ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ಘಟನೆ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಹದಗೆಡುತ್ತಲೇ ಇದೆ. ಭಾರತದ ವಿರುದ್ಧವಾಗಿ ದ್ವೇಷಪೂರಿತ ಹಾಗೂ ನಕಲಿ ಸುದ್ದಿ ಪ್ರಸಾರ ಮಾಡುತ್ತಿರುವ ಪಾಕಿಸ್ತಾನದ 17 ಯೂಟ್ಯೂಬ್ ಚಾನೆಲ್ ಗಳನ್ನು ಕೇದ್ರ ಸರ್ಕಾರ ನಿಷೇಧ ಮಾಡಿ ಆದೇಶ ಹೊರಡಿಸಿದೆ.
ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ದುರ್ಬಲಗೊಳಿಸುವ ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಗುರಿಯನ್ನು ಹೊಂದಿದ್ದು, ಸುಳ್ಳು ಸುದ್ದಿಗಳನ್ನು ಹರಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಮುಖ ಸುದ್ದಿ ಸಂಸ್ಥೆಗಳು ಮತ್ತು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಗೆ ಸೇರಿದ 16 ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ ಗಳನ್ನು ನಿಷೇಧಿಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ದಿ ಪಾಕಿಸ್ತಾನ್ ರೆಫರೆನ್ಸ್, ಸಮಾ ಸ್ಪೋರ್ಟ್ಸ್, ಉಜೈರ್ ಕ್ರಿಕೆಟ್, ರಾಜಿ ನಾಮಾ, ಡಾನ್ ನ್ಯೂಸ್, ಸಮಾ ಟಿವಿ, ಎಆರ್‌ವೈ ನ್ಯೂಸ್, ಬೋಲ್ ನ್ಯೂಸ್, ಜಿಯೋ ನ್ಯೂಸ್, ರಫ್ತಾರ್ ಮತ್ತು ಸುನೋ ನ್ಯೂಸ್‌ನಂತಹ ಪ್ರಮುಖ ಪಾಕಿಸ್ತಾನಿ ಸುದ್ದಿವಾಹಿನಿಗಳನ್ನು ನಿಷೇಧಿಸಲಾಗಿದೆ. ಇರ್ಷಾದ್ ಭಟ್ಟಿ, ಅಸ್ಮಾ ಶಿರಾಜಿ, ಉಮರ್ ಚೀಮಾ ಮತ್ತು ಮುನೀಬ್ ಫಾರೂಕ್‌ನಂತಹ ಪತ್ರಕರ್ತರು ನಿರ್ವಹಿಸುವ ಯೂಟ್ಯೂಬ್ ಚಾನೆಲ್ ಗಳೂ ಸಹ ಭಾರತೀಯರಿಗೆ ಅಲಭ್ಯವಾಗಿವೆ.
ಪಹಲ್ಗಾಮ್ ಉಗ್ರರ ದಾಳಿಯ ನಂತರ ಪಾಕಿಸ್ತಾನದ ಚಾನೆಲ್‌ಗಳು ತಪ್ಪು ಮಾಹಿತಿ ಮತ್ತು ಕೋಮು ಸಂಘರ್ಷವನ್ನು ಉತ್ತೇಜಿಸುಂತೆ ಸುದ್ದಿಗಳನ್ನು ಹರಡುತ್ತಿದ್ದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯದ ಶಿಫಾರಸುಗಳ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.