ಬಿಜೆಪಿ ಈ ಬಾರಿ ಎಷ್ಟು ಸ್ಥಾನ ಗೆಲ್ಲಲಿದೆ ಗೊತ್ತೇ? ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೊಟ್ಟರು ಶಾಕಿಂಗ್ ಅನಾಲಿಸಿಸ್

Most read

ಹೊಸದಿಲ್ಲಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 400+ ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ನಾಯಕರು ಪ್ರತಿಪಾದನೆ ಮಾಡುತ್ತಿದ್ದಾರೆ. ಅಬ್ ಕೀ ಬಾರ್ ಚಾರ್ ಸೌ ಪಾರರ್ ಎಂಬುದು ಅವರ ಘೋಷಣೆಯಾಗಿದೆ. ವಾಸ್ತವದಲ್ಲಿ 400 ಸ್ಥಾನಗಳನ್ನು ಬಿಜೆಪಿ ಗೆಲ್ಲಲು ಸಾಧ್ಯವಿದೆಯೇ? ದೇಶದಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯುವಷ್ಟು ಶಕ್ತಿ ಬಿಜೆಪಿಗಿದೆಯೇ? ಈ ಪ್ರಶ್ನೆಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಮ್ಮದೇ ಆದ ವಿಶ್ಲೇಷಣೆಯನ್ನು ಮುಂದಿಟ್ಟಿದ್ದಾರೆ. ಭಾರತೀಯ ಜನತಾ ಪಕ್ಷದ ಅಭಿಮಾನಿಗಳು ಇದನ್ನು ಕೇಳಿದರೆ ಆಘಾತಕ್ಕೆ ಒಳಗಾಗುವುದು ಖಚಿತ.

ರಜತ್ ಶರ್ಮಾ ನಡೆಸಿಕೊಡುವ ಇಂಡಿಯಾ ಟಿವಿಯ ಜನಪ್ರಿಯ ಕಾರ್ಯಕ್ರಮ ಆಪ್ ಕೀ ಅಧಾಲತ್ ನಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಯುವತಿಯೋರ್ವಳು ರೇವಂತ್ ರೆಡ್ಡಿಯವರಿಗೆ ಬಿಜೆಪಿಯ 400+ ಸ್ಥಾನ ಗೆಲ್ಲುವ ಪ್ರತಿಪಾದನೆಯ ಕುರಿತು ಪ್ರಶ್ನೆ ಕೇಳಿದ್ದಳು. ಇದಕ್ಕೆ ರೇವಂತ್ ರೆಡ್ಡಿ ನೀಡಿದ ಉತ್ತರ ಈಗಾಗಲೇ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವೈರಲ್ ಆಗಿರುವ ರೇವಂತ್ ರೆಡ್ಡಿಯವರ ಚುನಾವಣಾ ವಿಶ್ಲೇಷಣೆಯ ಯಥಾವತ್ ಮಾತುಗಳು ಹೀಗಿವೆ:

ಇಸ್ ಬಾರ್ ಚಾರ್ ಸೌ ಪಾರ್ ಎಂಬುದು ಘೋಷಣೆಗೆ ಚೆನ್ನಾಗಿದೆ. ಆದರೆ ವಾಸ್ತವದಲ್ಲಿ ಹಾಗಿದೆಯೇ? 2019ರ ಚುನಾವಣೆಯಲ್ಲಿ ಬಿಜೆಪಿ 302 ಅಥವಾ 303 ಸ್ಥಾನ ಅವರಿಗೆ ಸಿಕ್ಕಿದೆ. ಗುಜರಾತ್ ನಲ್ಲಿ ಇರುವ ಎಲ್ಲ 28 ಸ್ಥಾನ ಅವರು ಗೆದ್ದಿದ್ದರು. ರಾಜಸ್ಥಾನದ ಎಲ್ಲ 25 ಸ್ಥಾನ ಗೆದ್ದಿದ್ದರು. ಹರಿಯಾಣಾದಲ್ಲಿ ಎಲ್ಲ ಹತ್ತು ಸ್ಥಾನ ಅವರೇ ಗೆದ್ದಿದ್ದರು, ದಿಲ್ಲಿಯಲ್ಲೂ ಎಲ್ಲ ಏಳು ಸ್ಥಾನ ಅವರೇ ಗೆದ್ದರು. ಉತ್ತರಪ್ರದೇಶದಲ್ಲಿ ಬಿಜೆಪಿ ಒಂದೇ 62 ಗೆದ್ದಿತ್ತು, ಮೈತ್ರಿ ಪಕ್ಷಗಳ ಸ್ಥಾನ ಸೇರಿ 65-70 ಸ್ಥಾನ ಅವರದ್ದೇ ಆಗಿತ್ತು.

ಬಿಹಾರದಲ್ಲಿ ಒಂದೆರಡು ಸ್ಥಾನ ಬಿಟ್ಟು ಎಲ್ಲ ಅವರೇ ಗೆದ್ದಿದ್ದರು. ಈ ಎಲ್ಲ ರಾಜ್ಯಗಳಲ್ಲಿ ನೂರಕ್ಕೆ ನೂರು ಬಿಜೆಪಿಯೇ ಗೆದ್ದಿತ್ತು, ಅಥವಾ 95% ಗೆದ್ದಿತ್ತು. ಇದೆಲ್ಲ ಸಂಖ್ಯೆಗಳು ಸೇರಿಯೇ ಅವರು 300 ಸ್ಥಾನದ ಗಡಿ ದಾಟಲು ಅವರಿಗೆ ಸಾಧ್ಯವಾಗಿತ್ತು. ಈಗ 400 ಸ್ಥಾನ ಗೆಲ್ಲಬೇಕು ಎಂದರೆ ಅವರು ಪಾಕಿಸ್ತಾನದಲ್ಲಿ ಗೆಲ್ಲಬೇಕಾಗುತ್ತದೆ. ಯಾಕೆಂದರೆ ಭಾರತವೊಂದರಲ್ಲೇ ಅಷ್ಟು ಸ್ಥಾನ ಗೆಲ್ಲಲು ಸಾಧ್ಯವಿಲ್ಲ.

