ಒಂಬತ್ತು ವರ್ಷದ ಬಾಲಕಿ ಕರ್ನೂಲ್ ಉಪ-ಜೈಲಿನ ಮುಂದೆ ತನ್ನ ತಾಯಿಗಾಗಿ ಅಳುತ್ತಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಆಕೆ ಜೈಲಿನ ಬಾಗಿಲಲ್ಲಿ ಅಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ಕರ್ನೂಲ್ ನಗರದ ಕಂದಾಯ ವಿಭಾಗೀಯ ಕಚೇರಿ ಹಾಗೂ ಮಂಡಲ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಉಪ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಜೈಲಿನ ಹೊರಗೆ ಬಾಲಕಿ ಅಳುತ್ತಿರುವ ದೃಶ್ಯವನ್ನು ಆಕೆಯ ಸಂಬಂಧಿಕರು ಕೆಲವರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕಾರಾಗೃಹದ ಬಾಗಿಲಿನಲ್ಲಿ ಅಳುತ್ತಿರುವ ಬಾಲಕಿಯನ್ನು ಗಮನಿಸಿದ ಜೈಲಿನ ಅಧಿಕಾರಿಗಳು, ತಾಯಿಗಾಗಿ ಅಪಹಪಿಸುತ್ತಿದ್ದನ್ನು ಅರ್ಥೈಸಿಕೊಂಡಿದ್ದಾರೆ. ಮಗುವಿಗೆ ತನ್ನ ತಾಯಿ ಖಾಜಾ ಭಿ ಅನ್ನು ಭೇಟಿ ಮಾಡಿಸಿದ್ದಾರೆ. ನಂತರ, ಜೈಲು ಅಧಿಕಾರಿಗಳು ೯ ವರ್ಷದ ಹುಡುಗಿಯನ್ನು ಸಂಬಂಧಿಕರ ವಿಳಾಸವನ್ನು ಪಡೆದು ಅವರಿಗೆ ಹಸ್ತಾಂತರಿಸಿದ್ದಾರೆ ಎ/ಮದು ತಿಳಿದುಬಂದಿದೆ.
35 ವರ್ಷದ ಮಹಿಳೆಯನ್ನು ಡಿಸೆಂಬರ್ 12 ರಂದು ಕಳ್ಳತನದ ಆರೋಪದ ಮೇಲೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ತಾಯಿಯ ಬಂಧನದ ನಂತರ, 9 ವರ್ಷದ ಮಗುವನ್ನು ತನ್ನ ನಾಲ್ವರು ಒಡಹುಟ್ಟಿದವರ ಜೊತೆಗೆ ತನ್ನ ಸಂಬಂಧಿಕರ ಆರೈಕೆಯಲ್ಲಿದ್ದಾಳೆ ಎಂದು ತಿಳಿದು ಬಂದಿದೆ.
ಈ ಕುರಿತು ಜಿಲ್ಲಾ ಕಾರಾಗೃಹ ಅಧೀಕ್ಷಕ ಗಣಿ ನಾಯಕ್ ಮಾತನಾಡಿ, ಖಾಜಾ ಭಿ ಅವರಿಗೆ ಐದು ಮಕ್ಕಳಿದ್ದು, ಕರ್ನೂಲ್ ನಗರದ ವಡ್ಡಿಗಿರಿಯಲ್ಲಿ ವಾಸವಾಗಿದ್ದಾರೆ. ಆಕೆಯ ಪತಿ ಬೇರೆ ಮಹಿಳೆಗಾಗಿ ಆಕೆಯನ್ನು ತ್ಯಜಿಸಿದ್ದ ಎಂದು ಹೇಳಿದ್ದಾರೆ. ಖಾಜಾ ಭಿ ದಿನಗೂಲಿ ನೌಕರಳಾಗಿ ಕೆಲಸ ಮಾಡುತ್ತಿದ್ದರು. ಖಾಜಾ ಭಿ ಪುನರಾವರ್ತಿತ ಅಪರಾಧಿ ಎಂದು ವರದಿಯಾಗಿದೆ.
ಒಂಬತ್ತು ವರ್ಷದ ಬಾಲಕಿಯನ್ನು ತನ್ನ ತಾಯಿಯೊಂದಿಗೆ ವಾಸಿಸಲು ಅನುಮತಿಸಬಹುದೇ ಎಂದು ಕೇಳಿದಾಗ, ಆರು ವರ್ಷದೊಳಗಿನ ಮಕ್ಕಳಿಗೆ ಮಾತ್ರ ನಿಯಮಗಳ ಪ್ರಕಾರ ಜೈಲಿನಲ್ಲಿ ತಮ್ಮ ತಾಯಂದಿರೊಂದಿಗೆ ಇರಲು ಅವಕಾಶವಿದೆ ಎಂದು ಅಧಿಕಾರಿ ವಿವರಿಸಿದರು.
ಖಾಜಾಭಿ ಅವರ ಮನೆಗೆ ಭೇಟಿ ನೀಡಿ ಮಕ್ಕಳನ್ನು ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸಲಾಗುವುದು ಎಂದು ಕರ್ನೂಲ್ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಸ್ ಜುಬೈದಾ ಬೇಗಂ ತಿಳಿಸಿದ್ದಾರೆ. “ಅಗತ್ಯವಿದ್ದಲ್ಲಿ ನಾವು ಅವರನ್ನು ಶಿಶುಪಾಲನಾ ಸಂಸ್ಥೆಗೆ ಸ್ಥಳಾಂತರಿಸುತ್ತೇವೆ ಅಥವಾ ಚರ್ಚಿಸಿ ಸಂಬಂಧಿಕರೊಂದಿಗೆ ಉಳಿಯಲು ಅವಕಾಶ ನೀಡುತ್ತೇವೆ,” ಎಂದು ಹೇಳಿದ್ದಾರೆ.