ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದ ಜನರ ಬದುಕಿನಲ್ಲಿ ಬೆಳಕು: ರಣದೀಪ್‌ ಸುರ್ಜೇವಾಲ

Most read

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ಭರವಸೆಗಳಾಗಿ ಉಳಿಯದೆ, ಇಂದು ಕೋಟ್ಯಂತರ ಜನರ ದೈನಂದಿನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿವೆ. ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳು ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಪ್ರಮುಖ ಸಾಧನಗಳಾಗಿ ಹೊರಹೊಮ್ಮಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಪಕ್ಷ ಉಸ್ತುವಾರಿ-ರಣದೀಪ್‌ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದ ಎಕ್ಸ್‌  ನಲ್ಲಿ ಅವರು ಗೈಆರಂಟಿ ಯೋಜನೆಗಳು ಹೇಗೆ ಬದಲಾವಣೆಗೆ ಕಾರಣವಾಗಿವೆ ಎಂದು ಉದಾಹರಣೆ ಸಹಿತ ವಿವರಿಸಿದ್ದಾರೆ.

 ರಾಮನಗರದ ಫಲಾನುಭವಿ ಬಿ.ಕೆ. ತುಳಸಿ ಎಂಬುವವರು ನವರಾತ್ರಿಯ ಆಯುಧಪೂಜೆ ದಿನ ಗೃಹಲಕ್ಷ್ಮಿ ಹಣದಿಂದ ₹13,000 ಮೌಲ್ಯದ ವಾಷಿಂಗ್ ಮಿಷನ್ ಖರೀದಿಸುವ ಮೂಲಕ ಯೋಜನೆಯ ಸದ್ಬಳಕೆಯನ್ನು ಮಾಡಿರುವುದು ಈ ಕ್ರಾಂತಿಗೆ ಒಂದು ಜೀವಂತ ಸಾಕ್ಷಿಯಾಗಿದೆ. ಪ್ರತಿ ಮನೆಯ ಯಜಮಾನಿಯ ಖಾತೆಗೆ ಮಾಸಿಕವಾಗಿ ಹಣ ಜಮಾವಣೆಯಾಗುವ ಗೃಹಲಕ್ಷ್ಮಿ ಯೋಜನೆಯು, ಮಹಿಳೆಯರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿ, ಸಣ್ಣ ಉಳಿತಾಯಕ್ಕೆ ದಾರಿ ಮಾಡಿಕೊಟ್ಟಿದೆ. ಈ ಹಣ ಕೇವಲ ಖರ್ಚುಗಳಿಗೆ ಸೀಮಿತವಾಗಿಲ್ಲ, ಬದಲಿಗೆ ಉತ್ಪಾದಕ ಆಸ್ತಿಗಳನ್ನು ಸೃಷ್ಟಿಸಲು ನೆರವಾಗುತ್ತಿದೆ.

ರಾಮನಗರ ಟೌನ್‌ನ ಬಿ.ಕೆ. ತುಳಸಿ ಅವರೇ ಇದಕ್ಕೆ ಉತ್ತಮ ಉದಾಹರಣೆ. ಗೃಹಿಣಿಯಾದ ತುಳಸಿ ಅವರು, ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮೊದಲು ಮಕ್ಕಳಿಗೆ ಸೈಕಲ್ ಕೊಡಿಸಿ, ನಂತರ ₹13,000 ಮೌಲ್ಯದ ವಾಷಿಂಗ್ ಮಿಷನ್ ಖರೀದಿಸಿದ್ದಾರೆ. ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ತುಳಸಿ, “ನಮಗೆ ಈ ಹಣ ಬಂದಿದ್ದು ಬಹಳ ಖುಷಿಯಾಗಿದೆ. ನಾವು ಅಕ್ಕಪಕ್ಕ ವಿಚಾರಿಸಿದಾಗ, ಎಲ್ಲರೂ ಹಬ್ಬ-ಹರಿದಿನಗಳಲ್ಲಿ ಬಟ್ಟೆ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಿ ಸಂತೋಷಪಟ್ಟಿದ್ದಾರೆ. ಈ ಯೋಜನೆ ಎಲ್ಲರಿಗೂ ಒಳ್ಳೆಯದಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೆ ಮುಂದುವರಿಸಬೇಕು ಎಂದು ಹೇಳಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗೆ ತಮ್ಮ ಕುಟುಂಬದ ನಿರ್ಧಾರಗಳಲ್ಲಿ ಸ್ವಾತಂತ್ರ್ಯ ಮತ್ತು ಆರ್ಥಿಕ ಭದ್ರತೆಯನ್ನು ನೀಡಿದೆ ಎಂಬುದಕ್ಕೆ ತುಳಸಿ ಅವರ ಮಾತು ಸಾಕ್ಷಿಯಾಗಿದೆ.

