ಬೆಂಗಳೂರಿನಲ್ಲಿ ಹಾಡುಹಗಲೇ ಬರೋಬ್ಬರಿ ರೂ.7 ಕೋಟಿ ದರೋಡೆ: ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು

Most read

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಬರೋಬ್ಬರಿ 7.11 ಕೋಟಿ ರೂ.ಗಳನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಇಂದು ಮಧ್ಯಾಹ್ನ ಸೌತ್ ಎಂಡ್ ಸರ್ಕಲ್ ಹತ್ತಿರದ ಎಟಿಎಂಗೆ ಹಣ ತುಂಬಿಸಲು ಹೊರಟಿದ್ದ ವಾಹನವನ್ನು (GJ 01 HT 9173) ಜಯದೇವ ಡೇರಿ ವೃತ್ತದ ಬಳಿ ತಡೆದು ದರೋಡೆ ಮಾಡಲಾಗಿದೆ. ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರ ತಂಡ ಈ ವಾಹನವನ್ನು ತಡೆದಿದೆ. ನಾವು ಆರ್​​ಬಿಐ ಅಧಿಕಾರಿಗಳು ಎಂದು ಹೆದರಿಸಿ ನೀವು ನಿಯಮಾವಳಿಗಳನ್ನು ಉಲ್ಲಂಘಿಸಿದ್ದೀರಿ.  ಆದ್ದರಿಂದ ನೀವು ಪೊಲೀಸ್ ಠಾಣೆಗೆ ಬರಬೇಕು ಎಂದು ಹೇಳಿ ಗನ್​​ಮ್ಯಾನ್​​ ಸೇರಿದಂತೆ ಉಳಿದವರನ್ನೆಲ್ಲಾ ಅಲ್ಲೇ ಇಳಿಸಿದ್ದಾರೆ. ನಂತರ ಹಣದ ವಾಹನ ಸಹಿತ ಚಾಲಕನನ್ನು ಡೇರಿ ಸರ್ಕಲ್ ನತ್ತ ಕರೆದೊಯ್ದಿದ್ದಾರೆ. ಅಲ್ಲಿ ಡೇರಿ ಸರ್ಕಲ್ ಮೇಲ್ಸೇತುವೆ ಮೇಲೆ ವಾಹನ ನಿಲ್ಲಿಸಿ ಅದರಲ್ಲಿದ್ದ ಹಣವನ್ನು ಇನ್ನೋವಾ ಕಾರಿಗೆ ತುಂಬಿಸಿಕೊಂಡು ಪರಾರಿಯಾಗಿದ್ದಾರೆ.

ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲಿ ಈ ಘಟನೆ ನಡೆದಿದೆ.

ಎಟಿಎಂ ವಾಹನದಲ್ಲಿ ಸಿಎಂಎಸ್ ನ ಚಾಲಕ, ಇಬ್ಬರು ಗನ್ ಮ್ಯಾನ್ ಹಾಗೂ ಮತ್ತೊಬ್ಬ ಹಣ ಹಾಕುವ ಸಿಬ್ಬಂದಿ ಸೇರಿ  ನಾಲ್ವರು ಇದ್ದರು. ಪೊಲೀಸರು ಇವರನ್ನೂ ವಿಚಾರಣೆಗೊಳಪಡಿಸಿದ್ದಾರೆ.

ದರೋಡೆಕೋರರು ಆಗಮಿಸಿದ್ದ ಇನ್ನೋವಾ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದು ಬೆಳಕಿಗೆ ಬಂದಿದೆ. ಹೌದು..KA 03 NC 8052 ಸಂಖ್ಯೆಯ ಇನ್ನೋವಾ ಕಾರಿನಲ್ಲಿ ಬಂದು ಕೃತ್ಯ ಎಸಗಿದ್ದಾರೆ. ಆದರೆ KA 03 NC 8052 ಸಂಖ್ಯೆಯ ಮೂಲ ಕಾರು ಮಾರುತಿ ಸುಜುಕಿ ಎಂದು ತಿಳಿದುಬಂದಿದೆ.

ಹಣ ದರೋಡೆ ಮಾಡಿದ ನಂತರ ದರೋಡೆಕೋರರು ​ಹೊಸಕೋಟೆಯತ್ತ ತೆರಳಿದ್ದಾರೆ ಎನ್ನಲಾಗಿದೆ. ಡೇರಿ ಸರ್ಕಲ್, ಕೋರಮಂಗಲ, ಸೋನಿ ವರ್ಲ್ಡ್‌ ಜಂಕ್ಷನ್, ದೊಮ್ಮಲೂರು, ಮಾರತ್ತಹಳ್ಳಿ, ವೈಟ್​ ಫಿಲ್ಡ್​​ ಮಾರ್ಗವಾಗಿ ಹೊಸಕೋಟೆ ಕಡೆ ತೆರಳಿರುವ ಮಾಹಿತಿ ಲಭ್ಯವಾಗಿದೆ.

ನಗರ ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ. ನೀಡಿದ್ದು, ಬೆಂಗಳೂರಿನಾದ್ಯಂತ ನಾಕಾಬಂದಿ ಹಾಕಲಾಗಿದೆ. ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ CMS ಸಿಬ್ಬಂದಿ ಮೇಲೆಯೂ ಅನುಮಾನ ವ್ಯಕ್ತವಾಗಿದೆ. ದರೋಡೆ ಸಂಭವಿಸಿದ ನಂತರ ತಡವಾಗಿ ಮಾಹಿತಿ ನೀಡಿದ್ದಾರೆ. ಸಿದ್ದಾಪುರ  ಪೊಲೀಸ್ ಠಾಣೆಯಲ್ಲಿ ಅವರ ವಿಚಾರಣೆ ನಡೆಸಲಾಗುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಹೇಳಿದರು

ದರೋಡೆ ಹಿನ್ನೆಲೆ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ದರೋಡೆಕೋರರ ಪತ್ತೆಗೆ ಬಲೆ ಬೀಸಲಾಗಿದೆ. ಆರೋಪಿಗಳು ಬೆಂಗಳೂರು ಬಿಟ್ಟು ಹೋಗದಂತೆ ಕ್ರಮ ಕೈಗೊಳ್ಳಲಾಗಿದ್ದು,. ಗಡಿ ಭಾಗಗಳಲ್ಲಿ ಬ್ಯಾರಿಕೇಡ್ ಹಾಕಿ ಪರಿಶೀಲನೆ ಮಾಡಲಾಗುತ್ತಿದೆ

More articles

Latest article