ಸಂಬಲ್ಪುರ: ಒಡಿಶಾದ ಸಂಬಲ್ಪುರ ನಗರದ ಮಣಪ್ಪುರಂ ಫೈನಾನ್ಸ್ ಶಾಖೆಯೊಂದರಲ್ಲಿ ದರೋಡೆಕೋರರು ಸುಮಾರು 30 ಕೆ.ಜಿ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು ಹತ್ತು ಮಂದಿ ದರೋಡೆಕೋರರು ಹೆಲ್ಮೆಟ್ ಮತ್ತು ಮುಖವಾಡಗಳನ್ನು ಧರಿಸಿ ಏಕಾಏಕಿ ಶಾಖೆಗೆ ನುಗ್ಗಿದ್ದಾರೆ. ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ನಂತರ ಶಾಖೆಯ ವ್ಯವಸ್ಥಾಪಕರು ಸೇರಿದಂತೆ ಹಲವರನ್ನು ಹಗ್ಗದಿಂದ ಕಟ್ಟಿ ಹಾಕಿ 30 ಕೆ.ಜಿ ಚಿನ್ನಾಭರಣ ಮತ್ತು ರೂ. 4 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಶಾಖೆಯ ಅಧಿಕಾರಿಗಳು ನೀಡಿದ ದೂರನ್ನು ಆಧರಿಸಿ ಬಿಎನ್ ಎಸ್ ನ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ದರೋಡೆ ನಡೆದ ಸ್ಥಳ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಇದೇ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಕಂಪನಿಯ ಉದ್ಯೋಗಿಗಳನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆ ನಡೆದ ಸಂದರ್ಭದಲ್ಲಿ ಯಾವುದೇ ಸಿಬ್ಬಂದಿ ಅಥವಾ ಗ್ರಾಹಕರು ಗಾಯಗೊಂಡಿಲ್ಲ. ಕಂಪನಿಯ ಗ್ರಾಹಕರು ಆತಂಕ ಪಡುವ ಅಗತ್ಯ ಇಲ್ಲ. ಕಂಪನಿಯು ನಿಮ್ಮ ಸ್ವತ್ತುಗಳಿಗೆ ಜವಾಬ್ದಾರಿಯಾಗಿದ್ದು, ನಷ್ಟವನ್ನು ತುಂಬಿಕೊಡಲಿದೆ ಎಂದು ಮಣಪ್ಪುರಂ ಫೈನಾನ್ಸ್ ಪ್ರಕಟಣೆ ಮೂಲಕ ಗ್ರಾಹಕರಿಗೆ ಭರವಸೆ ನೀಡಿದೆ.