ಬೆಂಗಳೂರು: ಲೈಂಗಿಕ ಹಗರಣ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡುವವರ ಗೌಪ್ಯತೆ ಕಾಪಾಡಲಾಗುವುದು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಹೇಳಿದ್ದಾರೆ.
ಒಬ್ಬ ಸಂತ್ರಸ್ತೆ ಬಂದು ದೂರು ದಾಖಲು ಮಾಡಿದ್ದಾರೆ. ಲೈಂಗಿಕ ದೌರ್ಜನ್ಯ ಮತ್ತು ಬೆದರಿಕೆ ಹಾಕಿದ್ದಾರೆ ಅಂತ ದೂರು ಕೊಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಅವರ ಮೇಲೆ ದೂರು ದಾಖಲಿಸಿದ್ದಾರೆ. ಎಸ್ಐಟಿ ಗೆ ಎಲ್ಲ ದಾಖಲೆಗಳನ್ನು ನಾವು ನೀಡುತ್ತೇವೆ. ಯಾರೇ ಬಂದು ದೂರು ಕೊಟ್ಟರು ಅವರ ಬಗ್ಗೆ ಗೌಪ್ಯತೆ ಕಾಪಾಡುತ್ತೇವೆ. ಸರ್ಕಾರ ಈಗಾಗಲೇ ಅವರಿಗೆ ರಕ್ಷಣೆ ಕೊಡುವುದಾಗಿ ತಿಳಿಸಿದೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರು ಕೂಡ ಆ ವಿಡಿಯೋಗಳನ್ನು ವೈರಲ್ ಮಾಡುವ ಕೆಲಸ ಮಾಡಬಾರದು. ಸಂತ್ರಸ್ತ ಮಹಿಳೆಯರು ಧೈರ್ಯದಿಂದ ಬಂದು ದೂರು ದಾಖಲು ಮಾಡಬೇಕು. ಯಾರೇ ಬಂದು ದೂರು ದಾಖಲು ಮಾಡಿದ್ರು ನಾವು ನಿಮ್ಮ ಗೌಪ್ಯತೆ ಕಾಪಾಡುತ್ತೇವೆ ಎಂದು ಅವರು ಹೇಳಿದ್ದಾರೆ
ಈ ನಡುವೆ ಮಹಿಳಾ ಕಾಂಗ್ರೆಸ್ ಮುಖಂಡರು ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಹಾಸನ ಸಂಸದ ಪ್ರಜ್ವಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ನಿಯೋಗ ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಪದ್ಮಾವತಿ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಮಾತನಾಡಿದ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿದ್ದು, ಆರೋಪಿಯನ್ನು ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ. ಈ ಕೂಡಲೇ ಬಂಧನ ಮಾಡಲು ಮನವಿ ಮಾಡುತ್ತಿದ್ದೇವೆ. ಸಂತ್ರಸ್ಥರನ್ನ ಹೆದರಿಸಿ ಬೆದರಿಸಿ ದೂರು ಕೊಡದೆ ಇರುವ ರೀತಿ ಮಾಡುತ್ತಿದ್ದಾರೆ. ಮಹಿಳೆಯರಿಗೆ ರಕ್ಷಣೆ ಕೊಡುವಂತಹ ಕೆಲಸ ಮಾಡಬೇಕಿದೆ. ಇಡೀ ಮನುಕುಲವೆ ಸಂತ್ರಸ್ಥೆಯರ ಪರವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಪ್ರಜ್ವಲ್ ರೇವಣ್ಣ ಒಬ್ಬರು ಸಂಸದರಾಗಿ ಕೆಲಸ ಮಾಡುತ್ತಿದ್ದವರು. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಕೇಂದ್ರ ಬಿಜೆಪಿಯವರು ಅತ್ಯಾಚಾರಿಗಳ ಪರವಾಗಿ ಅವರಿಗೆ ರಕ್ಷಣೆ ಮಾಡುವಂತಹ ಕೆಲಸ ಮಾಡುತ್ತಿದೆ. ನಾನು ಸಂತ್ರಸ್ಥೆಯನ್ನು ಭೇಟಿ ಮಾಡಿಲ್ಲ, ಅವರು ದೂರು ನೀಡಿದ್ದಾರೆ. ಇದೀಗ ಅವರನ್ನು ಬಂಧಿಸಬೇಕು. ಇಲ್ಲವಾದಲ್ಲಿ ರಾಜ್ಯದ ಎಲ್ಲಾ ಘಟಕದ ಮಹಿಳೆಯರಿಂದ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದ್ದಾರೆ.