ಹುಬ್ಬಳ್ಳಿ: ನಿನ್ನೆ ಸಂಜೆ 4.45ರ ಸುಮಾರಿಗೆ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ ಆರೋಪಿಯನ್ನು ಒಂದೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಈ ನಡುವೆ ಇಂದು ಮಹಾನಗರ ವ್ಯಾಪ್ತಿಯ ಕಾಲೇಜುಗಳ ಬಂದ್ ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ( ABVP ) ಕರೆ ನೀಡಿದೆ.
ನಿನ್ನೆ ಸಂಜೆ ನಡೆದ ಭೀಕರ ದುರ್ಘಟನೆಯೊಂದರಲ್ಲಿ BVB ಕಾಲೇಜಿಗೆ ನುಗ್ಗಿದ ಫಯಾಜ್ ಎಂಬ ವ್ಯಕ್ತಿ ಸ್ಥಳೀಯ ಕಾರ್ಪೊರೇಟರ್ ನಿರಂಜನ್ ಹಿರೇಮಠ ಎಂಬುವವರ ಪುತ್ರಿ ನೇಹಾ ಎಂಬಾಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕೇವಲ ಒಂದೇ ಗಂಟೆಯಲ್ಲಿ ಆರೋಪಿ ಫಯಾಜ್ ನನ್ನು ದಸ್ತಗಿರಿ ಮಾಡಿದ್ದರು.
ಗಾಯಾಳು ನೇಹಾಳನ್ನು ಚಿಕಿತ್ಸೆಗಾಗಿ ಕಿಮ್ಸ್ ಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳು. ಫಯಾಜ್ ಮತ್ತು ನೇಹಾ ಪರಿಚಿತರಾಗಿದ್ದರು. ನೇಹಾಳನ್ನು ಪ್ರೀತಿಸುತ್ತಿದ್ದ ಫಯಾಜ್ ಆಕೆ ಅವನನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ತಪ್ಪೊಪ್ಪಿಕೊಂಡಿದ್ದಾನೆ.
ನನ್ನ ಮಗಳಿಗೆ ಆತ ತೊಂದರೆ ಕೊಡುತ್ತಿರುವುದು ತಿಳಿದಿತ್ತು. ಈ ಹಿಂದೆಯೂ ಆತನಿಗೆ ಬುದ್ದಿವಾದ ಹೇಳಿದ್ದೇವೆ. ಮಗಳನ್ನು ಕಾಲೇಜಿಗೆ ಬಿಟ್ಟು ಬರಲು ವ್ಯವಸ್ಥೆ ಮಾಡಲಾಗಿತ್ತು. ಕಾಲೇಜು ಆವರಣದಲ್ಲಿ ರಕ್ಷಣೆ ಇಲ್ಲದಿದ್ದರಿಂದ ಘಟನೆ ನಡೆದಿದೆ, ಕೊಲೆಗಡುಕನಿಗೆ ಗಲ್ಲುಶಿಕ್ಷೆಯೇ ನೀಡಬೇಕು ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಘಟನೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಹುಬ್ಬಳ್ಳಿ ಧಾರವಾಡ ಪಾಲಿಕೆ ಸದಸ್ಯನ ಮಗಳ ಹತ್ಯೆ ಖಂಡನೀಯ. ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಕಟ್ಟುನಿಟ್ಟಿನ ತನಿಖೆ ನಡೆಸಿ ಆರೋಪಿಗೆ ಹೆಚ್ಚಿನ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಘಟನೆಯ ಬೆನ್ನಲ್ಲೇ ಭಾರತೀಯ ಜನತಾ ಪಕ್ಷದ ಸಹ ಸಂಘಟನೆ ಎಬಿವಿಪಿ ಪ್ರತಿಭಟನೆ ನಡೆಸಿತು. ನಾವು ಒಂದು ಗಂಟೆಯಲ್ಲೇ ಆರೋಪಿಯನ್ನು ಅರೆಸ್ಟ್ ಮಾಡಿದ್ದೇವೆ. ಪ್ರತಿಭಟನೆ ಮಾಡಲಿ, ನಾವು ಎಲ್ಲದಕ್ಕೂ ಸಿದ್ಧ ಮಾಡಿಕೊಂಡಿದ್ದೇವೆ ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಹೇಳಿಕೆ ನೀಡಿದ್ದಾರೆ.
ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಯತ್ನಗಳು ಆರಂಭವಾಗಿದ್ದು, ಭಾರತೀಯ ಜನತಾ ಪಕ್ಷ ಓಲೈಕೆ ಆಡಳಿತದಿಂದ ಘಟನೆ ನಡೆದಿದೆ ಎಂದು ಆರೋಪಿಸಿದೆ.ವಅರಾಜಕತೆಯೆ ಆಡಳಿತದ ಧ್ಯೇಯ – ಕಾನೂನು ಮಂಗಮಾಯ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಮಂತ್ರ. ನಿಮ್ಮ ತುಷ್ಟೀರಣದ ಆಡಳಿತಕ್ಕೆ ಇನ್ನೆಷ್ಟು ಅಮಾಯಕರನ್ನು ಬಲಿ ಹಾಕ್ತಿರಿ. ಅಮಾಯಕ ಹಿಂದುಗಳನ್ನು ಬಲಿ ಹಾಕುತ್ತೀರಿ ಎಂಬುದಕ್ಕೆ ಉತ್ತರ ಕೊಡಿ ಎಂದು ಬಿಜೆಪಿ ರಾಜ್ಯ ಘಟಕ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ.