ಮಂಗಳೂರು ಗ್ರಾಮಾಂತರ ಇನ್ಸ್ ಪೆಕ್ಟರ್ ಅಮಾನತ್ತಿನಿಂದ ಕರಾವಳಿಯ ಕೋಮು ಸಂಘರ್ಷ/ ಕೋಮು ಹತ್ಯೆ/ ಗುಂಪು ದಾಳಿಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಆಕ್ರೋಶಿತರಿಗೆ ಅದೊಂದು ತಾತ್ಕಾಲಿಕ ಸಾಂತ್ವನವಷ್ಟೆ. 114 ಕೋಮು ಘಟನೆಗಳಾದಾಗಲೂ ಸುಮ್ಮನಿದ್ದ ಸಚಿವ ‘ದಿನೇಶ್ ಗುಂಡೂರಾವ್ ‘ಕರ್ತವ್ಯ ಲೋಪ’ಕ್ಕೆ ಶಿಕ್ಷೆ ಏನು?- ನವೀನ್ ಸೂರಿಂಜೆ, ಪತ್ರಕರ್ತರು.
ಕುಡುಪು ಮಾಬ್ ಲಿಂಚಿಂಗ್ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಇನ್ಸ್ ಪೆಕ್ಟರ್ ರನ್ನು ಅಮಾನತ್ತು ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಪ್ರಕರಣ ಮುಚ್ಚಿಹಾಕಲು ಯತ್ನಿಸಿದ, ಸುಮೊಟೋ ಕೇಸ್ ದಾಖಲಿಸದೇ ಆರೋಪಿಗಳ ಪರ ಇರುವ ವ್ಯಕ್ತಿಯನ್ನೇ ದೂರುದಾರರನ್ನಾಗಿಸಿದ ಇನ್ಸ್ ಪೆಕ್ಟರ್ ರನ್ನು ಅಮಾನತ್ತು ಮಾಡಬೇಕು. ಅದಕ್ಕೂ ಮೊದಲು ನಿಷ್ಕ್ರಿಯ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಬೇಕು.
ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್ ಸಚಿವರಂತೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಕನಿಷ್ಠ ಯಡಿಯೂರಪ್ಪ ಕಾಲದ ಬಿಜೆಪಿಯಂತಾದರೂ ಕೆಲಸ ಮಾಡಲಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೋಮುಸಂಘರ್ಷ ಕರಾವಳಿಯಲ್ಲಿ ಮಿತಿಮೀರಿತ್ತು. ಆಗ ಯಡಿಯೂರಪ್ಪನವರು ಪೊಲೀಸ್ ಅಧಿಕಾರಿಗಳಾಗಿದ್ದ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಮತ್ತು ಗೋಪಾಲ್ ಹೊಸೂರು ಅವರನ್ನು ಕರಾವಳಿಗೆ ನಿಯೋಜಿಸಿ ‘ಕೋಮುಸಂಘರ್ಷ ನಿಗ್ರಹಿಸಿ’ ಎಂದು ಖಡಕ್ ಆದೇಶ ನೀಡಿ ಫ್ರೀ ಹ್ಯಾಂಡ್ ನೀಡಿದ್ದರು. ಬಿಜೆಪಿ ಶಾಸಕರು, ಸಚಿವರು ಒತ್ತಡ ಹಾಕಿದರೂ ಐಜಿಪಿ ಗೋಪಾಲ ಹೊಸೂರು ಮತ್ತು ಎಸ್ಪಿಯಾಗಿದ್ದ ಸುಬ್ರಹ್ಮಣ್ಯೇಶ್ವರ ರಾವ್ ಕೋಮುವಾದಿಗಳ ಹೆಡೆಮುರಿ ಕಟ್ಟಿದ್ದರು. ಈ ರೀತಿ ಕರಾವಳಿಯ ಇಡೀ ಪೊಲೀಸ್ ಇಲಾಖೆಗೆ ಕಾಯಕಲ್ಪ ನೀಡದೇ ಇದ್ದರೆ ಒಬ್ಬ ಇನ್ಸ್ ಪೆಕ್ಟರ್ ಅಮಾನತ್ತು (ಆಗಬೇಕು) ಎನ್ನುವುದು ಕೋಮುಸಂಘರ್ಷಕ್ಕೆ ಪರಿಹಾರವಲ್ಲ.
