ನುಡಿ ನಮನ |ಮಹತ್ವಾಕಾಂಕ್ಷಿ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್

Most read

ಅವಿಭಜಿತ ಮೈಸೂರು ಜಿಲ್ಲೆಯ ರಾಜಕೀಯ ನಾಯಕರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ರವರು ತಮ್ಮ 50 ವರ್ಷದ ರಾಜಕೀಯ ವೃತ್ತಿಗೆ ಮಾರ್ಚ್ 17 ರಂದು ನಿವೃತ್ತಿಯನ್ನು ಘೋಷಿಸಿದ್ದರು. ಸರಿಸುಮಾರು ಒಂದು ತಿಂಗಳ ನಂತರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದಾಗಿ ಹೃದಯಾಘಾತಕ್ಕೆ ಒಳಗಾಗಿ ಇಂದು ( 29-04-2024) ಈ ಲೋಕಕ್ಕೆ ವಿದಾಯ ಹೇಳಿದರು. ಅವರ ಅಗಲಿಕೆಗೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಾ ಅವರ ಬದುಕು ಮತ್ತು ಸಾಧನೆಯನ್ನು ನೆನಪಿಸಿಕೊಳ್ಳುವ ಪ್ರಯತ್ನವನ್ನು ರಾಜಕೀಯ ವಿಶ್ಲೇಷಕ ಶಶಿಕಾಂತ ಯಡಹಳ್ಳಿಯವರು ಮಾಡಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಹಾಲಿ ಸಂಸದರೂ ಆಗಿದ್ದ ಶ್ರೀನಿವಾಸ ಪ್ರಸಾದ್‌ ರವರ ರಾಜಕೀಯ ಪಯಣ ವಿಸ್ಮಯಕಾರಿಯಾಗಿತ್ತು. ಆರು ಸಲ ಚಾಮರಾಜನಗರ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ, ಎರಡು ಬಾರಿ ನಂಜನಗೂಡು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಶ್ರೀನಿವಾಸರವರು ತಮ್ಮ ಜನಪ್ರಿಯತೆಯನ್ನು ಐದು ದಶಕಗಳ ಕಾಲ ಉಳಿಸಿ ಬೆಳೆಸಿಕೊಂಡು ಬಂದವರು. ಮೈಸೂರು ಚಾಮರಾಜನಗರ ಭಾಗದ ಪ್ರಭಾವಿ ದಲಿತ ಮುಖಂಡರಾಗಿದ್ದ ಶ್ರೀನಿವಾಸರವರು ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗಲೆಲ್ಲ ರಾಜಕೀಯ ಪಕ್ಷಗಳನ್ನೇ ಬದಲಾಯಿಸುತ್ತಿದ್ದರು. ಕರ್ನಾಟಕದ ಎಲ್ಲಾ ಪ್ರಮುಖ ಪಕ್ಷಗಳಿಂದಲೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕಾಲಕಾಲಕ್ಕೆ ಪಕ್ಷಗಳನ್ನೂ ಬದಲಾಯಿಸಿದ್ದಾರೆ. ರಾಜಕೀಯ ಸೋಲು ಗೆಲುವುಗಳನ್ನು ಸಮನಾಗಿ ಅನುಭವಿಸಿದ್ದಾರೆ.

