ತಮ್ಮ ಖಾಸಗಿ ಜಮೀನನಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದವರ ವಿರುದ್ಧ ಜಮೀನನಲ್ಲೇ ಕುಳಿತು ಪ್ರತಿಭಟಿಸಿದ ಇಬ್ಬರು ಮಹಿಳೆಯರ ಮೇಲೆ ಟಿಪ್ಪರ್ ಲಾರಿ ಮೂಲಕ ಮಣ್ಣು ಸುರಿದು ಜೀವಂತ ಸಮಾಧಿಗೆ ಯತ್ನಿಸಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.
ಹೌದು, ಪ್ರತಿಭಟಿಸುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಮಣ್ಣು ಸುರಿದು ಜೀವಂತ ಸಮಾಧಿ ಮಾಡುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆಯುತ್ತಿದ್ದ ವೇಳೆ ಸ್ಥಳೀಯರು ನೆರವಿಗೆ ಧಾವಿಸಿ ಮಹಿಳೆಯರನ್ನು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಕೃತ್ಯ ಎಸಗಿದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರಿಗೆ ಶೋಧ ನಡೆಸುತ್ತಿದ್ದಾರೆ. ಮಣ್ಣು ಸುರಿಯಲು ಬಳಸಿದ ಟಿಪ್ಪರ್ ವಶಕ್ಕೆ ಪಡೆದಿದ್ದಾರೆ.
ಮಮತಾ ಪಾಂಡೆ ಹಾಗೂ ಆಶಾ ಪಾಂಡೆ ಎಂಬ ಇಬ್ಬರು ಮಹಿಳೆಯರ ಜಮೀನಿನಲ್ಲಿ ಅವರದ್ದೇ ಪರಿವಾರದ ಮತ್ತೊಬ್ಬ ಸದಸ್ಯರು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ವೇಳೆ ಮಮತಾ ಹಾಗೂ ಆಶಾ ಇಬ್ಬರು ಜಮೀನನಲ್ಲಿ ಕುಳಿತು ವಿರೋಧಿಸಿ, ನಿಮ್ಮ ಜಮೀನಿಗೆ ದಾರಿಗಾಗಿ ನಮ್ಮ ಜಮೀನು ಬಲಿಕೊಡುವುದಿಲ್ಲ. ಇದು ನಮ್ಮ ಜಮೀನು, ಪುಕ್ಸಟೆ ನೀಡಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಮತಾ ಹಾಗೂ ಆಶಾ ಪಾಂಡೆ ವಿರೋಧದಿಂದ ಆಕ್ರೋಶಗೊಂಡ ಪರಿವಾರ ಸದಸ್ಯರು ಟಿಪ್ಪರ್ ಲಾರಿಯಲ್ಲಿ ರಸ್ತೆ ಮಾಡಲು ತಂದಿದ್ದ ಜಲ್ಲಿ ಕಲ್ಲು, ಮಣ್ಣನ್ನು ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಮೇಲೆ ಸುರಿದ್ದಾರೆ. ಈ ಮೂಲಕ ಜೀವಂತ ಸಮಾಧಿ ಮಾಡಲು ಯತ್ನಿಸಿದ್ದಾರೆ.
ವಿಡಿಯೋದಲ್ಲಿ, ಒರ್ವ ಮಹಿಳೆ ಅರ್ಧ ಭಾಗ ಮಣ್ಣಿನಡಿ ಸಿಲುಕಿಕೊಂಡರೆ, ಮತ್ತೊರ್ವ ಮಹಿಳೆ ಕುತ್ತಿಗೆ ವರಗೆ ಮಣ್ಣಿನಡಿ ಸಿಲುಕಿರುವುದನ್ನು ಕಾಣಬಹುದು. ಮಹಿಳೆಯರ ಕಿರುಚಾಟ ಕೇಳಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮಹಿಳೆಯರನ್ನು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಮಹಿಳೆಯರ ಆರೋಗ್ಯ ಚೇತರಿಕೆ ಕಂಡಿದೆ. ಹೀಗಾಗಿ ಸಂಜೆ ವೇಳೆಗೆ ಡಿಸ್ಚಾರ್ಜ್ ಮಾಡಲಾಗಿದೆ.
ಘಟನೆ ಕುರಿತು ಬಿಜೆಪಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್
ಘಟನೆಯ ಬಗ್ಗೆ ಕಾಂಗ್ರೆಸ್ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಮಧ್ಯಪ್ರದೇಶದ ಬಿಜೆಪಿ ಪಕ್ಷ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಮಹಿಳೆಯರ ಸುರಕ್ಷತೆಯನ್ನು ಪ್ರಶ್ನಿಸಿದೆ. ರಾಜ್ಯ ಕಾಂಗ್ರೆಸ್ ನಾಯಕರು ಕೂಡ ಘಟನೆಯ ಸಮಗ್ರ ತನಿಖೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.
“ಈ ಘಟನೆಯ ಬಗ್ಗೆ ವಿಸ್ತೃತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ನಾನು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸುತ್ತೇನೆ. ಇಂತಹ ಘಟನೆಗಳು ಪ್ರಪಂಚದ ಎದರು ಮಧ್ಯಪ್ರದೇಶ ತಲೆತಗ್ಗಿಸುವಂತೆ ಮಾಡುತ್ತದೆ.” ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಕಮಲ್ ನಾಥ್ ಹೇಳಿದ್ದಾರೆ.
ಈ ಘಟನೆಯು ಬಿಜೆಪಿ ಆಡಳಿತದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ಹೇಳಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯುವಲ್ಲಿ ಮಧ್ಯಪ್ರದೇಶ ಸರ್ಕಾರ ಪದೇ ಪದೇ ವಿಫಲವಾಗಿದೆ ಎಂದು ಪಟ್ವಾರಿ ಹೇಳಿದ್ದಾರೆ.