ಬೆಂಗಳೂರು: ರಾಜ್ಯದಲ್ಲಿ 92 ಪಾಕಿಸ್ತಾನ ಪ್ರಜೆಗಳು ವಾಸವಾಗಿರುವುದು ಖಚಿತವಾಗಿದ್ದು, ಅವರೆಲ್ಲರನ್ನೂ ವಾಪಸ್ ಕಳುಹಿಸಲಾಗುತ್ತಿದೆ. ಈಗಾಗಲೇ ಕೆಲವರು ಮರಳಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲರೂ ದೇಶ ತೊರೆಯಬೇಕಾಗಿದೆ. ಬೆಂಗಳೂರಿನಲ್ಲಿ ನಾಲ್ವರು ಪಾಕ್ ವಲಸಿಗರಿದ್ದು ರಾಜ್ಯದ ಇತರ ಭಾಗಗಳಲ್ಲಿ ಒಟ್ಟು 88 ಮಂದಿ ಇದ್ದಾರೆ. ಇವರಲ್ಲಿ 88 ಮಂದಿ ದೀರ್ಘಾವಧಿ ಮತ್ತು ಉಳಿದವರು ಅಲ್ಪಾವಧಿ ವೀಸಾ ಪಡೆದುಕೊಂಡಿದ್ದಾರೆ. ಇನ್ನು ವೈದ್ಯಕೀಯ ವೀಸಾ ಅಡಿಯಲ್ಲಿ ಬಂದಿರುವವರು ಏ.27 ರಂದು ದೇಶ ಬಿಡಬೇಕಾಗಿದೆ. ಒಟ್ಟಾರೆ ರಾಜ್ಯದಲ್ಲಿರುವ 92 ಪಾಕ್ ಪ್ರಜೆಗಳು ಪಾಸ್‌ಪೋರ್ಟ್ ಹೊಂದಿದ್ದು ಅಧಿಕೃತವಾಗಿ ರಾಜ್ಯದಲ್ಲಿ ನೆಲೆಸಿರುವುದು ಪತ್ತೆಯಾಗಿದೆ.
ಪಾಕ್ ವಲಸಿಗರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿದೆ. ನಿಗದಿತ ಅವಧಿಯೊಳಗೆ ದೇಶ ತೊರೆದು ಹೋಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದೇ ರೀತಿ ನಗರದ ವಿವಿಧ ಭಾಗಗಳಲ್ಲಿರುವ ನಾಲ್ವರು ಪಾಕ್ ವಲಸಿಗರಿಗೂ ನೋಟೀಸ್ ಜಾರಿ ಮಾಡಲಾಗಿದೆ. ಈಗ ಪತ್ತೆಯಾಗಿರುವ 92 ಮಂದಿಯೂ ಅಧಿಕೃತ ವಲಸೆಗಾರರಾಗಿದ್ದಾರೆ. ಆದರೆ, ಅಕ್ರಮವಾಗಿ ರಾಜ್ಯದಲ್ಲಿ ಬೀಡುಬಿಟ್ಟಿರುವ ಅಕ್ರಮ ವಲಸಿಗರ ಸಂಖ್ಯೆ ಇನ್ನೂ ದೃಢಪಟ್ಟಿಲ್ಲ, ಮುಂದಿನ ದಿನಗಳಲ್ಲಿ ಅವರನ್ನು ಪತ್ತೆ ಹಚ್ಚಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.