ನವದೆಹಲಿ : 16 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಒಕ್ಕೂಟದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಭೇಟಿಗಾಗಿ ರಷ್ಯಾದ ಕಜಾನ್ ನಗರಕ್ಕೆ ಇಂದು ಬೇಟಿ ನೀಡುತ್ತಿದ್ದಾರೆ.
ರಷ್ಯಾದ ಕಜಾನ್ ನಗರದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನೇತೃತ್ವದಲ್ಲಿ ʼಬ್ರಿಕ್ಸ್ ಶೃಂಗಸಭೆʼ ನಡೆಯಲಿದೆ.
ಜಾಗತಿಕ ಅಭಿವೃದ್ಧಿ ಕಾರ್ಯಸೂಚಿ, ಸುಧಾರಿತ ಬಹುಪಕ್ಷೀಯತೆ, ಹವಾಮಾನ ಬದಲಾವಣೆ, ಆರ್ಥಿಕ ಸಹಕಾರ, ಸಾಂಸ್ಕೃತಿಕವಾಗಿ ಜನರನ್ನು ಸಂಪರ್ಕಿಸಲು ಉತ್ತೇಜಿಸುವುದು, ಇತರ ವಿಷಯಗಳ ಕುರಿತು ಸಂವಾದ ಮತ್ತು ಚರ್ಚೆಗೆ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಲಿರುವ ಬ್ರಿಕ್ಸ್‌ನ ನಿಕಟ ಸಹಕಾರವನ್ನು ಭಾರತವು ಗೌರವಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಜುಲೈ 2024 ರಲ್ಲಿ ಮಾಸ್ಕೋದಲ್ಲಿ ನಡೆದ ವಾರ್ಷಿಕ ಶೃಂಗಸಭೆಯ ಆಧಾರದ ಮೇಲೆ, ಕಜಾನ್‌ಗೆ ನನ್ನ(ನರೇಂದ್ರ ಮೋದಿ) ಭೇಟಿಯು ಭಾರತ ಮತ್ತು ರಷ್ಯಾ ನಡುವಿನ ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ತಮ್ಮ ಕಛೇರಿಯಿಂದ ಹೊರಡಿಸಿದ ಪತ್ರದಲ್ಲಿ ಹೇಳಿದ್ದಾರೆ.