ನವದೆಹಲಿ: ಸುಮಾರು 24 ವರ್ಷಗಳಷ್ಟು ಹಳೆಯದಾದ ಮಾನನಷ್ಟ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ವಿ.ಕೆ. ಸಕ್ಸೇನಾ 2010ರಲ್ಲಿ ಈ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಧಾ ಪಾಟ್ಕರ್ ಅವರ ವಿರುದ್ಧ ಬುಧವಾರ ದೆಹಲಿ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಅನ್ನು ಹೊರಡಿಸಿತ್ತು. ಶುಕ್ರವಾರ ದೆಹಲಿ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಮೇಧಾ ಅವರನ್ನು ದೋಷಿ ಎಂದು ದೆಹಲಿ ನ್ಯಾಯಾಲಯ ಕಳೆದ ವರ್ಷ ಮೇ ತಿಂಗಳಲ್ಲಿ ಘೋಷಿಸಿತ್ತು. ನಂತರ ನ್ಯಾಯಾಲಯ, 5 ತಿಂಗಳ ಸರಳ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ ಮೊತ್ತವನ್ನು ಪಾವತಿಸುವ ಶಿಕ್ಷೆ ವಿಧಿಸಿತ್ತು. ಬಳಿಕ ಏಪ್ರಿಲ್ 8ರಂದು ನ್ಯಾಯಾಲಯವು, ಮೇಧಾ ಅವರಿಗೆ ವಿಧಿಸಿದ್ದ ಶಿಕ್ಷೆ ಮಾರ್ಪಾಡುಗೊಳಿಸಿದ ನ್ಯಾಯಾಲಯ ಜೈಲು ಶಿಕ್ಷೆಯನ್ನು ತೆರವುಗೊಳಿಸಿ ದಂಡದ ಮೊತ್ತವನ್ನೂ ಕಡಿಮೆಗೊಳಿಸಿ ಆದೇಶ ಹೊರಡಿಸಿತ್ತು.
ಆದರೆ ದಂಡದ ಮೊತ್ತವನ್ನು ಪಾವತಿಸದೆ ಮೇಧಾ ಅವರು ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಶಾಲ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು. ಮೇಧಾ ಪಾಟ್ಕರ್ ಮಾರ್ಪಾಡುಗೊಂಡ ತೀರ್ಪು ಪ್ರಕಾರ ಒಂದು ಲಕ್ಷ ರೂಪಾಯಿಯನ್ನು ದಂಡವಾಗಿ ಪಾವತಿಸಬೇಕಾಗಿತ್ತು. ಆದರೆ ಪಾವತಿ ಮಾಡಿರಲಿಲ್ಲ.