ಏಳು ಬೀಳಿನ ರಾಜಕೀಯ

ಶ್ರೀನಿವಾಸ ಪ್ರಸಾದ್‌ರವರ ರಾಜಕೀಯದ ಆರಂಭವೇ ಸೋಲಿನ ಸರಮಾಲೆಗಳಿಂದ ಕೂಡಿದ್ದಾಗಿತ್ತು. 1974 ರಲ್ಲಿ ಕೃಷ್ಣರಾಜ ಕ್ಷೇತ್ರದ ಉಪಚುನಾವಣೆಯಲ್ಲಿ ಅಣ್ಣಾ ಡಿಎಂಕೆ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದು ಹಿನ್ನಡೆ ಅನುಭವಿಸಿದರು. 1977 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಲೋಕದಳ ಪಕ್ಷದ ಉಮೇದುವಾರರಾಗಿ ಸ್ಪರ್ಧಿಸಿ ಸೋತರು. 1978 ರಲ್ಲಿ ಮತ್ತೆ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಮತ್ತೆ ಸೋಲನ್ನು ಕಂಡರು. ಬೇರೆ ಯಾರಾದರೂ ಆಗಿದ್ದರೆ ಈ ಸತತ ಸೋಲಿನಿಂದಾಗಿ ರಾಜಕೀಯವನ್ನೇ ಬಿಟ್ಟು ಹೋಗುತ್ತಿದ್ದರು. ಆದರೆ ಶ್ರೀನಿವಾಸರವರು ಛಲದಂಕ ಮಲ್ಲನಂತೆ ಮತ್ತೆ 1980 ರಲ್ಲಿ ಈ ಹಿಂದೆ ಸೋತಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲುವನ್ನು ಪಡೆದರು.

ಶ್ರೀನಿವಾಸ ಪ್ರಸಾದ್

ಅದರ ನಂತರ 1984, 1989 ಹಾಗೂ 1991 ಹೀಗೆ ಒಟ್ಟು ನಾಲ್ಕು ಅವಧಿಯಲ್ಲಿ ಸತತವಾಗಿ ಸಂಸದರಾಗಿ ಆಯ್ಕೆಯಾದರು. 1998 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ 1999 ರಲ್ಲಿ ನಡೆದ ಉಪಚುನಾವಣೆಯಲ್ಲಿ ಲೋಕಶಕ್ತಿ ಹಾಗೂ ಬಿಜೆಪಿ ಪಕ್ಷದ ಜಂಟಿ ಅಭ್ಯರ್ಥಿಯಾಗಿ ಮತ್ತೆ ಗೆಲುವನ್ನು ಸಾಧಿಸಿ ಕೇಂದ್ರ ಸಚಿವರಾಗಿ ನೇಮಕ ಗೊಂಡರು. ಬಳಿಕ ಪಾರ್ಲಿಮೆಂಟಿನಿಂದ ಅಸೆಂಬ್ಲಿಯತ್ತ ತಮ್ಮ ಚಿತ್ತ ಬದಲಾಯಿಸಿ 2008 ಮತ್ತು 2013 ರಲ್ಲಿ ನಂಜನಗೂಡು ವಿಧಾನಸಭೆಯ ಕ್ಷೇತ್ರದಿಂದ ಶಾಸಕರೂ ಆಗಿ ಆಯ್ಕೆಯಾದರು ಹಾಗೂ ಕಾಂಗ್ರೆಸ್ ಸರಕಾರದಲ್ಲಿ ಕಂದಾಯ ಸಚಿವರೂ ಆದರು. ರಾಜಕೀಯ ಕಾರಣಗಳಿಂದಾಗಿ 2016 ರಲ್ಲಿ ಸಿಎಂ ಸಿದ್ದರಾಮಯ್ಯನವರು ಸಂಪುಟದಿಂದ ಕೈಬಿಟ್ಟಿದ್ದರಿಂದ ಸಿಟ್ಟಿಗೆದ್ದ ಶ್ರೀನಿವಾಸ ಪ್ರಸಾದ್‌ ರವರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಯಿತೆಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು. 2017 ರಲ್ಲಿ  ನಡೆದ ನಂಜನಗೂಡು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಉಮೇದುವಾರರಾಗಿ ಸ್ಪರ್ಧಿಸಿ ಪರಾಭವ ಹೊಂದಿದರೂ ನಿರಾಶರಾಗದೇ 2019 ರಲ್ಲಿ ಮತ್ತೆ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವನ್ನು ದಾಖಲಿಸಿ ಸಂಸದರಾದರು.

