ಜನರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಗರಿಂದ ಗ್ಯಾರಂಟಿ ಯೋಜನೆಗಳ ಟೀಕೆ : ಸಚಿವ ಪ್ರಿಯಾಂಕ್ ಖರ್ಗೆ

Most read

ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿರುವ ಬಿಜೆಪಿ ನಾಯಕರು ಬಡವರ ಬಗ್ಗೆ ಕನಿಷ್ಠ ಕಾಳಜಿಯೂ ಹೊಂದಿಲ್ಲ. ರೈತರ, ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿಗಳ ಹಿತ ಕಾಪಾಡುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಭಾಗೋಡಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಮಾತನಾಡಿ, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿತ್ತು. ನಮ್ಮ ಸರ್ಕಾರ ಬಂದಾಗ ಬೇಡಿಕೆಯ ಅಕ್ಕಿ ಸರಬರಾಜು ಮಾಡಲು ಕೂಡಾ ನಿರಾಕರಿಸಿತ್ತು. ದುರಂತ ಎಂದರೆ ನಮಗೆ ಅಕ್ಕಿ ಕೊಡದ ಕೇಂದ್ರ ಸರ್ಕಾರ ವಿದೇಶಕ್ಕೆ ರಫ್ತು ಮಾಡಿತ್ತು ಎಂದು ಕೇಂದ್ರ ಸರ್ಕಾರದ ಧೋರಣೆಯನ್ನು ಜನರ ಮುಂದೆ ಬಿಚ್ಚಿಟ್ಟರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರು ನೆಮ್ಮದಿಯ ಜೀವನ ನಡೆಸುತ್ತಾರೆ. ಕಾರಣ ನಮ್ಮ ಜನಪರ ಯೋಜನೆಗಳು. ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸಬಲತೆಗೆ ಸಹಕಾರಿಯಾಗಿದೆ. ಶಕ್ತಿ ಯೋಜನೆಗಳಿಂದಾಗಿ ಮಹಿಳೆಯರು ದೇವಾಲಯಗಳಿಗೆ ಭೇಟಿ ಕೊಡುತ್ತಿದ್ದಾರೆ.ಇದರಿಂದ ದೇವಾಲಯಗಳ ಹುಂಡಿಗಳು ತುಂಬುತ್ತಿವೆ. ಇದನ್ನು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಪ್ರಶಂಸಿಸಿದ್ದಾರೆ.ಇದು ಬಿಜೆಪಿಗೆ ಸಹಿಸದಾಗಿದೆ ಎಂದರು.

ಕೋಲಿ, ಕಬ್ಬಲಿಗ ಹಾಗೂ ಕುರುಬ ಸಮುದಾಯವನ್ನು
ಎಸ್ ಟಿ ಸೇರಿಸುವುದಾಗಿ ಹೇಳಿದ ರವಿಕುಮಾರ್ ಎಲ್ಲಿ?

“ಕಳೆದ ಚುನಾವಣೆ ಸಂದರ್ಭದಲ್ಲಿ ಕೋಲಿ, ಕಬ್ಬಲಿಗ ಹಾಗೂ ಕುರುಬ ಸಮುದಾಯವನ್ನು ಎಸ್ ಟಿ ಸೇರಿಸುತ್ತೇವೆ, ಬೇಕಾದರೆ ರಕ್ತದಲ್ಲಿ ಬರೆದುಕೊಡುವಾಗಿ ಎಮ್ ಎಲ್ ಸಿ ರವಿಕುಮಾರ್ ಹೇಳಿ ಮತ ಪಡೆದುಕೊಂಡಿದ್ದ. ಅವನು ಈಗ ಎಲ್ಲಿದ್ದಾನೋ ಗೊತ್ತಿಲ್ಲ”
ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ಜನಪರ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ನೀವೆಲ್ಲರೂ ಕಾಂಗ್ರೆಸ್ ಗೆ ಮತ ಹಾಕಿ. ಖರ್ಗೆ ಸಾಹೇಬರು, ರಾಧಾಕೃಷ್ಣ ದೊಡ್ಡಮನಿ ಹಾಗೂ ನಾನು ಸೇರಿ ಚಿತ್ತಾಪುರ ಅಭಿವೃದ್ದಿ ಮಾಡುತ್ತೇವೆ. ನೀವು ಆಶೀರ್ವಾದ ಮಾಡಿದರೆ ಸಾವಿರಾರು ಕೋಟಿ ಅನುದಾನ ತರುತ್ತೇನೆ ಎಂದು ಭರವಸೆ ನೀಡಿ, ಬಿಜೆಪಿಯ ಉಮೇಶ್ ಜಾಧವ ಮತ ಕೇಳಲು ಬಂದಾಗ ಏನು ಸಾಧನೆ ಮಾಡಿದ್ದಾರೆ ಕೇಳಿ ಎಂದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಮಾತನಾಡಿ, ಕಾರ್ಯಕರ್ತರು ಏನೇ ಅಸಮಾಧಾನ ಇದ್ದರೂ ಮರೆತು ಒಗ್ಗಟ್ಟಾಗಿ ಕೂಡಿ ಪ್ರಚಾರ ಮಾಡಿ ಮತ ಹಾಕಿಸಬೇಕು ಎಂದರು.

More articles

Latest article