ಭೋಪಾಲ್: ಮಧ್ಯಪ್ರದೇಶದ ಮಿಂದೋರಿ ಅರಣ್ಯದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ 40 ಕೋಟಿ ರೂ. ಮೌಲ್ಯದ 52 ಕೆಜಿ ಚಿನ್ನ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಈ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ ರಾತ್ರಿ 2 ಗಂಟೆ ವೇಳೆಗೆ ಈ ಕಾರ್ಯಾಚರಣೆ ನಡೆದಿದೆ. 30 ವಾಹನಗಳಲ್ಲಿ 100 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಪೊಲೀಸರು ಅರಣ್ಯಕ್ಕೆ ತೆರಳಿದ್ದರು. ಜಾರಿ ನಿರ್ದೇಶನಾಲಯ, ಲೋಕಾಯುಕ್ತ ಮತ್ತು ಐಟಿ ಇಲಾಖೆಗಳು ರಿಯಲ್ ಎಸ್ಟೇಟ್ ಉದ್ಯಮಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿದೆ.
ಬಿಲ್ಡರ್ ವೊಬ್ಬರನ್ನು ಪೊಲೀಸರು ಬಂಧಿಸಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ. ಪೊಲೀಸರು ಬಂಧಿಸಲು ಉದ್ದೇಶಿಸಿದ್ದ ಬಿಲ್ಡರ್ ಹೆಸರಿನಲ್ಲಿ ಕಾರನ್ನು ನೋಂದಾಯಿಸಲಾಗಿದೆ ಎಂದು ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮಧ್ಯೆ ಭೋಪಾಲ್ ಮತ್ತು ಇಂದೋರ್ನಲ್ಲಿರುವ ತ್ರಿಶೂಲ್ ಕನ್ಸ್ಟ್ರಕ್ಷನ್, ಕ್ವಾಲಿಟಿ ಗ್ರೂಪ್ ಮತ್ತು ಇಶಾನ್ ಗ್ರೂಪ್ಗೆ ಸೇರಿದ 51 ಸ್ಥಳಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.