ಅಂಬೇಡ್ಕರ್ ವಾದಿಯಾಗಿದ್ದ ದಲಿತ ನಾಯಕ ಶ್ರೀನಿವಾಸ ಪ್ರಸಾದ್‌ ರವರು ಬಿಜೆಪಿ ಪಕ್ಷವನ್ನು ಸೇರಿದ್ದು ಅಚ್ಚರಿಯ ಸಂಗತಿ ಏನಾಗಿರಲಿಲ್ಲ. ಯಾಕೆಂದರೆ ಶ್ರೀನಿವಾಸರವರು ಬಾಲ್ಯದಿಂದಲೂ 1972 ರ ವರೆಗೆ ಆರೆಸ್ಸೆಸ್ ಸಂಘದ ಸ್ವಯಂಸೇವಕರಾಗಿದ್ದವರು. ನಂತರ ಸಂಘದ ಅಂಗಗಳಾದ ಜನಸಂಘ ಮತ್ತು ಎಬಿವಿಪಿ ಯಲ್ಲಿ ಸಕ್ರಿಯರಾಗಿದ್ದವರು. ಬಿಜೆಪಿ ಸಿದ್ಧಾಂತಕ್ಕೆ ಹತ್ತಿರವಾಗಿದ್ದವರು.   ಸಿದ್ದರಾಮಯ್ಯನವರ ಮೇಲಿದ್ದ ಸಿಟ್ಟು ಹಾಗೂ ಸ್ವಾಭಿಮಾನಕ್ಕೆ ಬಿದ್ದ ಪೆಟ್ಟುಗಳು ಅವರನ್ನು ಮತ್ತೆ ಬಿಜೆಪಿ ಪಕ್ಷದತ್ತ ವಾಲುವಂತೆ ಮಾಡಿದ್ದವು. “ಇನ್ನು ಮುಂದೆ ಬಿಜೆಪಿ ಹಿಂದುತ್ವದ ಸಂಘಟನೆಯಲ್ಲ ಮತ್ತು ಅದರ ದೃಷ್ಟಿಕೋನ ಬದಲಾಗಿದೆ” ಎಂದು ಬಿಜೆಪಿ ಪಕ್ಷ ಸೇರಿದಾಗ ಪ್ರಸಾದ್‌ ರವರು ತಮ್ಮ ಪಕ್ಷಾಂತರಕ್ಕೆ ಸಮರ್ಥನೆಯನ್ನು ಕೊಟ್ಟಿದ್ದರು.

ಆದರೆ ಯಾವುದೇ ವ್ಯಕ್ತಿ ಶಕ್ತಿ, ಪಕ್ಷ, ಸಿದ್ಧಾಂತಗಳಿಗೆ ದೀರ್ಘಕಾಲ ಬದ್ಧತೆಯನ್ನು ತೋರದೆ ಸ್ವಾಭಿಮಾನದ ಹೆಸರಲ್ಲಿ ತಮ್ಮ ಚಿತ್ತ ಬಂದತ್ತ ವಾಲುತ್ತಾ 50 ವರ್ಷಗಳ ರಾಜಕೀಯ ಬದುಕನ್ನು ಪ್ರಸಾದ್‌ ರವರು ಕಳೆದರು. ರಾಜಕೀಯ ಮಹತ್ವಾಕಾಂಕ್ಷೆಯೊಂದೇ ಅವರ ಸಿದ್ಧಾಂತವಾಗಿತ್ತು.  ಮೈಸೂರು ಪ್ರಾಂತ್ಯದ ಜನರೂ ಸಹ ಪಕ್ಷ ಸಿದ್ಧಾಂತಗಳನ್ನು ನೋಡದೇ ವ್ಯಕ್ತಿಯನ್ನು ನೋಡಿ ಶ್ರೀನಿವಾಸ ಪ್ರಸಾದ್‌ ರವರನ್ನು ಬೆಂಬಲಿಸುತ್ತಲೇ ಬಂದರು. ಬಿಜೆಪಿ ಸೇರಿದ ನಂತರ ಪ್ರಸಾದ್‌ ರವರಿಗೆ ಒಂದಿಷ್ಟು ಭ್ರಮನಿರಸನವಾಯ್ತು. 2024 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅಳಿಯ ಡಾ.ಮೋಹನ್ ರವರಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸಲು ಪ್ರಯತ್ನಿಸಿದರು. ಅದನ್ನು ನಿರಾಕರಿಸಿದ ಬಿಜೆಪಿ ಹೈಕಮಾಂಡ್ ಬಾಲರಾಜುರವರಿಗೆ ಟಿಕೆಟ್ ನೀಡಿತ್ತು. ಇದರಿಂದಾಗಿ ಪ್ರಸಾದರವರು ತುಂಬಾ ನೊಂದು ಕೊಂಡರು. ಕೊನೆಗೆ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ತಮ್ಮ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದರು. ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮೋದಿಯವರು ಮೈಸೂರಿಗೆ ಬಂದಾಗಲೂ ಹೋಗದೆ ತಮ್ಮ ಅಸಮಾಧಾನವನ್ನು ತೋರಿದರು. ಆರೋಗ್ಯ ಆಯಸ್ಸು ಗಟ್ಟಿಯಾಗಿದ್ದರೆ ಮತ್ತೆ ಕಾಂಗ್ರೆಸ್ ಸೇರುತ್ತಿದ್ದರು. ಆದರೆ ಕೊನೆಗೂ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಕೊನೆಯುಸಿರೆಳೆದರು.

