ಭಾರತ ವಿಭಜನೆ ಆಗದೆ ಇದ್ದಿದ್ದರೆ ಜನರ ಈಗಿನ ಸ್ಥಿತಿ ಹೇಗಿರುತ್ತಿತ್ತು?

Most read

1947 ರಲ್ಲಿ ನಮ್ಮ ದೇಶ ವಿಭಜನೆ ಆಗದೆ ಇದ್ದಿದ್ದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ,  ನಮ್ಮ ದೇಶದ ಒಟ್ಟು 190 ಕೋಟಿ ಪ್ರಜೆಗಳ ಮನಸ್ಥಿತಿ ಹೇಗೆ ಇರುತ್ತಿತ್ತು ಎಂಬ ವಿಷಯದ ಮೇಲೆ ಪ್ರಜ್ಞಾವಂತರು ತಮ್ಮ ಕಲ್ಪನೆ ಓಡಿಸಿ, ಊಹೆಯನ್ನು ಬಳಸಿ, ಪತ್ರಿಕೆಗಳ ಮೂಲಕ ಅಥವಾ ಸೋಷಿಯಲ್ ಮೀಡಿಯಾದ ಮುಖಾಂತರ  ಜಿಜ್ಞಾಸೆ ನಡೆಸಲಿ. ಇದು ತುಂಬಾ ಆಸಕ್ತಿದಾಯಕ ಚರ್ಚೆ ಆಗಬಹುದು ಹಾಗೂ ಪುನಃ ಅಖಂಡ ಭಾರತದ ರಚನೆ ಆಗಬೇಕು ಎಂದು ಹೇಳುವವರ ಕಣ್ಣು ತೆರೆಸಬಹುದು – ಪ್ರವೀಣ್‌ ಎಸ್‌ ಶೆಟ್ಟಿ, ಚಿಂತಕರು.

ಹಿಂದಿನ ಮೂರು ವರ್ಷದಿಂದ ಬಿ‌ಜೆ‌ಪಿ ಸರಕಾರ ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಮುಂಚೆ ಅಂದರೆ ಆಗಷ್ಟ್ 14 ರಂದು  “ಭಾರತ ವಿಭಜನೆಯ ಕರಾಳ ನೆನಪಿನ ದಿನವಾಗಿ” (Partition Horrors remembrance day – ವಿಭಾಜನ್ ವಿಭೀಷಿಕ ಸ್ಮೃತಿ ದಿನ್) ದೇಶದೆಲ್ಲೆಡೆ ಆಚರಿಸುತ್ತಿದೆ.  ಗಾಂಧೀಜಿ & ನೆಹರೂರವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಈ ಸಂದರ್ಭವನ್ನು ಬಿ‌ಜೆ‌ಪಿ ಪರ ಮಾಧ್ಯಮಗಳು ಹಾಗೂ ಐ‌ಟಿ ಸೆಲ್ ಗಳು ಯಥೇಚ್ಛವಾಗಿ ಬಳಸುತ್ತಿವೆ.  ಗುಣವಾಗಿ ಮರೆತು ಹೋಗಿದ್ದ ಗಾಯವನ್ನು ಕೆರೆದು ಕೆರೆದು ತೆಗೆದು ಅದರಲ್ಲಿ ಮೆಣಸು ತುಂಬಿಸಿ ಅದರಿಂದ ಮುಂದಿನ ಚುನಾವಣೆಗಳಲ್ಲಿ ಜನರ ಕೋಮು ಭಾವನೆ ಕೆರಳಿಸಿ ಮತ ಪಡೆಯುವುದೇ ಈ ಆಗಸ್ಟ್ 14 ರ ಆಚರಣೆಯ ಉದ್ದೇಶ ಇರುವಂತಿದೆ.

