ಶಿವಮೊಗ್ಗ: ಫಕ್ಕಿರೇಶ್ವರ ಮಠ ಒಂದು ಜಾತ್ಯಾತೀತ ಮಠವಾಗಿದ್ದು, ಮಠದ ಗುರುಗಳಾದ ದಿಂಗಾಲೇಶ್ವರ ಸ್ವಾಮಿಗಳಿಗೆ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತತೆಯ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಅವರೂ ಸಹ ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಹುಬ್ಬಳ್ಳಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿಗೆ ಹೋಗಿದ್ದಾರೆ. ನಾವು ರಾಜ್ಯದಲ್ಲಿ 20 ಸೀಟು ಗೆಲ್ಲುತ್ತೇವೆ. ಶಿವಮೊಗ್ಗ ಕ್ಷೇತ್ರವನ್ನು ಸಹ ಗೆಲ್ಲುತ್ತೇವೆ. ಬಿಜೆಪಿ ಆಡಳಿತದಲ್ಲಿ ಆದ ಅಪರಾಧ ಪ್ರಕರಣಗಳಿಗೆ ಹೋಲಿಸಿದರೆ ನಮ್ಮ ಅವಧಿಯಲ್ಲಿ ನಡೆದ ಕ್ರಿಮಿನಲ್ ಪ್ರಕರಣಗಳು ತೀರಾ ಕಡಿಮೆ. ನಮ್ಮ ಸರಕಾರದಲ್ಲಿ ಜನತೆಗೆ ರಕ್ಷಣೆ ಇದೆ. ಆರೋಪಿಗೆ ತ್ವರಿತ ಶಿಕ್ಷೆ ಕೊಡಬೇಕೆಂದು ವಿಶೇಷ ಕೋರ್ಟ್ ಗೆ ಪ್ರಕರಣವನ್ನು ವಹಿಸಿದ್ದೇವ ಎಂದರು.
ಹುಬ್ಬಳ್ಳಿ ಪ್ರಕರಣವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ವಿಶೇಷ ತನಿಖೆ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಾನು ಆ ಭಾಗಕ್ಕೆ ತೆರಳಿದಾಗ ಅವರ ಮನೆಗೆ ಹೋಗುತ್ತೇನೆ. ಆದಷ್ಟು ಬೇಗಾ ಚಾರ್ಜ್ ಶೀಟ್ ಸಲ್ಲಿಸುವಂತೆ ಸೂಚನೆ ನೀಡಿದ್ದೇನೆ. ಸೂಕ್ತ ತನಿಖೆ ನಡೆಸಲು ಸಿಐಡಿಗೆ ನೀಡಲಾಗುವುದು ಎಂದಿದ್ದಾರೆ.