Sunday, September 8, 2024

ನವೋದ್ಯಮಗಳ ಸ್ಥಾಪನೆಗೆ ಕಲ್ಯಾಣ ಕರ್ನಾಟಕ ಪ್ರದೇಶದ 19 ಸಂಸ್ಥೆಗಳಿಗೆ 4 ಕೋಟಿ ರೂ. ಸಹಾಯಧನ: ಪ್ರಿಯಾಂಕ್‌ ಖರ್ಗೆ

Most read

ಕಲ್ಯಾಣ ಕರ್ನಾಟಕ ಭಾಗದಲ್ಲಿ ನವೋದ್ಯಮಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಮೂಲಕ ʼಎಲಿವೇಟ್‌ʼ ಯೋಜನೆ ಆರಂಭಿಸಲಾಗಿದ್ದು, ನವೋದ್ಯಮಗಳನ್ನು ಆರಂಭಿಸುವ ಯುವಕ ಯುವತಿಯರಿಗೆ ಈ ವರ್ಷ 4 ಕೋಟಿ ರೂ. ಧನಸಹಾಯ ಒದಗಿಸುವ ಕಾರ್ಯಕ್ರಮದ ಅನ್ವಯ 19 ನವೋದ್ಯಮಿಗಳಿಗೆ ಈಗಾಗಲೆ 2 ಕೋಟಿ ರೂ. ಧನಸಹಾಯ ವಿತರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ 11, ಬಳ್ಳಾರಿ ಜಿಲ್ಲೆಯ ಮೂರು, ಕೊಪ್ಪಳ ಹಾಗು ಬೀದರ್‌ ಜಿಲ್ಲೆಯ ತಲಾ ಎರಡು ಮತ್ತು ರಾಯಚೂರು ಜಿಲ್ಲೆಯ ಒಂದು ಸೇರಿದಂತೆ 19 ಸಂಸ್ಥೆಗಳನ್ನು ನವೋದ್ಯಮ ಸ್ಥಾಪನೆಗಾಗಿ ಗುರುತಿಸಲಾಗಿದೆ. ಜೈವಿಕ ತಂತ್ರಜ್ಞಾನ, ಕೃಷಿ, ಪಶುಸಂಗೋಪನೆ, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಬ್ಯಾಂಕಿಂಗ್‌, ಎವಿಜಿಸಿ ಸೇರಿದಂತೆ ಹಲವಾರು ಕ್ಷೇತ್ರಗಳನ್ನು ನವೋದ್ಯಮಿಗಳು ಆರಿಸಿಕೊಂಡಿರುವುದು ವಿಶೇಷವಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಆಯ್ಕೆಯಾಗಿರುವ 19 ಸಂಸ್ಥೆಗಳಲ್ಲಿ 7 ನವೋದ್ಯಮಗಳು ತಲಾ 25 ಲಕ್ಷ ರೂ. ಸಹಾಯಧನ ಮಂಜೂರಾತಿ ನೀಡಲಾಗಿದೆ. ಉಳಿದವುಗಳಿಗೆ 20 ಲಕ್ಷ ರೂ.ಗಳಿಂದ 15 ಲಕ್ಷ ರೂ. ಸಹಾಯಧನ ಮಂಜೂರಾಗಿದೆ ಎಂದೂ ಸಚಿವರು ಹೇಳಿದ್ದಾರೆ.

ಸಹಾಯಧನಕ್ಕೆ ಆಯ್ಕೆಗೊಂಡಿರುವ 19 ನವೋದ್ಯಮಿಗಳನ್ನು ಅಭಿನಂದಿಸಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕಲ್ಯಾಣ ಕರ್ನಾಟಕ ಭಾಗದ ಇನ್ನೂ ಹೆಚ್ಚು ಯುವಕ ಯುವತಿಯರು ನವೋದ್ಯಮಗಳನ್ನು ಆರಂಭಿಸುವ ಮೂಲಕ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಸಲು ಕಾರಣರಾಗಬೇಕೆಂದು ಕರೆ ಕೊಟ್ಟಿದ್ದಾರೆ. ರಾಜ್ಯದ ರಾಜಧಾನಿಯಾದ ಬೆಂಗಳೂರು ಹಾಗೂ ದಕ್ಷಿಣ ಭಾಗದಲ್ಲಿ ಮಾತ್ರ ನವೋದ್ಯಮಗಳನ್ನು ಆರಂಭಿಸುತ್ತಿದ್ದ ಪರಂಪರೆಯನ್ನು ಬದಲಿಸಿ ಕಲ್ಯಾಣ ಕರ್ನಾಟಕ ಭಾಗದ ಯುವ ಜನತೆಗೂ ಅವಕಾಶ ನೀಡಿರುವುದಾಗಿ ತಿಳಿಸಿರುವ ಸಚಿವರು ಈ ಭಾಗದಲ್ಲಿ ನವೋದ್ಯಮಗಳನ್ನು ಆರಂಭಿಸುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳುವುದರೊಂದಿಗೆ ಸ್ಥಳಿಯ ಅರ್ಹ ಯುವ ಜನಾಂಗಕ್ಕೆ ಉದ್ಯೋಗ ದೊರೆಕಿಸಿಕೊಡಲು ಕಾರಣರಾಗಬೇಕೆಂದು ಹೇಳಿದ್ದಾರೆ.

More articles

Latest article