ಸೋಲಿನ ಭಯದಿಂದ ಹೋದಲ್ಲೆಲ್ಲಾ ಮೋದಿಯಿಂದ ದ್ವೇಷದ ಭಾಷಣ: ಸುರ್ಜೆವಾಲಾ

Most read

ಬೆಳಗಾವಿ: ಬಿಜೆಪಿ ಈ ದೇಶದ ಹೊಸ ಈಸ್ಟ್ ಇಂಡಿಯಾ ಕಂಪನಿ ಆಗಿದೆ. ಬ್ರಿಟಿಷರಂತೆ ಮೋದಿಯವರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಟೀಕಿಸಿದರು.

ಅವರು ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಇಂದು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮೋದಿಯವರು ಜಾತಿ, ಧರ್ಮದ ರಾಜಕೀಯ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮೋದಿ, ಅಮಿತ್ ಶಾ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದ್ದಕ್ಕಾಗಿ ದ್ವೇಷದ ರೂಪದಲ್ಲಿ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಕರ್ನಾಟಕದ ತೆರಿಗೆ ಪಾಲನ್ನು ನೀಡದೆ ಇಲ್ಲಿನ ಜನತೆಯ ಹಕ್ಕು ಕಸಿದುಕೊಳ್ಳುತ್ತಿದ್ದಾರೆ. ಇಡೀ ದೇಶದಲ್ಲಿ ಹಿಂದೂ ಮುಸ್ಲಿಂ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ದಿವಾಳಿತನ ಬಿಜೆಪಿಯಲ್ಲಿ ಕಾಣುತ್ತಿದೆ. ಕರ್ನಾಟಕದಲ್ಲಿ ದ್ವೇಷದ, ಪ್ರತೀಕಾರದ ಮನೋಭಾವನೆ ಮೋದಿ ಹೃದಯದಲ್ಲಿದೆ. ಕರ್ನಾಟಕದಲ್ಲಿ ಬರಗಾಲವಿದ್ದರೂ ಕೇಂದ್ರ ಪರಿಹಾರ ಕೊಡಲಿಲ್ಲ. ನಮ್ಮ ಮೂವರು ಮಂತ್ರಿಗಳ ಭೇಟಿ ಗೆ ಅಮಿತ್ ಶಾ ನಿರಾಕರಿಸಿದರು ಎಂದು ಕೇಂದ್ರ ಸರಕಾರ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

18 ಸಾವಿರ ಕೋಟಿ ರೂ. NDRF ಪರಿಹಾರ ಕೇಳಿದರೂ 30 ದಿನಗಳಲ್ಲಿ ರೈತ ಬಂಧುಗಳಿಗೆ ಬರ ಪರಿಹಾರಕೊಡಲಿಲ್ಲ. ಅಮಿತ್ ಶಾ ಉದ್ದೇಶಪೂರ್ವಕವಾಗಿ ಆ ಸಭೆ ನಡೆಸಲಿಲ್ಲ. ಕೇಂದ್ರ ಸರ್ಕಾರ ಕರ್ನಾಟಕ ಬಗ್ಗೆ ಬೇಧ ಭಾವ ಮಾಡುತ್ತಿದೆ. ‘ಮೋದಿಯವರೇ ಕರ್ನಾಟಕ ಭೀಕ್ಷೆ ಕೇಳುತ್ತಿಲ್ಲ’. ಬರ ಪರಿಹಾರ ಕರ್ನಾಟಕದ ರೈತರ ಹಕ್ಕು, ಅಧಿಕಾರವಾಗಿದೆ. ಕರ್ನಾಟಕದಲ್ಲಿ ಅಭಿವೃದ್ಧಿಗೆ ಕೇಳಿದ 58 ಸಾವಿರ ಕೋಟಿ ಹಣವನ್ನೂ ಕೊಡಲಿಲ್ಲ. 6 ಸಾವಿರ ಕೋಟಿ ಭದ್ರಾ ಡ್ಯಾಮ್ ಹಣ ಈವರೆಗೂ ಕೇಂದ್ರ ಕೊಟ್ಟಿಲ್ಲ. ನಮ್ಮ ಮಂತ್ರಿಮಂಡಲ ಮೋದಿಯವರ ಬಳಿ ಹೋದ್ರು ಬಿಡಿಗಾಸು ಕೊಡಲಿಲ್ಲ. ಕರ್ನಾಟಕ ಸರ್ಕಾರ, ಜನತೆ ಮೇಕೆದಾಟು ಯೋಜನೆಗೂ ಅನುಮತಿ ಕೊಡುತ್ತಿಲ್ಲ. ಮಹದಾಯಿ ಕಳಸಾ ಬಂಡೂರಿ ಯೋಜನೆಗೂ ಪರಿಸರ ಇಲಾಖೆಯಿಂದ ಅನುಮತಿ ಕೊಡುತ್ತಿಲ್ಲ.

