ಜಿ, 5ಜಿ, 6ಜಿ ನೆಟ್ ಜಾಲಗಳಾಗಿವೆ.‌ ಆದರೆ ವಾಸ್ತವದಲ್ಲಿ ಇವುಗಳು ಇಲ್ಲದೆಯೇ ಮನುಷ್ಯ ಬದುಕಬಹುದಾಗಿದೆ.

ಆದರೆ ದೇಶದಲ್ಲಿರುವ ಪ್ರತಿಯೊಬ್ಬನಿಗೂ ಇರಲು ಮನೆ, ದುಡಿಯಲು ಕೆಲಸ,  ಕಲಿಯಲು ಉಚಿತ ಶಿಕ್ಷಣ, ಬದುಕಲು ಅತ್ಯುತ್ತಮ ಆರೋಗ್ಯ ವ್ಯವಸ್ಥೆಗಳು ಅಗತ್ಯವಾಗಿವೆ. ಈ ಎಲ್ಲಾ ಅಗತ್ಯಗಳನ್ನು ಪೂರೈಸುವುದೇ ಅಭಿವೃದ್ಧಿಯ ಮೊದಲ ಅತ್ಯಗತ್ಯ ಹಂತವಾಗಿದೆ. ತದನಂತರದ ಸರದಿ ರಸ್ತೆ, ಸೇತುವೆ, ವಿಮಾನ ನಿಲ್ದಾಣ, ಬಾಹ್ಯಾಕಾಶ ಪ್ರಯಾಣಗಳಾಗಿವೆ. 

ವಂದೇ ಭಾರತ್ ರೈಲು ಉದ್ಘಾಟನೆ

ದೇಶದ ಶೇಕಡಾ 80 ರಷ್ಟು ಜನರು ಬಡತನದಲ್ಲಿರುವಾಗ, ಶೆ.40 ರಷ್ಟು ನಿರುದ್ಯೋಗಿಗಳೇ ತುಂಬಿರುವಾಗ, ಉತ್ತಮ ಶಿಕ್ಷಣ ಹಾಗೂ ಅತ್ಯುತ್ತಮ ಚಿಕಿತ್ಸೆ ಎನ್ನುವುದೇ ಬಹುಜನರಿಗೆ ಗಗನಕುಸುಮ ವಾಗಿರುವಾಗ ಚಂದ್ರಯಾನ ಮಾಡಿ ಏನುಪಯೋಗ? ಪ್ಯಾಸೆಂಜರ್ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣಿಸಲು ಹಣವಿಲ್ಲದೇ ಪರದಾಡುವ ಕೋಟ್ಯಾಂತರ ಬಡವರು ಇರುವಾಗ ಕೈಗೆಟುಗದ ದರದ ವಂದೇ ಭಾರತ್ ಇಲ್ಲವೇ ಬುಲೆಟ್ ರೈಲುಗಳನ್ನು ಓಡಿಸುವುದು ಸಾಧನೆ ಏನು? 

ಅಭಿವೃದ್ಧಿ ಎಂಬುದು ಪಿರಮಿಡ್ ಆಕಾರದ ಕೆಳದಿಂದ ಮೇಲಕ್ಕೆ ಹಂತ ಹಂತವಾಗಿ ಏರಿ ತುದಿ ತಲುಪಬೇಕೇ ಹೊರತು ವ್ಯವಸ್ಥೆಯ ಮೇಲ್ತುದಿಯವರ ಅಗತ್ಯ ಪೂರೈಸುವುದಕ್ಕಲ್ಲ.

