ಶ್ರೀಲಂಕಾದಲ್ಲಿ ಭಾರಿ ಮಳೆಗೆ 12 ಮಂದಿ ಸಾವು

Most read

ಕೊಲಂಬೊ: ಶ್ರೀಲಂಕಾದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸುರಿದ ಭಾರಿ ಮಳೆಗೆ 12 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 3.30 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.  ಮೃತರ ಪೈಕಿ ಎಂಟು ಮಂದಿ ಪೂರ್ವ ಅಂಪಾರ ಜಿಲ್ಲೆಯವರು ಎಂದು ವರದಿಯಾಗಿದೆ. ನೈರುತ್ಯ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ಶ್ರೀಲಂಕಾದಲ್ಲಿ ಪ್ರತಿಕೂಲ ಹವಾಮಾನ ಸೃಷ್ಟಿಯಾಗಿದ್ದು, ಸೋಮವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಇದುವರೆಗೆ 21 ಜಿಲ್ಲೆಗಳಲ್ಲಿ 98,000 ಕುಟುಂಬಗಳ 3.30 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರದ (ಡಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ. ನಾಳೆ ಶುಕ್ರವಾರವೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶ್ರೀಲಂಕಾದ ಒಟ್ಟು ಒಂಬತ್ತು ಪ್ರಾಂತ್ಯಗಳ ಪೈಕಿ ನಾಲ್ಕು ಪ್ರಾಂತ್ಯಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ (ಎನ್‌ಬಿಆರ್‌ಐ) ಎಚ್ಚರಿಕೆ ನೀಡಿದೆ. ಪ್ರವಾಹ ಮತ್ತು ಭೂಕುಸಿತದಿಂದ 100ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. 25,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸೇನಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಅಧ್ಯಕ್ಷ ಅನುರಾ ಕುಮಾರಾ ದಿಸನಾಯಕೆ ಅವರು ಆದೇಶ ಹೊರಡಿಸಿದ್ದಾರೆ.

More articles

Latest article