ಐಟಿಐ ವಿದ್ಯಾರ್ಥಿನಿಯರಿಗೆ 2 ದಿನ ಮುಟ್ಟಿನ ರಜೆ ಘೋಷಿಸಿದ ಕೇರಳ ಸರ್ಕಾರ

Most read

ತಿರುವನಂತಪುರ: ಕೈಗಾರಿಕಾ ತರಬೇತಿ ಸಂಸ್ಥೆಯ(ಐಟಿಐ) ವಿದ್ಯಾರ್ಥಿನಿಯರಿಗೆ ತಿಂಗಳಿಗೆ ಎರಡು ದಿನ ಮುಟ್ಟಿನ ರಜೆ ನೀಡುವ ಐತಿಹಾಸಿಕ ಘೋಷಣೆಯನ್ನು ಕೇರಳ ಸರ್ಕಾರ ತೆಗೆದುಕೊಂಡಿದೆ. ರಾಜ್ಯದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ಈ ನಿರ್ಧಾರವನ್ನು ಗುರುವಾರ ಪ್ರಕಟಿಸಿದ್ದಾರೆ. ದೈಹಿಕ ಶ್ರಮ ಬೇಡುವ ಬಹಳಷ್ಟು ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಅಂಶಗಳನ್ನು ಪರಿಗಣಿಸಿ ಐಟಿಐ  ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಎರಡು ದಿನಗಳ ಮುಟ್ಟಿನ ರಜೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

ಕೇರಳದ 100ಕ್ಕೂ ಅಧಿಕ ಐಟಿಐ ಕಾಲೇಜುಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಈ ರಜೆಯ ಪ್ರಯೋಜನ ಸಿಗಲಿದೆ. ಎಷ್ಟು ಮಂದಿ ವಿದ್ಯಾರ್ಥಿನಿಯರಿಗೆ ಸಹಾಯ ಆಗಬಹುದೆಂದು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.  ಕಳೆದ ವರ್ಷವೂ ಕೇರಳ ಉನ್ನತ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಿ ಆದೇಶ ಹೊರಡಿಸಿತ್ತು.

More articles

Latest article