ಅದೇನೇ ಇರಲಿ, ಒಂದು ವೇಳೆ 1947 ರಲ್ಲಿ ಭಾರತದ ವಿಭಜನೆ ಆಗದೇ ಇರುತ್ತಿದ್ದರೆ (ಈಗಿನ ಬಾಂಗ್ಲಾ ಮತ್ತು ಪಾಕಿಸ್ತಾನ ಕೂಡಿ) ಈಗ ಭಾರತದ ಒಟ್ಟು ಜನಸಂಖ್ಯೆ 190 ಕೋಟಿ ದಾಟಿರುತ್ತಿತ್ತು. ಹಾಗೂ ಅದರಲ್ಲಿ ಮುಸ್ಲಿಮರೇ 60 ಕೋಟಿ ಇರುತ್ತಿದ್ದರು, 10 ಕೋಟಿ ಇತರ ಅಲ್ಪ ಸಂಖ್ಯಾತರು ಹಾಗೂ 30 ಕೋಟಿ ನವಬೌದ್ಧರು ಮತ್ತು ಪರಿಶಿಷ್ಟ ವರ್ಗದವರು ಇರುತ್ತಿದ್ದರು. ಹಿಂದುಳಿದ ವರ್ಗದ (OBC) ಹಿಂದುಗಳು 65 ಕೋಟಿ ಇರುತ್ತಿದ್ದರು, ಸವರ್ಣೀಯರು ಅರ್ಥಾತ್ ಮನುವಾದಿ ಹಿಂದೂಗಳು ಕೇವಲ 25 ಕೋಟಿ ಮಾತ್ರ ಇರುತ್ತಿದ್ದರು.

ಭಾರತ ವಿಭಜನೆಯ ಸಂದರ್ಭ ಪಂಜಾಬ್‌ನ ಒಂದು ರೈಲ್ವೆ ಸ್ಟೇಷನ್..

ಆಗ ಅಖಂಡ ಭಾರತದ ಸಂಸತ್ತಿನಲ್ಲಿ (ಲೋಕಸಭೆ-ರಾಜ್ಯಸಭೆಯಲ್ಲಿ) 1,000 ಸದಸ್ಯರಿರುತ್ತಿದ್ದರು,  ಅದರಲ್ಲಿ ಅರ್ಧಕ್ಕೂ ಹೆಚ್ಚು ಸಂಸದರು ಅಲ್ಪಸಂಖ್ಯಾತ ಸಮುದಾಯದವರು ಹಾಗೂ ಪರಿಶಿಷ್ಟ ವರ್ಗದವರೇ ಆಗಿರುತ್ತಿದ್ದರು. ಮುಸ್ಲಿಂ ಸಂಸದರೇ 200 ಕ್ಕೂ ಹೆಚ್ಚು ಇರುತ್ತಿದ್ದರು.

ಮುಸ್ಲಿಮರು, ಸಿಖ್ಖರು, ಕ್ರೈಸ್ತರು, ಹಿಂದೂಗಳಿಗಿಂತ ಉತ್ತಮ ದೇಹ ಧಾರ್ಡ್ಯ ಹೊಂದಿರುವುದರಿಂದಾಗಿ ಮಿಲಿಟರಿ ಮತ್ತು ಪೊಲೀಸ್ ಇಲಾಖೆಯಲ್ಲೂ ಅಲ್ಪಸಂಖ್ಯಾತರೇ ಅರ್ಧಕ್ಕೂ ಹೆಚ್ಚು ಇರುತ್ತಿದ್ದರು. (ಗಮನಿಸಿ, ಬ್ರಿಟಿಷರು ಮುಸ್ಲಿಮರ ಧೈರ್ಯ ಮತ್ತು ಕಷ್ಟ ಸಹಿಷ್ಣು ಗುಣಗಳನ್ನು ನೋಡಿ ಅವರನ್ನು ‘ಮಾರ್ಷಲ್ ರೇಸ್  ಅರ್ಥಾತ್ ಯೋಧ ಜನಾಂಗ’ ಎಂದು ವರ್ಗೀಕರಿಸಿದ್ದರು).  ಈ  ಸ್ಥಿತಿಯಲ್ಲಿ ಕೋಮುವಾದಿಗಳು ಬಾಲ ಬಿಚ್ಚುತ್ತಿದ್ದರೆ ತಕ್ಷಣ ಅವರ ಬಾಲ ಕಾನೂನು ಪ್ರಕಾರವೇ ಸಂಸತ್ತಿನಲ್ಲಿ ಕಟ್ ಆಗುತ್ತಿತ್ತು.  ಗೋಧಿ ಮೀಡಿಯಾ, ಗುಲಾಮೀ ಮೀಡಿಯಾ, ದಿನವಿಡೀ ಹಿಂದೂ-ಮುಸ್ಲಿಂ ದ್ವೇಷದ ಅಜೆಂಡಾ ನಡೆಸುವ ಕೋಮುವಾದಿ ಮೀಡಿಯಾ, ಕುತ್ಸಿತ ಜಾಹೀರಾತನ್ನು ಸುದ್ದಿರೂಪದಲ್ಲಿ ಹಾಕುವ ದಿನಪತ್ರಿಕೆಗಳು, ಇವೆಲ್ಲಾ ಯಾವುದೂ ಇರುತ್ತಿರಲೇ ಇಲ್ಲ. ಜಾತಿವಾದಿ ಕೋಮುವಾದಿ ಆ-ವಾಣಿ ಈ-ವಾಣಿ ಉ-ವಾಣಿ ದಿನಪತ್ರಿಕೆಗಳೂ ಬೆಳೆಯುತ್ತಿರಲಿಲ್ಲ. ಕೇವಲ ಸೆಕ್ಯುಲರ್ ಪತ್ರಿಕೆಗಳು ಬೆಳೆಯುತ್ತಿದ್ದವು.  ಯಾವುದೇ ಯೋಗಿ-ಜೋಗಿ-ಸ್ವಾಮಿ-ಗುರುಗಳು  ದೊಡ್ಡ ದೊಡ್ಡ ರಾಜ್ಯದ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಜಾತಿ ಧರ್ಮದ ಹೆಸರಲ್ಲಿ ಚುನಾವಣೆಯಲ್ಲಿ ಮತ ಕೇಳಲು ಸಾಧ್ಯವೇ ಆಗುತ್ತಿರಲಿಲ್ಲ.  ಮಾತು ಮಾತಿಗೆ ನಮ್ಮ ಎದುರಾಳಿಗಳಿಗೆ ನೀನು ಪಾಕಿಸ್ತಾನಕ್ಕೆ ಹೋಗು ಎಂದು ಅರಚಲೂ ಆಗುತ್ತಿರಲಿಲ್ಲ.

