ರಾಜರಾಜೇಶ್ವರಿ ನಗರ: ಚೊಂಬಿನ ಚಿತ್ರವಿರುವ ಟೀ ಶರ್ಟ್‌ ಹಾಕಿಕೊಂಡು ಗಮನ ಸೆಳೆದ ಕೆಪಿಸಿಸಿ ಸೋಷಿಯಲ್‌ ಮೀಡಿಯಾ ತಂಡ

Most read

ಬೆಂಗಳೂರು: ಸದಾ ಒಂದಿಲ್ಲ ಒಂದು ಕ್ರಿಯೇಟಿವ್‌ ಯೋಚನೆಯೊಂದಿಗೆ ಭಾರತೀಯ ಜನತಾ ಪಕ್ಷಕ್ಕೆ ಚಳ್ಳೆಹಣ್ಣು ತಿನ್ನಿಸುವ ಕೆಪಿಸಿಸಿ ಸೋಷಿಯಲ್ ಮೀಡಿಯಾ ತಂಡ, ಮತದಾನದ ದಿನವೂ ವಿಭಿನ್ನ ರೀತಿಯ ಅಭಿಯಾನ ನಡೆಸಿ ಗಮನ ಸೆಳೆಯಿತು.

ಕಾಂಗ್ರೆಸ್‌ ಪಕ್ಷ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು ಖಾಲಿ ಚೊಂಬು ಎಂದು ಹೇಳುವ ಜಾಹೀರಾತು ನೀಡಿದ್ದ ದಿನದಿಂದಲೇ ಎಲ್ಲ ಕಡೆ ಖಾಲಿ ಚೊಂಬುಗಳ ಮಾತು ಕೇಳಿಬರುತ್ತಿದೆ. ಇದೀಗ ಕಾಂಗ್ರೆಸ್‌ ಕಾರ್ಯಕರ್ತರು ಖಾಲಿ ಚೊಂಬು ಇರುವ ಟೀ ಶರ್ಟ್‌ ಧರಿಸಿ ಭಾರತೀಯ ಜನತಾ ಪಕ್ಷವನ್ನು ಲೇವಡಿ ಮಾಡಿದರು.

ಓರ್ವ ಕಾರ್ಯಕರ್ತ ʻಇದು 15 ಲಕ್ಷದ ಟೀ ಶರ್ಟ್‌ , ನೊ ಜಿಎಸ್‌ ಟಿʼ ಎಂದು ಬರೆದ ಟೀ ಶರ್ಟ್‌ ಧರಿಸಿ ಗಮನ ಸೆಳೆದರೆ, ಮತ್ತೆ ಕೆಲವು ಕಾರ್ಯಕರ್ತರು ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳನ್ನು ಹೇಳುವ ಟೀ ಶರ್ಟ್‌ ಗಳನ್ನು ಧರಿಸಿ ಓಡಾಡಿದರು.

ರಾಜರಾಜೇಶ್ವರಿ ನಗರ ಕ್ಷೇತ್ರದ ಲಗ್ಗೆರೆ ವಾರ್ಡ್‌ ನ ಬೂತ್‌ ನಂಬರ್‌ 194, 195ರಲ್ಲಿ ಕೆಪಿಸಿಸಿ ಸೋಷಿಯಲ್‌ ಮೀಡಿಯಾ ತಂಡ ಈ ವಿಶೇಷ ಅಭಿಯಾನ ಹಮ್ಮಿಕೊಂಡಿತ್ತು. ಮತ ಚಲಾಯಿಸಲು ಬಂದ ಮತದಾರರು ಕುತೂಹಲದಿಂದ ಟೀ ಶರ್ಟ್‌ ಗಳಲ್ಲಿ ಬರೆದಿದ್ದನ್ನು ಓದಿದ್ದು ವಿಶೇಷವಾಗಿತ್ತು. ಕೆಲವು ಮತದಾರರು ಈ ಕ್ರಿಯೇಟಿವ್‌ ಪ್ರಚಾರವನ್ನು ಶ್ಲಾಘಿಸಿದ್ದೂ ಕೂಡ ನಡೆಯಿತು.

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು ಖಾಲಿ ಚೊಂಬು ಎಂದು ಸಾರುವ ವಿಭಿನ್ನ ರೀತಿಯ ಜಾಹೀರಾತನ್ನು ಕಾಂಗ್ರೆಸ್‌ ಪಕ್ಷ ಎಲ್ಲ ದಿನಪತ್ರಿಕೆಗಳಲ್ಲಿ ನೀಡಿದ್ದು, ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಇದಾದ ನಂತರ ಈ ಜಾಹೀರಾತನ್ನೇ ಹೋಲುವ ಅನೇಕ ಜಾಹೀರಾತುಗಳನ್ನು ನೀಡಿದರೂ ಸಹ ಅದು ಚೊಂಬಿನ ಜಾಹೀರಾತಿನಷ್ಟು ಪರಿಣಾಮಕಾರಿಯಾಗಿರಲಿಲ್ಲ.

More articles

Latest article