ಅನಾರೋಗ್ಯ ಎನ್ನುವುದು ಶ್ರೀನಿವಾಸರವರನ್ನು ಕಳೆದ ಒಂದು ದಶಕದಿಂದ ಬಿಡದೇ ಕಾಡುತ್ತಿತ್ತು. ಎಂಟು ವರ್ಷದ ಹಿಂದೆ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ ಹೊರದೇಶದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆಗಲೇ ರಾಜಕೀಯ ನಿವೃತ್ತಿ ಘೋಷಿಸಿದ್ದರೆ ಇನ್ನಷ್ಟು ಕಾಲ ಅವರು ಜೀವಂತವಾಗಿರುವ ಸಂಭವ ಇತ್ತು. ಆದರೆ ಅವರು ರಾಜಕೀಯವನ್ನು ಬಿಡಬೇಕೆಂದರೂ ರಾಜಕೀಯ ಅವರನ್ನು ಬಿಡಲಿಲ್ಲ. ಅನಾರೋಗ್ಯದ ನಡುವೆಯೇ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಿ 2019 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಮತ್ತೆ ಸಂಸದರಾಗಿ ಆಯ್ಕೆಯಾದರು. ರಾಜಕೀಯದ ಒತ್ತಡಗಳು ಹೆಚ್ಚಾದಂತೆಲ್ಲಾ ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಕೊನೆಗೆ ಸಾರ್ವಜನಿಕ ಜೀವನದಿಂದ ದೂರವೇ ಉಳಿದರಾದರೂ ಚಿಕಿತ್ಸೆಯ ನಡುವೆಯೇ ರಾಜಕೀಯವನ್ನೂ ನಿಭಾಯಿಸುವ ಕೆಲಸ ಮಾಡುತ್ತಾ ಹೋದರು. ದೇಹ ಮತ್ತು ಮನಸ್ಸು ಯಾವುದೇ ಕೆಲಸಗಳಿಗೆ ಸ್ಪಂದಿಸದೇ ಹೋದವು. ದೇಹ ಬಸವಳಿದಿತ್ತು, ಮನಸ್ಸು ವಿಶ್ರಾಂತಿ ಬಯಸಿತ್ತು. ಕೊನೆಗೂ ಎಪ್ರಿಲ್ 29 ರಂದು ಪ್ರಸಾದ್‌ ರವರು ಚಿರನಿದ್ರೆಗೆ ಜಾರಿದರು. ಅವರ ಕುಟುಂಬ ಪರಿವಾರ ಹಾಗೂ ಹಿಂಬಾಲಕರಿಗೆ ಬೇಸರವಾದರೂ ಅಪಾರ ಪ್ರಮಾಣದ ಅಭಿಮಾನಿಗಳ ಎದೆಯಲ್ಲಿ ಬಹುಕಾಲ ನೆನಪಾಗಿ ಬದುಕುವ ಅರ್ಹತೆ ಪಡೆದರು.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಉತ್ತರ ಕನ್ನಡ ಜಿಲ್ಲೆಯ ನಕಲಿ ಹಿಂದುತ್ವಕ್ಕೆ ಹಿನ್ನಡೆಯಾದೀತೆ???

More articles

Latest article