ಎಲ್ಲದಕ್ಕೂ ಮಿಗಿಲಾಗಿ ಜನಸಂಘ- ಬಿ‌ಜೆ‌ಪಿ ಪಕ್ಷದ ಸ್ಥಾಪನೆ ಆಗುವುದಕ್ಕೆ ಯಾವುದೇ ಮೂಲ ಸಾಮಾಜಿಕ ನೆಲೆಗಟ್ಟು ಅಥವಾ ರಾಜಕೀಯ ಅಡಿಪಾಯ ಇರುತ್ತಿರಲೇ ಇಲ್ಲ! ಆರೆಸ್ಸೆಸ್, ಬಜರಂಗ ದಳ, ಹಿಂದೂ ಸೇನೆ ಮುಂತಾದ ಕೋಮುವಾದಿ ಸಂಘಟನೆಗಳಿಗೆ ಅಖಂಡ ಭಾರತದಲ್ಲಿ ಸ್ಥಾನವೇ ಸಿಗುತ್ತಿರಲಿಲ್ಲ. ಹಿಂದೂ ದೇವಸ್ಥಾನಗಳ ಜಾತ್ರೆಯಲ್ಲಿ ಮುಸ್ಲಿಮರು ಅಂಗಡಿ ಹಾಕುವಂತಿಲ್ಲ ಎಂದು ಯಾರೋ ಪುಡಿ ನೇತಾರ ಬಾಲಿಶ ಫರ್ಮಾನ್ ಹೊರಡಿಸುವಂತಿರಲಿಲ್ಲ. ಗೋಮಾಂಸ, ಹಿಜಾಬ್, ಹಲಾಲ್, ಲವ್ ಜಿಹಾದ್, ಗೋಮೂತ್ರ, ಸೆಗಣಿ ಇವುಗಳ ನೆಪದಲ್ಲಿ ಬೀದಿ ರೌಡಿಗಳು ಕಾನೂನು ಕೈಗೆ ತೆಗೆದುಕೊಳ್ಳಲು ಆಗುತ್ತಿರಲಿಲ್ಲ.  ಬಿ‌ಜೆ‌ಪಿ ಪಕ್ಷವೇ ಇಲ್ಲ ಎಂದ ಮೇಲೆ ಸುಳ್ಳುಗಳ ಫ್ಯಾಕ್ಟರಿಯಾದ ಬಿ‌ಜೆ‌ಪಿ ಐಟಿ ಸೆಲ್ ಇರುತ್ತಿರಲಿಲ್ಲ ಹಾಗೂ ಅವರ ಎರಡು ರೂಪಾಯಿ ಟ್ರೋಲ್ ಗಳೂ ಇರುತ್ತಿರಲಿಲ್ಲ,  ವಾಟ್ಸ್ಅಪ್ ಯೂನಿವರ್ಸಿಟಿಯ ಸ್ಥಾಪನೆಯೇ ಆಗುತ್ತಿರಲಿಲ್ಲ,  ಸುದ್ದಿ ವಾಹಿನಿಗಳ ಮೂಲಕ ಯಾರೂ ಕೋಮುದ್ವೇಷ ಹರಡಲು ಸಾಧ್ಯವಾಗುತ್ತಿರಲಿಲ್ಲ, ನಮ್ಮ ಮನೆಯ ನೆರೆಹೊರೆಯ ಜಗಳಗಂಟರನ್ನು ಉದ್ದೇಶಿಸಿ ‘ಪಾಕಿಸ್ತಾನಕ್ಕೆ ಹೋಗಿ’ ಎಂದು ಅರಚಲೂ ಆಗುತ್ತಿರಲಿಲ್ಲ.

