ಮೆಕ್ಯಾನಿಕ್ ಗಳನ್ನು ಕೊಚ್ಚೆ ಎಂದ ಜೀ ವಾಹಿನಿ ವಿರುದ್ಧ ಮತ್ತಷ್ಟು ಠಾಣೆಗಳಲ್ಲಿ ದೂರು ದಾಖಲು

Most read

ಬೆಂಗಳೂರು: ಮೆಕ್ಯಾನಿಕ್‌ ವೃತ್ತಿ ಮಾಡುವ ಶ್ರಮಿಕ ವರ್ಗವನ್ನು ಕೀಳಾಗಿ ನಿಂದಿಸಿ, ಅಪಮಾನಿಸಿರುವ ʻಮಹಾನಟಿʼ ಎಂಬ ರಿಯಾಲಿಟಿ ಶೋ ನಡೆಸುವ ಜೀ ವಾಹಿನಿ ಮತ್ತು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟ, ನಟಿಯರ ವಿರುದ್ಧ ಆಕ್ರೋಶಗೊಂಡಿರುವ ಮೆಕ್ಯಾನಿಕ್ ವೃತ್ತಿ ನಡೆಸುವವರು ರಾಜ್ಯದ ಹಲವು ಪೊಲೀಸ್ ಠಾಣೆಯಲ್ಲಿ ನಿನ್ನೆ ಸಹಾ ದೂರು ದಾಖಲಿಸಿದ್ದಾರೆ.

ಶನಿವಾರ ರಾಜ್ಯದ ಹಲವಾರು ಠಾಣೆಗಳಲ್ಲಿ ದೂರು ದಾಖಲಾಗಿತ್ತು. ನಿನ್ನೆ ಶಿಗ್ಗಾವಿ, ಕಲ್ಬುರ್ಗಿ ಮತ್ತು ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.

