ಹೊಸದಿಲ್ಲಿ: ಪತಂಜಲಿ ಆಯುರ್ವೇದ ಸಂಸ್ಥೆಗೆ ಸಂಬಂಧಿಸಿದಂತೆ ದಾರಿ ತಪ್ಪಿಸುವ, ಆಧುನಿಕ ಔಷಧ ಪದ್ಧತಿಯನ್ನು ಟೀಕಿಸುವ ಜಾಹೀರಾತುಗಳನ್ನು ನೀಡಿದ್ದು ತಪ್ಪಾಗಿದೆ, ಕ್ಷಮಿಸಿ ಎಂದು ಸಂಸ್ಥೆಯ ಮುಖ್ಯಸ್ಥರಾದ ಬಾಬಾ ರಾಮದೇವ್, ಬಾಲಕೃಷ್ಣ ಬಹಿರಂಗ ಕ್ಷಮೆ ಕೋರಿದ್ದಾರೆ. ಕ್ಷಮೆ ಕೋರಿರುವ ಜಾಹೀರಾತುಗಳು ಇಂದು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ʻʻಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿರುವ ದಾವೆಯ ವಿಚಾರಣೆಯ ಹಿನ್ನೆಲೆಯಲ್ಲಿ ನಾವು ಸಂಸ್ಥೆಯ ಪರವಾಗಿ ಸರ್ವೇಚ್ಛ ನ್ಯಾಯಾಲಯದ ಆದೇಶಗಳನ್ನು ಪಾಲಿಸದೆ ಅವಿಧೇಯತೆ ತೋರಿದ್ದಕ್ಕಾಗಿ ಕ್ಷಮೆ ಯಾಚಿಸುತ್ತೇವೆ. ದಿನಾಂಕ 22-11-2023ರಂದು ನಾವು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡ ವಿಷಯಗಳಿಗಾಗಿ ಕ್ಷಮೆ ಯಾಚಿಸುತ್ತೇವೆ. ಸಂಸ್ಥೆಯ ಜಾಹೀರಾತುಗಳನ್ನು ಪ್ರಕಟಿಸುವಾಗ ನಾವು ಮಾಡಿರುವ ತಪ್ಪುಗಳಿಗಾಗಿ ಹೃದಯಪೂರ್ವಕವಾಗಿ ಕ್ಷಮೆ ಕೋರುತ್ತೇವೆ ಮಾತ್ರವಲ್ಲ ಮುಂದೆ ಎಂದೂ ಹೀಗಾಗದಂತೆ ನೋಡಿಕೊಳ್ಳುತ್ತೇವೆ. ಘನ ನ್ಯಾಯಾಲಯ ಮತ್ತು ಸಂಬಂಧಪಟ್ಟ ಪ್ರಾಧಿಕಾರಿಗಳು ನೀಡುವ ಆದೇಶಗಳು, ಈ ಸಂಬಂಧ ಇರುವ ಎಲ್ಲ ಕಾನೂನುಗಳನ್ನು ಪರಿಪಾಲನೆ ಮಾಡುತ್ತೇವೆ ಎಂದು ಘನ ನ್ಯಾಯಾಲಯಕ್ಕೆ ಪ್ರಮಾಣ ಮಾಡಿ ಹೇಳುತ್ತೇವೆ.ʼʼ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.
ಈ ಹಿಂದೆಯೂ ಪತಂಜಲಿ ಸಂಸ್ಥೆ ಕ್ಷಮೆ ಯಾಚಿಸುವ ಜಾಹೀರಾತು ನೀಡಿದ್ದರೂ, ಕಂಡರೂ ಕಾಣದಷ್ಟು ಚಿಕ್ಕದಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಕಳೆದ ಮಂಗಳವಾರ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಜಾಹೀರಾತುಗಳ ಬಗ್ಗೆ ಪ್ರಶ್ನೆ ಮಾಡಿತ್ತು. ಪತಂಜಲಿ ಪರ ವಕೀಲ ಮುಕುಲ್ ರೋಹ್ಟಗಿ ದೇಶದ 67 ಪತ್ರಿಕೆಗಳಲ್ಲಿ ಕ್ಷಮೆ ಯಾಚನೆಯ ಜಾಹೀರಾತು ನೀಡಿರುವುದಾಗಿ ಪೀಠಕ್ಕೆ ತಿಳಿಸಿದರು. ಕ್ಷಮೆ ಯಾಚಿಸುವ ಜಾಹೀರಾತುಗಳು ಚಿಕ್ಕ ಗಾತ್ರದಲ್ಲಿ ಪ್ರಕಟಿಸಿರುವುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತುಅಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠ ʻʻನೀವು ನಿಮ್ಮ ಸಂಸ್ಥೆಯ ಜಾಹೀರಾತುಗಳನ್ನು ಇದೇ ಗಾತ್ರದಲ್ಲಿ ಯಾವಾಗಲೂ ನೀಡುತ್ತೀರಾ?ʼʼ ಎಂದು ಪ್ರಶ್ನಿಸಿತ್ತು.
ಈ ಹಿನ್ನೆಲೆಯಲ್ಲಿ ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯ ಜಾಹೀರಾತುಗಳನ್ನು ಇಂದು ದೊಡ್ಡ ಗಾತ್ರದಲ್ಲಿ ಹಲವು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ.
ಪತಂಜಲಿ ಸಂಸ್ಥೆ ತನ್ನ ಉತ್ಪನ್ನಗಳ ಬಗ್ಗೆ ದಾರಿ ತಪ್ಪಿಸುವ ಸುಳ್ಳು ಜಾಹೀರಾತುಗಳನ್ನು ಪ್ರಕಟಿಸುವುದರ ಜೊತೆಗೆ ಆಧುನಿಕ ವೈದ್ಯ ಪದ್ಧತಿ ಬೊಗಳೆ, ಅದರಿಂದ ಏನೂ ಪ್ರಯೋಜನವಿಲ್ಲ ಎಂದು ಜಾಹೀರಾತುಗಳನ್ನು ನೀಡಿ ಭಾರತದ ಲಕ್ಷಾಂತರ ವೈದ್ಯದ ಕೆಂಗಣ್ಣಿಗೆ ಗುರಿಯಾಗಿತ್ತು. ಇದಲ್ಲದೆ ಬಾಬಾ ರಾಮದೇವ್ ನಡೆಸಿದ ಪತ್ರಿಕಾಗೋಷ್ಠಿಯಲ್ಲೂ ಸಹ ಆಧುನಿಕ ವೈದ್ಯ ಪದ್ಧತಿಗಳನ್ನುಟೀಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ( IMA ) ಸುಪ್ರೀಂ ಕೋರ್ಟ್ ಕದ ತಟ್ಟಿತ್ತು.
ಸುಪ್ರೀಂ ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ನೀಡಿದ ಆದೇಶಗಳನ್ನು ಧಿಕ್ಕರಿಸಿ ಪತಂಜಲಿ ಸಂಸ್ಥೆ ದುರಹಂಕಾರ ತೋರಿತ್ತು. ಈ ಹಿನ್ನೆಲೆಯಲ್ಲಿ ಹಲವು ಬಾರಿ ನ್ಯಾಯಪೀಠ ತನ್ನ ಆಕ್ರೋಶ ವ್ಯಕ್ತಪಡಿಸಿತ್ತು.