ಆರೆಸ್ಸೆಸ್‌ ಪಥ ಸಂಚಲನ

ಹೈಕೋರ್ಟ್- ಸುಪ್ರೀಂ ಕೋರ್ಟಿನಲ್ಲಿ  ಅರ್ಧದಷ್ಟು ಸಂಖ್ಯೆಯ ನ್ಯಾಯಾಧೀಶರು ಮತ್ತು ವಕೀಲರು ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರೆ ಆಗಿರುತ್ತಿದ್ದರು.  ಆಗ ಬಾಬ್ರಿ ಮಸೀದಿಯ ಜಾಗದಲ್ಲಿ ರಾಮ ಮಂದಿರ ಇತ್ತು ಎಂದು ರಕ್ತಪಾತ ಮಾಡಲೂ ಆಗುತ್ತಿರಲಿಲ್ಲ ಹಾಗೂ ಕೋರ್ಟ್ ಆದೇಶದಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲೂ ಆಗುತ್ತಿರಲಿಲ್ಲ. ಯಾಕೆಂದರೆ ಪುರಾತತ್ವ ಇಲಾಖೆಯವರ ಪ್ರಕಾರ ಅಯೋಧ್ಯೆಯಲ್ಲಿ ಇದ್ದಿದ್ದು ಸಾಮ್ರಾಟ್ ಅಶೋಕನ ಕಾಲದ “ಸಾಕೇತ್” ಎಂಬ ಬೌದ್ಧ ವಿಹಾರ.  ಅಯೋಧ್ಯೆಗೆ ಶ್ರಾವಸ್ತಿ ಎಂಬ ಮೂಲ ಸ್ಥಳನಾಮ ಮತ್ತು ಸರಯೂ ನಡಿಗೆ ಘಾಗ್ರಾ ಎಂಬ ಮೂಲ ಹೆಸರು ಈಗಲೂ ಇರುತ್ತಿತ್ತು.  ಕಾಶಿ ಮಥುರಾ ಮಳಲಿಯ  ಮಂದಿರ-ಮಸೀದ್  ವಿವಾದ ಎಬ್ಬಿಸಲು ಯಾರಿಗೂ ಆಸ್ಪದವೇ ಸಿಗುತ್ತಿರಲಿಲ್ಲ. ಹುಬ್ಬಳಿಯ ಈದ್ಗಾ ಮತ್ತು ಚಿಕ್ಕಮಗಳೂರಿನ ಬಾಬಾಬುಡನ್ ದತ್ತಪೀಠ ವಿವಾದ ಎಬ್ಬಿಸಿ, ಗೋಸಾಗಾಣಿಕೆಯ ನೆಪದಲ್ಲಿ ಬ್ಯಾರಿಗಳನ್ನು ಬೆತ್ತಲೆ ಮಾಡಿ ಹೊಡೆದ ಪುಡಿರೌಡಿಗಳು  ರಾಜಕೀಯಕ್ಕೆ ಬಂದು ಕೊನೆಗೆ ಶಾಸಕ-ಮಂತ್ರಿ ಆಗಲು ಅವಕಾಶವೇ ಇರುತ್ತಿರಲಿಲ್ಲ. 