ದೇಶವೇ ಮೆಚ್ಚಿದ ಶಕ್ತಿ ಯೋಜನೆ: ಮಹಿಳಾ ಸಬಲೀಕರಣದೆಡೆಗಿನ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯಾದ ಶಕ್ತಿ ಯೋಜನೆಯು, ಮಹಿಳೆಯರಿಗೆ ರಾಜ್ಯದಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದೆ. ಇದರಿಂದಾಗಿ ಮಹಿಳೆಯರು ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಹೆಚ್ಚು ಸಬಲರಾಗಲು ಸಾಧ್ಯವಾಗಿದೆ.

ಶಕ್ತಿ ಯೋಜನೆಯ ಯಶಸ್ಸು ಇದೀಗ ವಿಶ್ವ ಮಟ್ಟದಲ್ಲಿ ದಾಖಲಾಗಿದೆ. ಇತ್ತೀಚೆಗೆ, ಈ ಯೋಜನೆಯು 500 ಕೋಟಿ ಮಹಿಳಾ ಟಿಕೆಟ್ ಉಚಿತ ಪ್ರಯಾಣದ ಮೈಲಿಗಲ್ಲನ್ನು ಸಾಧಿಸಿ, ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ – ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ (International Book of Records – World Record of Excellence) ನಲ್ಲಿ ಸೇರ್ಪಡೆಯಾಗಿದೆ. ಈಗಾಗಲೇ ಇದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲೂ ಸ್ಥಾನ ಪಡೆದಿತ್ತು.

“ಶಕ್ತಿ ಯೋಜನೆಯ ಯಶಸ್ಸನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅನುಷ್ಠಾನಗೊಳಿಸುತ್ತಿರುವುದು ಯೋಜನೆಯ ಮಹತ್ವವನ್ನು ಬಿಂಬಿಸಿದೆ. ಇದರೊಂದಿಗೆ ಮತ್ತೊಂದು ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಅಲ್ಲದೆ, ಅ.1ರವರೆಗೆ ರಾಜ್ಯದ ಸಾರಿಗೆಯಲ್ಲಿ 562 ಕೋಟಿ ಬಾರಿ ಮಹಿಳೆಯರು ಪ್ರಯಾಣ ಮಾಡಿದ್ದು, ಇದುವರೆಗೆ 14,274.32 ಕೋಟಿ ರೂಪಾಯಿಯನ್ನು ಕರ್ನಾಟಕ ರಾಜ್ಯ ಸರ್ಕಾರ ಇದಕ್ಕಾಗಿ ವ್ಯಯಿಸಿದೆ. ಇದು ನಿಜಕ್ಕೂ ಶ್ಲಾಘನೀಯ ಕ್ರಮವಾಗಿದೆ.

ಒಟ್ಟಾರೆಯಾಗಿ, ಗ್ಯಾರಂಟಿ ಯೋಜನೆಗಳು ಕೇವಲ ಹಣಕಾಸಿನ ನೆರವು ನೀಡುತ್ತಿಲ್ಲ, ಬದಲಿಗೆ ಮಹಿಳೆಯರಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಮತ್ತು ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ವೇದಿಕೆ ಕಲ್ಪಿಸಿವೆ. ಇದು ಕರ್ನಾಟಕದ ಆಡಳಿತ ಮಾದರಿಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂದು ವಿವರಿಸಿದ್ದಾರೆ.

More articles

Latest article