ಜಾರ್ಖಂಡ್ನಲ್ಲಿ 19,000 ಎಕರೆ ಅನಧಿಕೃತ ಗಸಗಸೆ ಬೆಳೆ ನಾಶ

Most read

ರಾಂಚಿ: ಜಾರ್ಖಂಡ್ನಲ್ಲಿ ಕಳೆದ ಎರಡು ತಿಂಗಳಲ್ಲಿ 19,000 ಎಕರೆ ಅನಧಿಕೃತ ಗಸಗಸೆ ಬೆಳೆಯನ್ನು ಅಲ್ಲಿನ ಸರ್ಕಾರ ನಾಶಗೊಳಿಸಿದೆ. ಈ ಸಂಬಂಧ 190 ಅನಧಿಕೃತ ಗಸಗಸೆ ಬೆಳೆಗಾರರನ್ನು ಬಂಧಿಸಿ 283 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಜನವರಿಯಿಂದ ಅನಧಿಕೃತ ಗಸಗಸೆ ಬೆಳೆ ಪ್ರದೇಶವನ್ನು ಗುರುತಿಸಿ ನಾಶಪಡಿಸುವ ಅಭಿಯಾನವನ್ನು ಜಾರ್ಖಂಡ್ ಸರ್ಕಾರ ವ್ಯಾಪಕವಾಗಿ ಹಮ್ಮಿಕೊಂಡಿದೆ.

ಛತ್ರಾ, ಖುಂತಿ, ಲತೇಹರ್, ರಾಂಚಿ, ಪಲಾಮು, ಚೈಬಾಸಾ, ಸರೈಕೆಲಾ ಮತ್ತು ಹಜಾರಿಬಾಗ್ ಜಿಲ್ಲೆಗಳಲ್ಲಿ ಗಸಗಸೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಶೇ 100 ರಷ್ಟೂ ಅನಧಿಕೃತ ಗಸಗಸೆ ಬೆಳೆ ಪ್ರದೇಶವನ್ನು ನಾಶಪಡಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಭಾರತದಲ್ಲಿ ಔಷಧಿ ಉದ್ದೇಶಕ್ಕೆ ಹಾಗೂ ವೈಜ್ಞಾನಿಕ ಬಳಕೆಗೆ ಮಾತ್ರ ಗಸಗಸೆ ಬೆಳೆಯನ್ನು ಬೆಳೆಯಲು ಅನುಮತಿ ನೀಡುತ್ತದೆ. ಗಸಗಸೆ ಗಿಡದಿಂದ ಅಫೀಮು ಎಂಬ ಮಾದಕ ಪದಾರ್ಥವನ್ನು ತಯಾರಿಸಲು ಅಕ್ರಮವಾಗಿ ಜಾರ್ಖಂಡ್ ಸೇರಿದಂತೆ ಹಲವೆಡೆ ಗಸಗಸೆ ಬೆಳೆಯುತ್ತಾರೆ. ಆದರೆ ವರದಿಗಳ ಪ್ರಕಾರ ಕೇಂದ್ರ ಸರ್ಕಾರವು ಗಸಗಸೆ ಬೆಳೆ ಬೆಳೆಯಲು ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶದಲ್ಲಿ ಮಾತ್ರ ಅನುಮತಿ ನೀಡಿದೆ ಎನ್ನಲಾಗುತ್ತದೆ.

More articles

Latest article