ಕೊರೊನಾ ಕಾಲದಲ್ಲಿ ಅವೈಜ್ಞಾನಿಕ ಲಾಕ್ ಡೌನ್ ಇರುತ್ತಿರಲಿಲ್ಲ, ವಾರಕ್ಕೊಮ್ಮೆ ತಟ್ಟೆ ಬಡಿದು, ಚಪ್ಪಾಳೆ ತಟ್ಟಿ ದೀಪ ಹಚ್ಚಿ, ಕಾರ್ಮಿಕರು ಬರಿಗಾಲಲ್ಲಿ ನೂರಾರು ಮೈಲಿ ನಡೆದು ಸಾಯುವ ಪರಿಸ್ಥಿತಿ ಬರುತ್ತಿರಲಿಲ್ಲ,  ಜನರ ಆಹಾರದ ಆಯ್ಕೆಯ ವಿಷಯವೂ  ರಾಜಕೀಯಕ್ಕೆ ಬರುತ್ತಿರಲಿಲ್ಲ. ಗುಜರಾತ್ ಫಾರ್ಮಾ ಕಂಪನಿಗಳ ಕಳಪೆ ರೆಂಡೆಸಿವಿರ್ ಔಷಧಿ ತಿಂದು ಭಾರತದಲ್ಲಿ 25 ಲಕ್ಷ ಜನರು ಕೋವಿಡ್ ನೆಪದಲ್ಲಿ ಸಾಯುತ್ತಿರಲಿಲ್ಲ, ಗೋಧ್ರಾದಲ್ಲಿ ರೈಲಿಗೆ ಬೆಂಕಿ ಬೀಳುತ್ತಲೇ ಇರಲಿಲ್ಲ,  ಅಪ್ಪಟ ಪ್ರಾಮಾಣಿಕ ಹರೇನ್ ಪಾಂಡ್ಯ ಮತ್ತು ಜಡ್ಜ್ ಲೋಯಾ ಈಗಲೂ ಬದುಕಿರುತ್ತಿದ್ದರು, ಗೌತಮ್ ಅಡಾಣಿ ಸ್ಕೂಟರ್ ಮೇಲೆ ಓಡಾಡುತ್ತಾ ಸಮಾರಂಭಗಳಿಗೆ ಶಾಮಿಯಾನಾ ಖುರ್ಚಿ ಸಪ್ಲೈ ಮಾಡುವ ಕಾಯಕದಲ್ಲಿಯೇ ಇನ್ನೂ ಇರುತ್ತಿದ್ದ,  ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಅರೆಸಾಕ್ಷರ ನಾಟಕಕಾರ ದೇಶದ ಚುಕ್ಕಾಣಿ ಹಿಡಿದು ಸರ್ವಾಧಿಕಾರಿಯಾಗಿ ದೇಶದ ಆರ್ಥಿಕತೆಯನ್ನು ಸಂಪೂರ್ಣ ಹಾಳುಗೆಡುವಲು ಆಗುತ್ತಲೇ ಇರಲಿಲ್ಲ.  ಸರ್ಜಿಕಲ್ ಸ್ಟ್ರೈಕ್, ದೇಶಭಕ್ತಿ, ದೇಶದ ರಕ್ಷಣೆಯ ಹೆಸರಲ್ಲಿ ಭಾರತೀಯ ಜನರನ್ನು ಮಂಗ ಮಾಡಲು ಆಗುತ್ತಿರಲಿಲ್ಲ.  ಪುಲ್ವಾಮ ದುರಂತ ‘ಮಾಡಿಸಿ’ ಚುನಾವಣೆ ಗೆಲ್ಲಲೂ ಆಗುತ್ತಿರಲಿಲ್ಲ.  ಯಾರಿಗೂ ಹೇಳದೇ ಕೇಳದೆ ನೋಟು ರದ್ದತಿ ಮಾಡಿದ್ದರೆ, ಜಿ‌ಎಸ್‌ಟಿ ಹೇರಿದ್ದರೆ,  ಹಿಂದೂ-ಮುಸ್ಲಿಮರು ಒಟ್ಟಿಗೆ ಸೇರಿ ಆ ದುಷ್ಟರನ್ನು ಗುಜರಾತಿಗೆ ಓಡಿಸುತ್ತಿದ್ದರು.  ಆಳುವ ಪಕ್ಷದವರಿಗೆ ಈಡಿ, ಸಿ‌ಬಿ‌ಐ, ಆದಾಯ ತೆರಿಗೆ ಇಲಾಖೆಗಳ ದುರುಪಯೋಗ ಮಾಡಲು ಆಗುತ್ತಿರಲಿಲ್ಲ, ಚುನಾವಣಾ ಬಾಂಡ್ ಮತ್ತು ಪಿಎಂ ಕೇರ್ ಫಂಡ್  ಗುಳುಂ ಮಾಡಲೂ ಆಗುತ್ತಿರಲಿಲ್ಲ.  ಒಟ್ಟಾರೆ ಭಾರತ ಅವಿಭಜಿತವಾಗಿದ್ದರೆ ಅವಿದ್ಯಾವಂತ ಠಕ್ಕ ರಾಜಕಾರಣಿಗಳಿಗೆ ಮತ್ತು ಕುತಂತ್ರಿ ಸಂಘಿಗಳಿಗೆ ದೇಶದ ಆಡಳಿತ ಕೈವಶ ಮಾಡಿಕೊಳ್ಳುವ ಅವಕಾಶವೇ ಇರುತ್ತಿರಲಿಲ್ಲ.

