ಬೆಂಗಳೂರು ಏ.10 : 2026ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ (RR) ಪರ ಅಬ್ಬರಿಸುತ್ತಿರುವ ಬಿಹಾರದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಈಗ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಕೇವಲ 15 ವರ್ಷದ ಈ ಹುಡುಗನ ಬ್ಯಾಟಿಂಗ್ ವೈಖರಿ ಕಂಡು ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಪ್ರಸ್ತುತ ಐಪಿಎಲ್‌ನಲ್ಲಿ ವೈಭವ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಆಡಿರುವ ಕೇವಲ ನಾಲ್ಕು ಪಂದ್ಯಗಳಲ್ಲಿ ಎರಡು ಅರ್ಧಶತಕ ಒಳಗೊಂಡಂತೆ 200 ರನ್ ಸಿಡಿಸಿರುವ ವೈಭವ್, ಸದ್ಯ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ ಮತ್ತ ‘ಆರೆಂಜ್ ಕ್ಯಾಪ್’ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ಸ್ಫೋಟಕ ಆಟವು ಭಾರತ ತಂಡಕ್ಕೆ ಶೀಘ್ರವೇ ಪದಾರ್ಪಣೆ ಮಾಡಲಿದ್ದಾರೆ ಎಂಬ ಚರ್ಚೆ ಇದೆ.
ವೈಭವ್ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅನಿಲ್ ಕುಂಬ್ಳೆ, “ಸಚಿನ್ ತೆಂಡೂಲ್ಕರ್ ಅವರು 14-15 ವರ್ಷದವರಿದ್ದಾಗ ಮೈದಾನಕ್ಕೆ ಇಳಿದಾಗಲೆಲ್ಲಾ ಶತಕ ಬಾರಿಸುತ್ತಿದ್ದರು. ಈಗ ನಾವು ವೈಭವ್ ಅವರಲ್ಲಿ ಅಂತಹದ್ದೇ ಪ್ರಭಾವವನ್ನು ಕಾಣುತ್ತಿದ್ದೇವೆ. ಅವರು ಖಂಡಿತವಾಗಿಯೂ ಸರಿಯಾದ ಹಾದಿಯಲ್ಲಿದ್ದಾರೆ,” ಎಂದು ಹೊಗಳಿದ್ದಾರೆ.
ವೈಭವ್ ಅವರನ್ನು ತಕ್ಷಣವೇ ಟೀಮ್ ಇಂಡಿಯಾಗೆ ಆಯ್ಕೆ ಮಾಡಬೇಕು ಎಂಬ ಕೂಗಿನ ಬಗ್ಗೆ ಕುಂಬ್ಳೆ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ‘ಮುಂದಿನ ಎರಡು ತಿಂಗಳಲ್ಲಿ ಭಾರತಕ್ಕೆ ಆಡಬೇಕು’ ಎಂದು ಹೇಳುವುದು ಹುಡುಗನ ಮೇಲೆ ಅನಗತ್ಯ ಒತ್ತಡ ಹೇರುತ್ತದೆ. ವೈಭವ್‌ಗೆ ಈಗ ಕೇವಲ 15 ವರ್ಷ. ಇನ್ನು 10 ವರ್ಷ ಕಳೆದರೂ ಅವರಿಗೆ ಕೇವಲ 25 ವರ್ಷ ವಯಸ್ಸಿರುತ್ತದೆ. ಅವರಿಗೆ ಸಾಕಷ್ಟು ಸಮಯವಿದೆ. ಅವರು ಈ ವರ್ಷವೇ ಆಡಲಿ ಅಥವಾ ಎರಡು ವರ್ಷದ ನಂತರವೇ ಆಡಲಿ, ಅವರ ಬ್ಯಾಟಿಂಗ್ ಶೈಲಿಯ ಮೇಲೆ ಆಯ್ಕೆಗಾರರು ಈಗಾಗಲೇ ಕಣ್ಣಿಟ್ಟಿದ್ದಾರೆ ಎಂದು ಕುಂಬ್ಳೆ ತಿಳಿಸಿದ್ದಾರೆ.
ಸಚಿನ್ ದಾಖಲೆ ಮುರಿಯುವ ಸುವರ್ಣಾವಕಾಶ!
ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಅವರು 16 ವರ್ಷ 205 ದಿನಗಳ ಪ್ರಾಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಮೂಲಕ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದರು. ಒಂದು ವೇಳೆ ವೈಭವ್ ಸೂರ್ಯವಂಶಿ ಅವರು ಅಕ್ಟೋಬರ್ 2027ರ ಒಳಗೆ ಭಾರತ ತಂಡದ ಜೆರ್ಸಿ ಧರಿಸಿದರೆ, ದಶಕಗಳ ಕಾಲದ ಸಚಿನ್ ಅವರ ಈ ಐತಿಹಾಸಿಕ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.
ಪ್ರಸ್ತುತ ವೈಭವ್ ಅವರ ಫಾರ್ಮ್ ಮತ್ತು ಆತ್ಮವಿಶ್ವಾಸವನ್ನು ನೋಡಿದರೆ, ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗವೊಂದು ಆರಂಭವಾಗುವ ಮುನ್ಸೂಚನೆ ಕಾಣುತ್ತಿದೆ.

