ಬೆಂಗಳೂರು: ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಮೇರೆಗೆ ತಿಲಕನಗರ ಪೊಲೀಸ್ ಠಾಣೆಯಲ್ಲಿ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ಪಕ್ಷದ ರಾಷ್ಟ್ರೀಯ ಮುಖಂಡರು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ರಾಜ್ಯ ಬಿಜೆಪಿ ಘಟಕದ ಹಿಂದಿನ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಆಗಿನ ಉಪಾಧ್ಯಕ್ಷ (ಈಗ ರಾಜ್ಯಾಧ್ಯಕ್ಷ) ಬಿ.ವೈ. ವಿಜಯೇಂದ್ರ, ರಾಜ್ಯ ಬಿಜೆಪಿ ಅಂದಿನ ಪದಾಧಿಕಾರಿಗಳ ಮೇಲೆ 8000 ಕೋಟಿ ರುಪಾಯಿಗೂ ಹೆಚ್ಚು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಲಾಗಿದೆ.
ನಿನ್ನೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಲ್ಲ ಆರೋಪಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಆದೇಶಿಸಿದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಆದರ್ಶ್ ಅಯ್ಯರ್ ಅವರು ನೀಡಿದ್ದ ದೂರನ್ನು ದಾಖಲಿಸಿಕೊಳ್ಳಲಾಗಿದೆ.
ಕಾರ್ಪೊರೇಟ್ ಅಲ್ಯುಮಿನಿಯಂ ಮತ್ತು ಕಾಪರ್ ಜೈಂಟ್, ಎಂ/ಎಸ್ ಸ್ಕ್ವೇರ್ ಲೈಟ್, ವೇದಾಂತ ಕಂಪೆನಿಗಳಿಂದ 2019 ಏಪ್ರಿಲ್ ನಿಂದ 2023ರ ನವೆಂಬರ್ ವರೆಗೆ 230.15 ಕೋಟಿ ಮತ್ತು ಅರವಿಂದ ಫಾರ್ಮಾ ಎಂಬ ಕಂಪೆನಿಯಿಂದ ಜುಲೈ 2022ರಿಂದ ನವೆಂಬರ್ 2023ರವರೆಗೆ 49.5 ಕೋಟಿ ಹೀಗೆ ಹಲವಾರು ಕಂಪೆನಿಗಳಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೂಲಕ ಬೆದರಿಸಿ ನಿರ್ಮಾಲಾ ಸೀತಾರಾಮನ್ ಮತ್ತು ಇತರ ಆರೋಪಿಗಳು ಸುಲಿಗೆ ಮಾಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಈ ಸುಲಿಗೆ ಪ್ರಕರಣಗಳ ಕುರಿತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಡಿಸಿಪಿಯವರಿಗೆ ದೂರು ನೀಡಿದ್ದರು. ನಂತರವೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಇರುವ ಆರೋಪ ಸತ್ಯವೆಂದು ಕಂಡುಬಂದ ಹಿನ್ನೆಲೆಯಲ್ಲಿ ಕೂಡಲೇ ಎಫ್ ಐ ಆರ್ ದಾಖಲಿಸುವಂತೆ ತಿಲಕನಗರ ಪೊಲೀಸರಿಗೆ ಆದೇಶಿಸಿದ್ದರು.