ಈಗಲೂ ಅಭಿವೃದ್ಧಿಯ ಹೆಸರಲ್ಲಿ ಆಗುತ್ತಿರುವುದೇ ಅದು. ವಿಶಾಲವಾದ ಕಾರಿಡಾರ್ ರಸ್ತೆ ನಿರ್ಮಿಸಲಾಗುತ್ತದೆ. ಅಲ್ಲಲ್ಲಿ ಟೋಲ್ ಹಾಕಿ ಹಣ ವಸೂಲಿ ಮಾಡಲಾಗುತ್ತದೆ. ಹಣ ಇದ್ದವರ ಕಾರು ಲಾರಿಗಳಿಗಾಗಿ ಇರುವ ಈ ಹೆದ್ದಾರಿಗಳಲ್ಲಿ ಬಡವರ ಚಕ್ಕಡಿಗೆ ಇಲ್ಲವೇ ರೈತರ ಟ್ರ್ಯಾಕ್ಟರ್ ಗಳಿಗೆ ಪ್ರವೇಶವೇ ಇಲ್ಲವಾಗಿದೆ. ಬರೀ ಉಳ್ಳವರ ಪ್ರಯಾಣಕ್ಕಾಗಿ, ವ್ಯಾಪಾರಿಗಳ ಸರಕು ಸಾಗಣೆಗಾಗಿ ಮಾತ್ರವೇ ಈ ರಸ್ತೆಗಳು ಹೆಚ್ಚಾಗಿ ಬಳಕೆಯಾಗುವುದೇ ಆದರೆ ಇಂತಹ ಅಭಿವೃದ್ಧಿ ಬೇಕೆ? ದೇಶವಾಸಿಗಳ ತೆರಿಗೆ ಹಣದಲ್ಲಿ ಮಾಡಲಾದ ವಂದೇ ಭಾರತ್, ಬುಲೆಟ್ ರೈಲುಗಳಲ್ಲಿ ದುಬಾರಿ ಬೆಲೆ ತೆತ್ತು ಪ್ರಯಾಣಿಸಲು ಬಡವರಿಗೆ ರೈತಾಪಿ ಕೂಲಿ ಕಾರ್ಮಿಕರಿಗೆ ಸಾಧ್ಯವೇ ಇಲ್ಲದಿರುವಾಗ, ಕೇವಲ ಉಳ್ಳವರ ಪ್ರಯಾಣಕ್ಕೆ ಇಂತಹ ರೈಲುಗಳು ನಿರ್ಮಾಣಗೊಂಡಿರುವಾಗ ಇಂತಹ ಶ್ರೀಮಂತರ ಪರವಾದ ಅಭಿವೃದ್ಧಿ ಯಾಕೆ? ಬಹುಸಂಖ್ಯಾತ ಬಡಜನರು ಎಂದೂ ಪ್ರಯಾಣಿಸದ ವಿಮಾನಯಾನದ ಅಭಿವೃದ್ಧಿ ಜೋರಾಗಿದೆ. ಜಿಲ್ಲಾ ಕೇಂದ್ರಗಳಲ್ಲೂ ರೈತರ ನೂರಾರು ಎಕರೆ ಅನ್ನ ಬೆಳೆಯುವ ಭೂಮಿಯನ್ನು ವಶಪಡಿಸಿಕೊಂಡು ವಿಮಾನ ನಿಲ್ದಾಣಗಳನ್ನು ನಿರ್ಮಿಸಿ ಅಭಿವೃದ್ಧಿ ಮಾಡಿದ್ದಾಗಿ ಬಿಂಬಿಸಲಾಗುತ್ತದೆ. ಜನರ ತೆರಿಗೆಯ ಹಣದಲ್ಲಿ ಶ್ರೀಮಂತರಿಗಾಗಿ ನಿರ್ಮಿಸಲಾದ ಹೆದ್ದಾರಿ, ರೈಲು, ವಿಮಾನ, ಬಂದರುಗಳ ನಿರ್ವಹಣೆಯನ್ನು ಆದಾನಿ ಅಂಬಾನಿಯಂತಹ ದೈತ್ಯ ಖಾಸಗಿ ಕಾರ್ಪೋರೇಟ್ ಕಂಪನಿಗಳಿಗೆ ನೀಡಲಾಗುತ್ತದೆ. ಇಂತಹ ದೊಡ್ಡ ಕಂಪನಿಗಳ ಸಹಭಾಗಿತ್ವದಲ್ಲಿ ಹಲವಾರು ಅಭಿವೃದ್ಧಿಗಳು ಲೂಟಿ ಯೋಜನೆಯ ಭಾಗವಾಗಿವೆ.

