ಬೆಂಗಳೂರು: ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವ ಉದ್ದೇಶದ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಮಸೂದೆ 2025 ಸೇರಿ ಒಟ್ಟು ಐದು ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಬಳ್ಳಾರಿ ಮತ್ತು ಜಯಮಹಲ್ ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.39 ಎಕರೆ ಜಾಗ ಸ್ವಾಧೀನಕ್ಕೆ ಬದಲಾಗಿ ಮೈಸೂರು ರಾಜ ಮನೆತದ ವಾರಸುದಾರರಿಗೆ ರೂ.3014 ಕೋಟಿ ವರ್ಗಾವಣೆ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್) ಪರಿಹಾರ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಈ ಮಸೂದೆ ಮಹತ್ವ ಪಡೆದುಕೊಂಡಿದೆ. ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಿದರೆ ಅಪಾರ ನಷ್ಟ ಉಂಟಾಗಲಿದೆ ಎಂಬ ತೀರ್ಮಾನಕ್ಕೆ ಬಂದಿರುವ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಆದರೆ, ಸುಪ್ರೀಂಕೋರ್ಟ್ ಅದನ್ನು ಒಪ್ಪದೆ ಟಿಡಿಆರ್ ಪರಿಹಾರ ನೀಡುವ ಆದೇಶ ಪಾಲಿಸುವಂತೆ ಸೂಚನೆ ನೀಡಿತ್ತು. ಅದರ ನಡುವೆಯೂ ಇದೀಗ ಸುಗ್ರೀವಾಜ್ಞೆಗೆ ಕಾನೂನು ರೂಪ ನೀಡಲು ಸರ್ಕಾರ ಮುಂದಾಗಿದ್ದು, ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ 2025 ಅನ್ನು ಮಂಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಧಾನಮಂಡಲದಲ್ಲಿ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ 2025ವನ್ನು ಮಂಡನೆ ಮಾಡಿದ್ದಾರೆ. ಈ ವಿಧೆಯಕವು 1996ರ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆಗೆ ಪೂರಕವಾಗಿದೆ. ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ 2025ದ ಜೊತೆಗೆ ಸರ್ಕಾರ ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ಮಸೂದೆ 2025, ಕರ್ನಾಟಕ ಗಿರವಿದಾರರ (ತಿದ್ದುಪಡಿ) ಮಸೂದೆ 2025, ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ) ಮಸೂದೆ 2025, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಮಸೂದೆ 2025ನ್ನು ಮಂಡಿಸಿದೆ.
ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ಮಸೂದೆ 2025 ಮಸೂದೆಯು ಆರ್ಥಿಕವಾಗಿ ದುರ್ಬಲವಾಗಿರುವವರನ್ನು ಹೆಚ್ಚಿನ ಬಡ್ಡಿ ಮತ್ತು ಬಲವಂತದ ವಸೂಲಾತಿ ವಿಧಾನಗಳಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಕರ್ನಾಟಕ ಗಿರವಿದಾರರ (ತಿದ್ದುಪಡಿ) ಮಸೂದೆ 2025, ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ (ತಿದ್ದುಪಡಿ) ಮಸೂದೆ 2025 ಕೂಡ ಇದೇ ಉದ್ದೇಶವನ್ನು ಹೊಂದಿದೆ. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಮಸೂದೆ 2025ಯನ್ನು ಮಾರುಕಟ್ಟೆ ಸಮಿತಿಯ ಅಧಿಕಾರ ವ್ಯಾಪ್ತಿಯನ್ನು ಮಾರುಕಟ್ಟೆ, ಉಪ-ಮಾರುಕಟ್ಟೆ ಪ್ರದೇಶಕ್ಕೆ ವಿಸ್ತರಿಸಲು, ಗೋದಾಮಿನ ಸೇವಾ ಪೂರೈಕೆದಾರರ ಜವಾಬ್ದಾರಿಯನ್ನು ನಿಗದಿಪಡಿಸಲು ಮತ್ತು ಇ-ಕಾಮರ್ಸ್ ವೇದಿಕೆಗಳನ್ನು ಸ್ಥಾಪಿಸಲು ಪರಿಚಯಿಸಲಾಗಿದೆ.