ದಿನೇಶ್ ಗುಂಡೂರಾವ್ ‘ಬ್ರಾಹ್ಮಣ ಸಮುದಾಯ’ ಕ್ಕಾಗಿ ಕೊಟ್ಟ ಸಮಯದ ಒಂದು ಶೇಕಡ ಸಮಯವನ್ನು ಕರಾವಳಿಯ ಸೌಹಾರ್ದತೆಗಾಗಿ ಕೊಟ್ಟಿದ್ದರೆ ಕರಾವಳಿ ಹೀಗೆ ಇರುತ್ತಿರಲಿಲ್ಲ. ಬ್ರಾಹ್ಮಣರ ಬೇಡಿಕೆಗಳ ಈಡೇರಿಕೆಗಾಗಿ ಎಷ್ಟು ಬಾರಿ ಬ್ರಾಹ್ಮಣರ ನಿಯೋಗವನ್ನು ದಿನೇಶ್ ಗುಂಡೂರಾವ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಗೆ ಕರೆದೊಯ್ದಿದ್ದರು ಎಂಬುದನ್ನು ಲೆಕ್ಕ ಹಾಕಬೇಕು. ಬ್ರಾಹ್ಮಣರ ಅಭಿವೃದ್ದಿ ಬಗ್ಗೆ ಮಾತನಾಡಿದಷ್ಟು ಒಂದೇ ಒಂದು ದಿನ ಕೋಮುವಾದದ ಬಗ್ಗೆ ಮಾತನಾಡಿದ್ದರೆ ಕರಾವಳಿಯ ಆಡಳಿತ ವರ್ಗಕ್ಕೆ ಸಂದೇಶ ರವಾನೆಯಾಗುತ್ತಿತ್ತು. ದಿನೇಶ್ ಗುಂಡೂರಾವ್ ಯಾರು ಎಂದು ತಿಳಿಯಲು ಅವರ ನಾಲ್ಕೇ ನಾಲ್ಕು ಭಾಷಣಗಳ ತಲೆಬರಹ ಸಾಕು.
“ಪ್ರಮುಖ ಸಾರ್ವಜನಿಕ ಹುದ್ದೆಗಳಲ್ಲಿ ಬ್ರಾಹ್ಮಣರು ಇರಬೇಕು. ಆಗ ಮಾತ್ರ ಸಮಾಜ ಸುಧಾರಣೆ ಸಾಧ್ಯ” (27 ಸೆಪ್ಟೆಂಬರ್ 2024)
“ಬ್ರಾಹ್ಮಣ ಸಮಾಜದ ವಿಚಾರ ಬಂದಾಗ ನಾವೆಲ್ಲಾ ಒಂದಾಗೋಣಾ” (24 ಜೂನ್ 2023)
“ಬ್ರಾಹ್ಮಣರ ಬಗ್ಗೆ ಮಾತನಾಡಿದರೆ ಶಾಪ ತಟ್ಟದೇ ಬಿಡುವುದಿಲ್ಲ” (05 ಫೆಬ್ರವರಿ 2023)
“ನಾನು ಬ್ರಾಹ್ಮಣರ ಎಲ್ಲಾ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತೇನೆ” (20 ಜನವರಿ 2025)
ಕರಾವಳಿಯನ್ನು ಕೋಮುಗೂಂಡಾಗಳು ಅಪೋಶನ ತೆಗೆದುಕೊಳ್ಳುವಾಗ ದಿನೇಶ್ ಗುಂಡೂರಾವ್ ಅವರು ಬೆಂಗಳೂರಿನಲ್ಲಿ ಬ್ರಾಹ್ಮಣ ಸಂಘಟನೆಗಳ ಕೆಲಸ ಮಾಡುತ್ತಿದ್ದರು. ಕರಾವಳಿಗರ ತೆರಿಗೆ ಹಣದಲ್ಲಿ ಕರಾವಳಿಗೆ ಬಂದು ಕಂಬಳ, ಅಂಜಲ್ ಮೀನೂಟ ಮಾಡಿ ಹೋಗಿದ್ದೇ ಅವರ ಸಾಧನೆ.