ಮೈಸೂರು ಎಕ್ಸ್‌ಪ್ರೆಸ್‌ ವೇ 

ಭೂಮಿ ರೈತರದ್ದು, ಹಣ ತೆರಿಗೆದಾರರದು, ಲಾಭ ಕಾರ್ಪೋರೇಟ್ ಕಂಪನಿಗಳಿಗೆ, ಇದಕ್ಕೆಲ್ಲಾ ಇಟ್ಟ ಹೆಸರು ಅಭಿವೃದ್ಧಿ. ಇದು ಕಾರ್ಪೋರೇಟೀಕರಣ ವ್ಯವಸ್ಥೆಯಲ್ಲಿ ನಮ್ಮ ದೇಶದ ಅಭಿವೃದ್ಧಿಯ ಪರಿಕಲ್ಪನೆಯಾಗಿದೆ. ಜನಸಾಮಾನ್ಯರ ಬದುಕನ್ನು ಉನ್ನತೀಕರಿಸುವಂತಹ ಯಾವುದೇ ಯೋಜನೆಗಳನ್ನು ಮಾಡದ ಕೇಂದ್ರ ಸರಕಾರವು ಲೂಟಿಕೋರರಿಗೆ ಅನುಕೂಲವಾಗುವಂತಹ ಯೋಜನೆಗಳನ್ನೇ ರೂಪಿಸುತ್ತದೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಕೆಲಸ ಕೊಡುವಂತಹ ಸರಕಾರಿ ಸಾಮ್ಯದ ಕಾರ್ಖಾನೆಗಳನ್ನು ಸ್ಥಾಪಿಸಲಾಗದೆ ಇರುವ ಸರಕಾರಿ ಮಾಲೀಕತ್ವದ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ರೈತರ ಆದಾಯ ದ್ವಿಗುಣ ಗೊಳಿಸುವಂತಹ ಯೋಜನೆಗಳನ್ನು ನಿರ್ಲಕ್ಷಿಸಿ ರೈತರ ಭೂಮಿಯನ್ನು ಕಬಳಿಸುವಂತಹ ಖಾಸಗಿ ಸಹಭಾಗಿತ್ವದ ಪ್ರಾಜೆಕ್ಟ್‌ ಗಳನ್ನು ಜಾರಿಮಾಡುತ್ತದೆ. ಅಭಿವೃದ್ಧಿ ಅಂದರೆ ಇದೇನಾ? 

ಎರಡರಿಂದ ಮೂರೂವರೆ ಟ್ರಿಲಿಯನ್ ಡಾಲರ್ ಗೆ ಭಾರತದ ಆರ್ಥಿಕತೆ ಹೆಚ್ಚಿದೆ. ಇದನ್ನು ಐದು ಟ್ರಿಲಿಯನ್ನಿಗೆ ಏರಿಸುವುದೇ ನಮ್ಮ ಗುರಿ ಎಂದು ಮೋದಿಯವರು ಹೇಳುತ್ತಲೇ ಇದ್ದಾರೆ. ಭಾರತದ ಅರ್ಧದಷ್ಟು ಸಂಪನ್ಮೂಲಗಳು ಬೆರಳೆಣಿಕೆಯ ಅತೀ ಶ್ರೀಮಂತರ ಪಾಲಾಗಿರುವಾಗ, ಜನರನ್ನು ಲೂಟಿ ಮಾಡಿ ಸಂಪಾದಿಸಿದ ಅಂತವರ ಆಸ್ತಿ ಮೌಲ್ಯವನ್ನು ಭಾರತದ ಆರ್ಥಿಕ ಬೆಳವಣಿಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗುತ್ತದೆ. ಅದೇ ಸಮಯಕ್ಕೆ 80 ಕೋಟಿ ಬಡವರಿಗೆ ಉಚಿತ ಅಕ್ಕಿಯನ್ನು ಕೊಡಲಾಗುತ್ತಿದೆ ಎಂದೂ ಘೋಷಿಸಲಾಗುತ್ತಿದೆ. ಅಂದರೆ ಐದು ಟ್ರಿಲ್ಲಿಯನ್ ಆರ್ಥಿಕತೆಯತ್ತ ಸಾಗುತ್ತಿರುವ, ಜಗತ್ತಿನ ಮೂರನೇ ಆರ್ಥಿಕ ಬಲಾಢ್ಯ ದೇಶವಾಗುತ್ತಿರುವ ನಮ್ಮ ಭಾರತದಲ್ಲಿ ಯಾಕೆ ಇನ್ನೂ 80 ಕೋಟಿಯಷ್ಟು ಉಚಿತ ಅಕ್ಕಿ ಪಡೆಯುವ ಬಡವರಿದ್ದಾರೆ? ಉತ್ತರ ಬಹಳ ಸ್ಪಷ್ಟವಾಗಿದೆ. ಇಲ್ಲಿ ಅಭಿವೃದ್ಧಿ ಎನ್ನುವುದು ಶ್ರೀಮಂತರಿಗಾಗಿ ಶ್ರೀಮಂತರಿಗೋಸ್ಕರ ಎನ್ನುವುದಾಗಿದೆ. ಮುಕ್ಕಾಲು ಪಾಲು ದೇಶವಾಸಿಗಳ ಬದುಕು ಇನ್ನೂ ಬಡತನದಲ್ಲೇ ಇದೆ. ಹೀಗಿರುವಾಗ ಈ ದೇಶ ಎತ್ತ ಸಾಗುತ್ತಿದೆ? ಅಭಿವೃದ್ಧಿ ಯಾರ ಪರವಾಗಿದೆ? ನಿಜವಾಗಿಯೂ ಎಲ್ಲರ ಬದುಕು ಆರ್ಥಿಕವಾಗಿ ಸಬಲತೆಯನ್ನು ಪಡೆದಿದ್ದೇ ಆಗಿದ್ದಲ್ಲಿ ಉಚಿತ ಯೋಜನೆಗಳ ಅಗತ್ಯವಾದರೂ ಯಾಕೆ ಬೇಕಿದೆ? 