ಈ ಬಾರಿ ದಿಲ್ಲಿಯಲ್ಲಿ ಎಲ್ಲ ಏಳು ಸೀಟು ಗೆಲ್ಲುವುದು ಬಿಜೆಪಿಗೆ ಅಸಾಧ್ಯ. ರಾಜಸ್ತಾನದಲ್ಲೂ ಎಲ್ಲ ಸ್ಥಾನ ಗೆಲ್ಲಲು ಸಾಧ್ಯವಿಲ್ಲ. ಹರಿಯಾಣ, ಗುಜರಾತ್, ಉತ್ತರಪ್ರದೇಶ, ಬಿಹಾರಗಳಲ್ಲಿ ತಾನು ಗೆದ್ದಿರುವ ಎಲ್ಲ ಸ್ಥಾನ ಉಳಿಸಿಕೊಳ್ಳುವುದು ಬಿಜೆಪಿಯಿಂದ ಸಾಧ್ಯವಿಲ್ಲ. ದಕ್ಷಿಣ ಭಾರತದಲ್ಲಿ 129 ಸ್ಥಾನಗಳಿವೆ. ಕರ್ನಾಟಕದಿಂದ 28ರಲ್ಲಿ 27 ಸ್ಥಾನ ಅವರದ್ದೇ ಆಗಿತ್ತು. ಈ ಬಾರಿ ಹತ್ತು ಸ್ಥಾನ ಗೆಲ್ಲುವುದೂ ಅನುಮಾನವಿದೆ. ತೆಲಂಗಾಣದಲ್ಲಿ ಕಳೆದ ಬಾರಿ 4 ಸ್ಥಾನ ಗೆದ್ದಿದ್ದರು, ಈ ಬಾರಿ 2 ಸ್ಥಾನ ಗೆದ್ದರೆ ಅದೇ ಹೆಚ್ಚು. ಹೀಗಿರುವಾಗ 400 ಎಲ್ಲಿಂದ ತರುತ್ತಾರೆ ಇವರು? ಇವತ್ತು ಈ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಹೇಳುತ್ತಿದ್ದೇನೆ, 214ರಿಂದ 240 ಸ್ಥಾನ ಬಿಜೆಪಿ ಗೆಲ್ಲಬಹುದು. ಇದಕ್ಕಿಂತ ಹೆಚ್ಚು ಗೆಲ್ಲುವುದು ಸಾಧ್ಯವೇ ಇಲ್ಲ.

ಚುನಾವಣೆಗಳಿಗಾಗಿ ಈ ರೀತಿಯಾದ ಗ್ರಹಿಕೆಗಳನ್ನು ಹರಡಲಾಗುತ್ತದೆ. ಕೆ.ಸಿ.ಆರ್ ಕೂಡ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೂರು ಸ್ಥಾನ ಗೆಲ್ಲುವುದಾಗಿ ಹೇಳಿದ್ದರು. ಗೆದ್ದಿದ್ದೆಷ್ಟು, 39 ಅಷ್ಟೆ. ಮೋದಿ ಕೂಡ 400 ಅಂತಿದ್ದಾರೆ, 200 ದಾಟಬೇಕಿದೆ ಅವರು. ಸಾರ್ವಜನಿಕರಲ್ಲಿ ಒಂದು ಸಾಮಾನ್ಯ ಗ್ರಹಿಕೆಯನ್ನು ತಯಾರು ಮಾಡಲೆಂದು ರಾಜಕಾರಣಿಗಳು ಮತ್ತು ವಾಟ್ಸಾಪ್ ಯೂನಿವರ್ಸಿಟಿಗಳು ಹೀಗೆ ಸುದ್ದಿ ಹರಡುತ್ತವೆ. ಮೋದಿಯವರ ದೊಡ್ಡ ಶಕ್ತಿಯೇ ವಾಟ್ಸಾಪ್ ಯೂನಿವರ್ಸಿಟಿ. ಹೀಗಾಗಿ ವಾಟ್ಸಾಪ್ ಯೂನಿವರ್ಸಿಟಿಯಲ್ಲಿ 400 ಸ್ಥಾನ ಗೆದ್ದುಬಿಟ್ಟರು! ವಾಸ್ತವ ಹಾಗೆ ಇಲ್ಲ. ಜನ ಯೋಚನೆ ಮಾಡಿ ಮತ ಚಲಾಯಿಸಲಿದ್ದಾರೆ.

ರೇವಂತ್ ರೆಡ್ಡಿಯವರ ಈ ಹೇಳಿಕೆಯ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಚರ್ಚೆಗೆ ಕಾರಣವಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ, ಹತ್ತು ವರ್ಷಗಳ ಮೋದಿ ಆಳ್ವಿಕೆಯಿಂದ ಜನರು ನಿರಾಶರಾಗಿದ್ದಾರೆ. ಆದರೂ ಮೋದಿ ಮೂರನೇ ಬಾರಿ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದು ರೇವಂತ್ ರೆಡ್ಡಿ ಸಂದರ್ಶನದಲ್ಲಿ ಹೇಳಿದ್ದಾರೆ.

More articles

Latest article