ಜೀ ವಾಹಿನಿಯಲ್ಲಿ ಬರುವ ಮಹಾನಟಿ ಎಂಬ ರಿಯಾಲಿಟಿ ಶೋನ ಒಂದು ಕಾರ್ಯಕ್ರಮದಲ್ಲಿ ಮೆಕ್ಯಾನಿಕ್‌ ವೃತ್ತಿ ಮಾಡುವ ಶ್ರಮಿಕ ವರ್ಗದ ಜನರನ್ನು ತೀರಾ ಕೆಟ್ಟದಾಗಿ ಅಪಮಾನಿಸಲಾಗಿದೆ. ಈ ಕಾರ್ಯಕ್ರಮವನ್ನು ರಾಜ್ಯದ ಕೋಟ್ಯಂತರ ಜನರು ನೋಡುತ್ತಾರಾದ್ದರಿಂದ ನಮಗೆ ಆಗಿರುವ ಅವಮಾನಕ್ಕೆ ಎಣೆಯೇ ಇಲ್ಲದಂತಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕಾರ್ಯಕ್ರಮದ ಒಂದು ಎಪಿಸೋಡ್‌ ನಲ್ಲಿ, ಕಾರ್ಯಕ್ರಮದ ಜಡ್ಜ್‌ ಆಗಿರುವ ನಟ ರಮೇಶ್‌ ಅರವಿಂದ್‌ ಅವರು ಸ್ಪರ್ಧಿಯೊಬ್ಬರಿಗೆ ಟಾಸ್ಕ್‌ ನೀಡುತ್ತಾರೆ. ನಿಮ್ಮ ತಂಗಿ ಒಬ್ಬ ಮೆಕ್ಯಾನಿಕ್‌ ಜೊತೆ ಓಡಾಡುವುದನ್ನು ನೀವು ನೋಡುತ್ತೀರಿ. ನಿಮ್ಮ ತಂಗಿ ಮನೆಗೆ ಬಂದಾಗ ಏನು ಹೇಳುತ್ತೀರಿ ಎಂದು ಅವರು ಪ್ರಶ್ನಿಸಿ, ಅಭಿನಯಿಸಲು ಹೇಳುತ್ತಾರೆ. ಈ ಸಂದರ್ಭದಲ್ಲಿ ಸ್ಪರ್ಧಿ ಹೇಳುವ ಮಾತುಗಳು ಮೆಕಾನಿಕ್‌ ಸಮುದಾಯಕ್ಕೆ ಅಪಮಾನಕಾರಿಯಾಗಿರುತ್ತದೆ. ʻನೋಡು ಐಶು, ನೀನು ಅವನ ಜೊತೆ ಬೈಕಲ್ಲಿ ಸುತ್ತಾಡೋದನ್ನು ನಾನು ನೋಡಿದೆ. ಬಿದ್ರೆ ಯಾವಾಗ್ಲೂ, ತುಪ್ಪದ ಕೊಳದಲ್ಲಿ ಬೀಳಬೇಕೇ ಹೊರತು ಕೊಚ್ಚೆಯ ಕೊಳೆಯಲ್ಲಿ ಬೀಳಬಾರದು. ಇದನ್ನ ನೆನಪಿಟ್ಕೋ. ಲೈಫು ನೀನು ಅಂದುಕೊಂಡಷ್ಟು ಈಜಿಯಾಗಿರೋದಿಲ್ಲ. ದುಡ್ಡು ಇಂಪಾರ್ಟೆಂಟ್‌ ಅಲ್ಲ, ಪ್ರೀತಿನೇ ಇಂಪಾರ್ಟೆಂಟ್‌ ಅಂತ ನೀನು ಅಂದುಕೊಂಡಿರಬಹುದು. ಆದರೆ ದುಡ್ಡು ಯಾವಾಗಲೂ ಬೇಕು. ಪ್ರೀತಿ ಮಾಡ್ಕೊಂಡೇ ಗ್ರೀಸ್‌ ತಿಂದುಕೊಂಡು ಇರುತ್ತೀನಿ ಅಂದ್ರ ಆಗಲ್ಲ. ನೀನು ಮೆಕಾನಿಕ್‌ ಜೊತೆನೇ ಹೋಗಿ ಅವನ ಜೊತೆ ಗ್ರೀಸ್‌ ತಿಂದುಕೊಂಡು ಇರುತ್ತೀನಿ ಅಂದ್ರೆ ತಪ್ಪಾಗುತ್ತೆʼʼʼ ಎಂದು ಆಕೆ ಹೇಳುತ್ತಾರೆ.

ಸ್ಪರ್ಧಿ ಇಷ್ಟು ಕೆಟ್ಟದಾಗಿ ಒಂದು ದೊಡ್ಡ ಶ್ರಮಿಕ ವರ್ಗದ ಬಗ್ಗೆ ಮಾತನಾಡುತ್ತಿದ್ದರೂ ಜಡ್ಜ್‌ ಗಳಾದ ರಮೇಶ್‌ ಅರವಿಂದ್, ನಟಿ ಪ್ರೇಮ, ಆಂಕರ್‌ ಅನುಶ್ರೀ ಮತ್ತು ಅತಿಥಿಗಳಾಗಿ ಪಾಲ್ಗೊಂಡಿದ್ದ ನಟ ನಟಿಯರು ಹೀಗೆ ಮಾತಾಡುವುದು ತಪ್ಪು ಎಂದು ಹೇಳುವ ಬದಲಾಗಿ, ಆಕೆಯ ಮಾತುಗಳಿಗೆ ಚಪ್ಪಾಳೆ ಹೊಡೆದು, ಪ್ರೋತ್ಸಾಹಿಸುತ್ತಾರೆ.

ಮೆಕ್ಯಾನಿಕ್‌ ವೃತ್ತಿಯೂ ಸಹ ಎಲ್ಲ ವೃತ್ತಿಗಳ ಹಾಗೆಯೇ ಗೌರವಾನ್ವಿತ ವೃತ್ತಿ. ಇಂಜಿನಿಯರ್‌, ಡಾಕ್ಟರ್‌, ಬಿಜಿನೆಸ್‌ ಮ್ಯಾನ್‌, ಪೊಲೀಸ್‌, ಮಿಲಿಟರಿಯಿಂದ ಹಿಡಿದು ಚಪ್ಪಲಿ ಹೊಲೆಯುವ ಕಾಯಕದವರೆಗೆ ಎಲ್ಲ ವೃತ್ತಿಗಳೂ ಶ್ರೇಷ್ಠ ವೃತ್ತಿಗಳೇ ಆಗಿವೆ. ಯಾವ ವೃತ್ತಿಯೂ ಕನಿಷ್ಠವಲ್ಲ. ಯಾವ ವೃತ್ತಿ ಮಾಡುವವನೂ ಕೊಚ್ಚೆ ಅಲ್ಲ. ಇದು ಈ ಮಹಾನಟ ನಟಿಯರಿಗೆ ಅರ್ಥವಾಗದೇ ಇರುವುದು ಆಶ್ಚರ್ಯಕರವಾಗಿದೆ.

ಮಹಾನಟಿ ರಿಯಾಲಿಟಿ ಶೋನಲ್ಲಿ ಮೆಕಾನಿಕ್‌ ಕೆಲಸ ಮಾಡುವವರು ಕೊಚ್ಚೆ ಎಂದು ನಿಂದಿಸಲಾಗಿದೆ. ಮೆಕಾನಿಕ್‌ ಮನೆಯವರು ಗ್ರೀಸ್‌ ತಿಂದು ಬದುಕುತ್ತಾರೆ ಎಂದು ಬಿಂಬಿಸಲಾಗಿದೆ. ಈ ಕಾರ್ಯಕ್ರಮ ಅತ್ಯಂತ ಜನಪ್ರಿಯ ಕಾರ್ಯಕ್ರಮವೂ ಆಗಿರುವುದರಿಂದ, ನಮ್ಮ ಬಗ್ಗೆ ಇಷ್ಟು ಕೊಳಕಾಗಿ ನಿಂದಿಸಿರುವುದರಿಂದ ನಾವುಗಳು ತಲೆ ಎತ್ತಿಕೊಂಡು ಓಡಾಡದಂತಾಗಿದೆ. ಇದೇ ಮಾತುಗಳನ್ನು ವೈದ್ಯ, ಪೊಲೀಸ್‌, ವಕೀಲ, ಪತ್ರಕರ್ತ, ಚಿತ್ರನಟ ಅಥವಾ ಇನ್ಯಾವುದೇ ವೃತ್ತಿ ನಡೆಸುವ ಸಮುದಾಯದ ವಿರುದ್ಧ ಮಾತನಾಡಿದ್ದರೆ ಅವರು ಸುಮ್ಮನೆ ಇರುತ್ತಿದ್ದರೆ?

ಒಂದು ಶ್ರಮಿಕ ಸಮುದಾಯವನ್ನು ಕೊಚ್ಚೆ, ಗ್ರೀಸ್‌ ತಿಂದು ಬದುಕುವವರು ಎಂದು ನಿಂದಿಸಿರುವ ಈ ಕಾರ್ಯಕ್ರಮ ನಡೆಸಿಕೊಡುವ ವಾಹಿನಿ ಮುಖ್ಯಸ್ಥರು, ಜಡ್ಜ್‌ ಗಳಾದ ರಮೇಶ್‌ ಅರವಿಂದ್‌ ಮತ್ತು ಪ್ರೇಮ, ಆಂಕರ್‌ ಅನುಶ್ರೀ, ಸ್ಪರ್ಧಿ ಇವರುಗಳ ಮೇಲೆ ಸಮುದಾಯಗಳ ನಡುವೆ ದ್ವೇಷ ಹರಡುವ, ಸಮಾಜದಲ್ಲಿ ಅಶಾಂತಿ ಹರಡುವ, ಒಂದಿಡೀ ಶ್ರಮಿಕ ಸಮುದಾಯವನ್ನು ಕೊಚ್ಚೆ ಎಂದು ನಿಂದಿಸಿ ಅವರ ಆತ್ಮಗೌರವಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ದೂರು ಸಲ್ಲಿಸಲಾಗಿದೆ‌‌.

More articles

Latest article