ಕಳೆದ ಹತ್ತು ವರ್ಷಗಳ ಮೋದಿ ಸರಕಾರದಲ್ಲಿ ಭಾರತದ ಸಾಲ 2014 ರಲ್ಲಿ 53 ಲಕ್ಷ ಕೋಟಿ ಇದ್ದದ್ದು 2024 ರಲ್ಲಿ 168 ಕೋಟಿಗೆ ಹೆಚ್ಚಾಗಿದೆ. ಅಂದರೆ ಪ್ರತಿಯೊಬ್ಬ ಭಾರತೀಯನ ತಲೆಯ ಮೇಲಿರುವ ಸಾಲದ ಹೊರೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಅದೇ ಸಮಯದಲ್ಲಿ ಅಂಬಾನಿಯ ಆಸ್ತಿ 350 ಪಟ್ಟು ಹೆಚ್ಚಾಗಿದೆ. ಆದಾನಿಯ ಸಂಪತ್ತು 1225 ಪಟ್ಟು ವೃದ್ಧಿಯಾಗಿದೆ. ಹಾಗಾದರೆ ಮೋದಿಯವರು ಮಾಡಿದ್ದು ಯಾರ ಅಭಿವೃದ್ಧಿ? ಸಾಲ ಮಾಡಿದ್ದು ಯಾರ ಪಾಲಾಗಿದೆ? ಕಾರ್ಪೋರೇಟ್ ತೆರಿಗೆಯನ್ನು 30% ನಿಂದ 22% ಗೆ ಇಳಿಸಿದ್ದು ಯಾಕೆ? ದೊಡ್ಡ ಶ್ರೀಮಂತರ 16 ಲಕ್ಷಕ್ಕೂ ಹೆಚ್ಚು ಬ್ಯಾಂಕ್ ಸಾಲವನ್ನು ರೈಟಾಫ್ ಹೇಳಿ ಮನ್ನಾ ಮಾಡಿದ್ದೇಕೆ?

ಸಂಸತ್ತಿನ ಚುನಾವಣೆಯ ಸಂದರ್ಭದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳಿಕೊಂಡೇ ಮತದಾರರು ಮತದಾನ ಮಾಡಬೇಕಿದೆ. ಅಭಿವೃದ್ಧಿಯ ಹೆಸರಲ್ಲಿ ಕಾರ್ಪೋರೇಟ್ ಕುಳಗಳ ಅಭಿವೃದ್ಧಿ ಮಾಡುತ್ತಿರುವ ಮೋದಿ ಸರಕಾರವನ್ನು ಸೋಲಿಸಲೇ ಬೇಕಿದೆ‌. ಅತೀ ಶ್ರೀಮಂತರು ಲೂಟಿ ಮಾಡಿದ ದೇಶದ ಸಂಪನ್ಮೂಲಗಳನ್ನು ಮತ್ತೆ ದೇಶವಾಸಿಗಳಿಗೆ ಮರುಹಂಚಿಕೆ ಮಾಡುವ ಯೋಜನೆಗಳನ್ನು ರೂಪಿಸುವಂತವರಿಗೆ ಅಧಿಕಾರ ಕೊಡಬೇಕಿದೆ. ಕಾರ್ಪೋರೇಟ್ ಅಭಿವೃದ್ಧಿಯ ಯೋಜನೆಗಳು ಅಳಿದು ಜನಮುಖಿ ಅಭಿವೃದ್ಧಿ ಯೋಜನೆಗಳನ್ನು ತರಬಹುದಾದ ಸರಕಾರವನ್ನು ಆಯ್ಕೆ ಮಾಡಬೇಕಿದೆ. ಭಾರತ ಸರ್ವ ಜನಾಂಗದ ಆರ್ಥಿಕ ಸಮಾನತೆಯ ತೋಟವಾಗಬೇಕಿದೆ.

 ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ-ಕಡಿಮೆ ಮತದಾನ ; ಯಾರು ಕಾರಣ?

More articles

Latest article