ದಿನೇಶ್ ಗುಂಡೂರಾವ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಅಂದರೆ 2023-2024 ರಲ್ಲಿ ಒಟ್ಟು 33 (ಅ)ನೈತಿಕ ಪೊಲೀಸ್ ಗಿರಿ ಘಟನೆಗಳು ನಡೆದಿವೆ. ದನ ಸಾಗಾಟಗಾರರ ಮೇಲೆ ಹಲ್ಲೆ ಪ್ರಕರಣಗಳು 10 ನಡೆದಿವೆ. 71 ದ್ವೇಷ ಭಾಷಣದ ಪ್ರಕರಣಗಳು ಕರಾವಳಿಯಲ್ಲಿ ದಾಖಲಾಗಿವೆ. ಇವ್ಯಾವುದಕ್ಕೂ ತನಗೂ ಸಂಬಂಧವೇ ಇಲ್ಲದಂತೆ ಇರುವುದು ಸಚಿವನೊಬ್ಬನ ‘ಕರ್ತವ್ಯ ಲೋಪ’ ಅಲ್ಲವೇ ? ಇವೆಲ್ಲದರ ಫಲಿತಾಂಶವೇ ಮಾಬ್ ಲಿಂಚಿಂಗ್ ಅಲ್ಲವೇ ? ಕೋಮು ಸಂಘರ್ಷಕ್ಕಾಗಿ ಒಬ್ಬ ಇನ್ಸ್ ಪೆಕ್ಟರ್ ಅಮಾನತ್ತಿಗೆ ಇಷ್ಟು ಪ್ರಕರಣಗಳು ದಾಖಲಾಗುವವರೆಗೆ ಕಾದಿದ್ದೇಕೆ ? ಜನರು ಗುಂಪುಗೂಡಿ ಅಮಾಯಕನೊಬ್ಬನನ್ನು ಕೊಲ್ಲುವವರೆಗೆ ಹೋಗುವ ಮನಸ್ಥಿತಿ ಹೊಂದಿರುತ್ತಾರೆ ಎಂದರೆ ಅದು ವ್ಯವಸ್ಥೆಯ ವೈಫಲ್ಯವಲ್ಲವೇ ? ಹಾಗಾಗಿಯೇ ಇನ್ಸ್ ಪೆಕ್ಟರ್ ಜೊತೆಗೆಯೇ ಸೋಮಾರಿ, ನಿಷ್ಕ್ರಿಯ ಉಸ್ತುವಾರಿ ಸಚಿವರ ಅಮಾನತ್ತು ಕೂಡಾ ಆಗಬೇಕು.
ನವೀನ್ ಸೂರಿಂಜೆ, ಪತ್ರಕರ್ತರು
ಇದನ್ನೂ ಓದಿ- ಕುಡುಪು ಗುಂಪು ಹಲ್ಲೆಯಲ್ಲಿ ಯುವಕ ಸಾವು; ಪ್ರಕರಣ ಮುಚ್ಚಿ ಹಾಕಲು ಪೊಲೀಸ್ ಆಯುಕ್ತರ ಯತ್ನ ಆರೋಪ; ತನಿಖೆಗೆ ಸಿಪಿಐ ಎಂ ಆಗ್ರಹ