ಕರ್ನಾಟಕದ ಜನತೆಗೆ ಇಷ್ಟೆಲ್ಲ ಅನ್ಯಾಯ ಮಾಡಿದ ಮೋದಿ, ಅಮಿತ್ ಶಾ ಅವರೇ ಕರ್ನಾಟಕದ ನೆಲಕ್ಕೆ ಬರಬೇಡಿ. ಮೋದಿ, ಶಾ ಇಲ್ಲಿ ಬಂದು ಶಾಂತಿಯ ತೋಟವಾಗಿರುವ ಕರ್ನಾಟಕವನ್ನು ಒಡೆದಾಳುವ ನೀತಿ ಅನುಸರಿಸಬೇಡಿ. ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟಿರುವ ಖಾಲಿ ಚೊಂಬಿಗೆ ಚುನಾವಣೆಯಲ್ಲಿ ಇಲ್ಲಿನ ಜನ ಉತ್ತರ ಕೊಡಬೇಕು ಎಂದ ಸುರ್ಜೇವಾಲಾ,  ಕರ್ನಾಟಕಕ್ಕೆ ಏನೂ ಕೊಡದೆ ಚೊಂಬನ್ನು ಅಕ್ಷಯಪಾತ್ರೆ ಎನ್ನಲಾಗದು. ರಾಜ್ಯದ ಜನರ ಬೇಡಿಕೆ ಈಡೇರಿಸಿ. ಆಗ ಅದನ್ನು ಅಕ್ಷಯ ಪಾತ್ರೆ ಎನ್ನುತ್ತೇವೆ ಎಂದರು.

ಮೋದಿಗೆ ಸೋಲಿನ ಭಯ ಬಂದಿದೆ. ಹೋದಲ್ಲೆಲ್ಲಾ ದ್ವೇಷದ ಭಾಷಣ ಮಾಡುತ್ತಾ ‌ದೇಶದ ಪ್ರಧಾನಮಂತ್ರಿ ತಮ್ಮ ಸ್ಥಾನ ಗೌರವ ಹಾಳು ಮಾಡಿಕೊಳ್ಳುತ್ತಿದ್ದಾರೆ. 2014 ರಲ್ಲಿ ಮೋದಿಯವರು ವಿಷನ್ ಅನ್ನುತ್ತಿದ್ದರು. ಈಗ ಮೋದಿಯವರು ಟೆಲಿವಿಷನ್ ಎನ್ನುತ್ತಿದ್ದಾರೆ. ದೇಶದ ಪ್ರಧಾನಮಂತ್ರಿ ವೈಚಾರಿಕ ದಿವಾಳಿ ಆಗಿದ್ದಾರೆ. ಮೋದಿಜೀ ಜೇಬಿನಲ್ಲಿ ಚುನಾವಣೆ ಆಯೋಗವಿದೆ ಎಂದು ಸುರ್ಜೇವಾಲ ಕಿಡಿಕಾರಿದ್ದಾರೆ.

ಈ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಲಕ್ಷ್ಮಣ ಸವದಿ, ಗಣೇಶ ಹುಕ್ಕೇರಿ, ಆಸೀಫ್ ಸೇಠ್, ಅಶೋಕ ಪಟ್ಟಣ, ಮಹಾಂತೇಶ ಕೌಜಲಗಿ, ಚನ್ನರಾಜ್ ಹಟ್ಟಿಹೊಳಿ ಪಾಲ್ಗೊಂಡಿದ್ದರು.

More articles

Latest article