ಕೊರೋನಾ ಓಡಿಸಲು ತಟ್ಟೆ ಬಡಿಯುತ್ತಿರುವುದು

ಆದುದರಿಂದ ಅವಿಭಜಿತ ಭಾರತದ ಅಥವಾ ಅಖಂಡ ಭಾರತದ ಕನಸು ಕಾಣುವುದು ಸ್ವತಃ ಹಿಂದುತ್ವವಾದಿಗಳಿಗೇ ಹಿತವಲ್ಲ!  ಹಾಗಾಗಿ 1947 ರಲ್ಲಿ ಭಾರತ ವಿಭಜನೆಯಿಂದ ಕೇವಲ ಹಿಂದೂಗಳಿಗೆ ಭಾರಿ ಅನ್ಯಾಯವಾಗಿದೆ ಎಂದು ಸಂಘಿಗಳು ಹಲುಬುವುದರಲ್ಲಿ ಅರ್ಥವಿಲ್ಲ,  ಗಾಂಧೀಜಿ & ನೆಹರೂರವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವವರಿಗೆ ಆಗಿನ ನೈಜ ಪರಿಸ್ಥಿತಿಯ ಜ್ಞಾನವೇ ಇಲ್ಲ. ಆದುದರಿಂದ 1947 ರಲ್ಲಿ ನಮ್ಮ ದೇಶ ವಿಭಜನೆ ಆಗದೆ ಇದ್ದಿದ್ದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ,  ಈಗ 2024 ರಲ್ಲಿ ನಮ್ಮ ದೇಶದ ಒಟ್ಟು 190 ಕೋಟಿ ಪ್ರಜೆಗಳ ಮನಸ್ಥಿತಿ ಹೇಗೆ ಇರುತ್ತಿತ್ತು ಎಂಬ ವಿಷಯದ ಮೇಲೆ ಪ್ರಜ್ಞಾವಂತರು ತಮ್ಮ ಕಲ್ಪನೆ ಓಡಿಸಿ, ಊಹೆಯನ್ನು ಬಳಸಿ, ಪತ್ರಿಕೆಗಳ ಮೂಲಕ ಅಥವಾ ಸೋಷಿಯಲ್ ಮೀಡಿಯಾದ ಮುಖಾಂತರ  ಜಿಜ್ಞಾಸೆ ನಡೆಸಲಿ. ಇದು ತುಂಬಾ ಆಸಕ್ತಿದಾಯಕ ಚರ್ಚೆ ಆಗಬಹುದು ಹಾಗೂ ಪುನಃ ಅಖಂಡ ಭಾರತದ ರಚನೆ ಆಗಬೇಕು ಎಂದು ಹೇಳುವವರ ಕಣ್ಣು ತೆರೆಸಬಹುದು. 

ಪ್ರವೀಣ್ ಎಸ್ ಶೆಟ್ಟಿ.

ಚಿಂತಕರು

More articles

Latest article